ನವದೆಹಲಿ[ಆ.22]: 2007-09ರಲ್ಲಿ ವಿದೇಶಿ ನೇರ ಬಂಡವಾಳ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಎನ್‌ಡಿಟೀವಿ ಮಾಲಿಕರಾದ ಪ್ರಣಯ್‌ ರಾಯ್‌, ಅವರ ಪತ್ನಿ ರಾಧಿಕಾ ರಾಯ್‌ ಹಾಗೂ ಇತರರ ವಿರುದ್ಧ ಕೇಂದ್ರೀಯ ತನಿಖಾ ತಂಡ(ಸಿಬಿಐ) ಪ್ರಕರಣ ದಾಖಲಿಸಿಕೊಂಡಿದೆ. ಆದರೆ, ತನಿಖಾ ತಂಡದ ಆರೋಪವನ್ನು ಎನ್‌ಡಿಟೀವಿ ಸಂಸ್ಥೆ ಅಲ್ಲಗೆಳೆದಿದೆ.

ಅಲ್ಲದೆ, ಭ್ರಷ್ಟಾಚಾರ, ವಂಚನೆ ಹಾಗೂ ಪಿತೂರಿ ಆರೋಪದ ಮೇರೆಗೆ ಎನ್‌ಡಿಟೀವಿ ಮಾಜಿ ಸಿಇಒ ವಿಕ್ರಮಾದಿತ್ಯ ಚಂದ್ರ ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಸಿಬಿಐ ಕೇಸ್‌ ದಾಖಲಿಸಿಕೊಂಡಿದೆ. ಈ ಸಂಬಂಧ ಬುಧವಾರ ವಿಕ್ರಮಾದಿತ್ಯ ಚಂದ್ರ ನಿವಾಸದ ಮೇಲೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದೆ.

ಸಿಬಿಐ ದಾಖಲಿಸಿಕೊಂಡಿರುವ ಎಫ್‌ಐಆರ್‌ ಪ್ರಕಾರ, 2004-2010ರ ನಡುವೆ, ತೆರಿಗೆ ಸ್ವರ್ಗ ರಾಷ್ಟ್ರಗಳಾದ ಹಾಲೆಂಡ್‌, ಬ್ರಿಟನ್‌, ದುಬೈ, ಮಲೇಷ್ಯಾ ಹಾಗೂ ಮಾರಿಷಸ್‌ನಲ್ಲಿ ಎನ್‌ಡಿಟೀವಿ 32 ಅಂಗ ಸಂಸ್ಥೆಗಳನ್ನು ಸ್ಥಾಪಿಸಿತ್ತು. ಈ ಎಲ್ಲ ಅಂಗಸಂಸ್ಥೆಗಳು ವಿದೇಶಗಳಲ್ಲಿ ಯಾವುದೇ ಉದ್ಯಮ ಆರಂಭಿಸಿರಲಿಲ್ಲ. ಬದಲಾಗಿ ವಿದೇಶದಿಂದ ಬರುವ ನಿಧಿಯ ಆರ್ಥಿಕ ವ್ಯವಹಾರಗಳನ್ನಷ್ಟೇ ನಿರ್ವಹಿಸುತ್ತಿದ್ದವು.

ಅಲ್ಲದೆ, ಎನ್‌ಡಿಟೀವಿ ಮೂಲಕ ಸರ್ಕಾರಿ ಅಧಿಕಾರಿಗಳು ಸಹ ಈ ಸಂಸ್ಥೆಗಳಲ್ಲಿ ಹೂಡಿಕೆ ಮಾಡುತ್ತಿದ್ದರು. ಬಳಿಕ ಶೆಲ್‌ ಕಂಪನಿಗಳ ಮೂಲಕ ಈ ಹಣವನ್ನು ಸ್ಪದೇಶಕ್ಕೆ ತರಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎನ್‌ಡಿಟೀವಿ ಮೂಲಕ ಬಂಡವಾಳ ಹೂಡಿ ಅಕ್ರಮದಲ್ಲಿ ಭಾಗಿಯಾಗಿದ್ದ ಅಪರಿಚಿತ ಅಧಿಕಾರಿಗಳ ವಿರುದ್ಧವೂ ಕೇಸ್‌ ದಾಖಲಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.

ವಿದೇಶಕ್ಕೆ ಹೊರಟಿದ್ದ ಎನ್‌ಡಿಟಿವಿ ಮಾಲೀಕ ಪ್ರಣಯ್‌ ರಾಯ್‌ ದಂಪತಿಗೆ ತಡೆ!

2006ರ ನವೆಂಬರ್‌ 30ರಂದು ಲಂಡನ್‌ನಲ್ಲಿ ಎನ್‌ಎನ್‌ಪಿಎಲ್‌ಸಿ ನೆಟ್‌ವರ್ಕ್ ಅನ್ನು ಸ್ಥಾಪಿಸಿತ್ತು. ಅಲ್ಲದೆ, ಎನ್‌ಎನ್‌ಪಿಎಲ್‌ಸಿ 2009ರಲ್ಲಿ ವಿದೇಶಿ ನೇರ ಬಂಡವಾಳ ಪಡೆಯಲು ಅಗತ್ಯವಿರುವ ವಿದೇಶಿ ಹೂಡಿಕೆಗಳ ಮಂಡಳಿ(ಎಫ್‌ಐಪಿಬಿ)ಯಿಂದ ಅನುಮೋದನೆ ಪಡೆಯಿತು. ಎಫ್‌ಡಿಐ ಮೂಲಕ ಎನ್‌ಎನ್‌ಪಿಎಲ್‌ಸಿ 1100 ಕೋಟಿ ರು. ಪಡೆದಿದ್ದು, ಈ ಹಣವನ್ನು ಎನ್‌ಡಿಟೀವಿ ತನ್ನ ಅಂಗಸಂಸ್ಥೆಗಳ ಮೇಲೆ ಹೂಡಿಕೆ ಮಾಡಿ ಅಕ್ರಮ ಎಸಗಿದೆ ಎಂಬುದು ಆರೋಪ.

ಆರೋಪ ನಿರಾಧಾರ ಎಂದ ಎನ್‌ಡಿಟೀವಿ:

ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ಎನ್‌ಡಿಟೀವಿ ಸಂಸ್ಥೆ ಹಾಗೂ ಸಂಸ್ಥಾಪಕರು, ‘ನಮಗೆ ಭಾರತದ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ವಿಶ್ವಾಸವಿದೆ. ಹೀಗಾಗಿ, ಈ ನಿರ್ಣಾಯಕ ಹಂತದಲ್ಲೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮ ಮುಂದುವರಿಸುತ್ತೇವೆ. ಇಂಥ ಸುಳ್ಳು ಆರೋಪಗಳ ಮೂಲಕ ನ್ಯಾಯಯುತವಾದ ವರದಿಗಾರಿಕೆಯನ್ನು ಮೊಟಕುಗೊಳಿಸುವ ಯತ್ನವಾಗಿದೆ. ಇದು ಕಂಪನಿ ಅಥವಾ ಓರ್ವ ವ್ಯಕ್ತಿಯ ವಿರುದ್ಧದ ಹೋರಾಟವಲ್ಲ. ಪತ್ರಿಕಾ ಸ್ವಾತಂತ್ರ್ಯದ ಹೋರಾಟವಾಗಿದೆ’ ಎಂದು ಹೇಳಿದೆ.