Asianet Suvarna News Asianet Suvarna News

ಭಾಕ್ರಾ-ಬಿಯಾಸ್‌ ಮಾದರಿಯಲ್ಲಿ ಕಾವೇರಿ ಮಂಡಳಿ ರಚನೆ ಸಾಧ್ಯತೆ

ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯೆ ಕಾವೇರಿ ನೀರಿನ ಹಂಚಿಕೆಗೆ ಪಂಜಾಬ್‌ ಮತ್ತು ಹರ್ಯಾಣ ಮಧ್ಯೆ ಭಾಕ್ರಾ-ಬಿಯಾಸ್‌ ಯೋಜನೆಯ ನೀರಿನ ಹಂಚಿಕೆಗಿರುವ ಮಂಡಳಿಯ ಮಾದರಿಯಲ್ಲಿ ಕೇಂದ್ರ ಸರ್ಕಾರ ‘ಸ್ಕೀಮ್‌’ ರಚಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Cauvery Water Issue Protest In Tamilnadu

ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯೆ ಕಾವೇರಿ ನೀರಿನ ಹಂಚಿಕೆಗೆ ಪಂಜಾಬ್‌ ಮತ್ತು ಹರ್ಯಾಣ ಮಧ್ಯೆ ಭಾಕ್ರಾ-ಬಿಯಾಸ್‌ ಯೋಜನೆಯ ನೀರಿನ ಹಂಚಿಕೆಗಿರುವ ಮಂಡಳಿಯ ಮಾದರಿಯಲ್ಲಿ ಕೇಂದ್ರ ಸರ್ಕಾರ ‘ಸ್ಕೀಮ್‌’ ರಚಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕೇಂದ್ರ ಜಲಸಂಪನ್ಮೂಲ ಇಲಾಖೆಯ ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಭಾಕ್ರಾ ಬಿಯಾಸ್‌ ನಿರ್ವಹಣಾ ಮಂಡಳಿ (ಬಿಬಿಎಂಬಿ) ರೀತಿಯಲ್ಲಿ ಕಾವೇರಿ ನೀರಿನ ಹಂಚಿಕೆಗೆ ವ್ಯವಸ್ಥೆಯೊಂದನ್ನು ರೂಪಿಸಲು ಚಿಂತನೆ ನಡೆಸಿದೆ. ಇದರಲ್ಲಿ ಕಾವೇರಿ ನ್ಯಾಯಾಧಿಕರಣ ಹೇಳಿದ್ದಂತೆ ಕೇವಲ ತಂತ್ರಜ್ಞರು ಮಾತ್ರ ಇರುವುದಿಲ್ಲ, ಬದಲಿಗೆ ತಂತ್ರಜ್ಞರು ಹಾಗೂ ಅಧಿಕಾರಿಗಳಿಬ್ಬರೂ ಇರುವ ಸಾಧ್ಯತೆಯಿದೆ.

ತಾನು ಆದೇಶ ನೀಡಿದ್ದರೂ ಕಾವೇರಿ ನೀರಿನ ಹಂಚಿಕೆಗೆ ‘ಸ್ಕೀಮ್‌’ ರೂಪಿಸಲು ವಿಳಂಬ ಮಾಡುತ್ತಿದ್ದೀರೆಂದು ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರವನ್ನು ತರಾಟೆ ತೆಗೆದುಕೊಂಡಿತ್ತು. ನಂತರ, ಮೇ 3ರೊಳಗೆ ಈ ಬಗ್ಗೆ ಒಂದು ಕರಡು ರೂಪಿಸಿ ಸಲ್ಲಿಸುವಂತೆ ಸೂಚಿಸಿತ್ತು. ಕಾವೇರಿ ನೀರಿನ ಹಂಚಿಕೆಗೆ ಮಂಡಳಿಯನ್ನೇ ರಚಿಸಬೇಕಿಲ್ಲ, ಅಂತಾರಾಜ್ಯ ನದಿ ವ್ಯಾಜ್ಯಗಳ ಕಾಯ್ದೆಯ ಸೆಕ್ಷನ್‌ 6ಎ ಪ್ರಕಾರ ಸೂಕ್ತವಾದ ವ್ಯವಸ್ಥೆಯೊಂದನ್ನು ರೂಪಿಸಲು ಜಲಸಂಪನ್ಮೂಲ ಸಚಿವಾಲಯಕ್ಕೆ ಸ್ವಾತಂತ್ರ್ಯವಿದೆ ಎಂದೂ ಹೇಳಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ಪಂಜಾಬ್‌-ಹರ್ಯಾಣ ನಡುವೆ ನೀರಿನ ಹಂಚಿಕೆಗೆ ರೂಪಿಸಲಾದ ಬಿಬಿಎಂಬಿ ಮಾದರಿಯಲ್ಲಿ ಮಂಡಳಿಯೊಂದನ್ನು ರಚಿಸಲು ಸಚಿವಾಲಯ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ಕಾವೇರಿ ಮಂಡಳಿ ರಚನೆಯನ್ನು ವಿರೋಧಿಸುತ್ತಿರುವ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಅತ್ತ ತಮಿಳುನಾಡಿನ ರಾಜಕೀಯ ಪಕ್ಷಗಳು ಕಾವೇರಿ ಮಂಡಳಿ ರಚನೆಗೆ ಪಟ್ಟು ಹಿಡಿದಿವೆ. ಇನ್ನೊಂದೆಡೆ ಸುಪ್ರೀಂಕೋರ್ಟ್‌ ಕೂಡ ಈ ವಿಷಯ ಬಗೆಹರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ಈ ಹಿನ್ನೆಲೆಯಲ್ಲಿ ಇಕ್ಕಟ್ಟಿಗೆ ಸಿಲುಕಿರುವ ಕೇಂದ್ರ ಸರ್ಕಾರ ಪಂಜಾಬ್‌-ಹರ್ಯಾಣ ನಡುವೆ ಇರುವ ವ್ಯವಸ್ಥೆಯನ್ನೇ ಕರ್ನಾಟಕ-ತಮಿಳುನಾಡಿಗೂ ರೂಪಿಸುವ ಸಾಧ್ಯತೆಯಿದೆ.

ಏನಿದು ಭಾಕ್ರಾ-ಬಿಯಾಸ್‌ ಮಂಡಳಿ?

ಸಟ್ಲೆಜ್‌, ರಾವಿ ಹಾಗೂ ಬಿಯಾಸ್‌ ನದಿಗಳ ನೀರಿನ ಹಂಚಿಕೆ ಬಗ್ಗೆ ಪಂಜಾಬ್‌, ಹರ್ಯಾಣ, ರಾಜಸ್ಥಾನ, ದೆಹಲಿ ಮತ್ತು ಚಂಡೀಗಢದ ನಡುವೆ ವಿವಾದವಿತ್ತು. ಅದನ್ನು ಬಗೆಹರಿಸಲು 1966ರ ಪಂಜಾಬ್‌ ಪುನರ್‌ರಚನೆ ಕಾಯ್ದೆಯಡಿ ಕೇಂದ್ರ ಸರ್ಕಾರವು ಭಾಕ್ರಾ ಬಿಯಾಸ್‌ ನಿರ್ವಹಣಾ ಮಂಡಳಿಯನ್ನು ರಚಿಸಿದೆ. ಇದು ಭಾಕ್ರಾ ನಂಗಲ್‌ ಮತ್ತು ಬಿಯಾಸ್‌ ಅಣೆಕಟ್ಟಿನ ನೀರನ್ನು ಸಂಬಂಧಪಟ್ಟರಾಜ್ಯಗಳಿಗೆ ಹಂಚಿಕೆ ಮಾಡುತ್ತಿದೆ. ಅಷ್ಟೇ ಅಲ್ಲ, ಈ ಎರಡು ಅಣೆಕಟ್ಟುಗಳಿಂದ ಉತ್ಪಾದನೆಯಾದ ವಿದ್ಯುತ್ತನ್ನೂ ಪಂಜಾಬ್‌, ಹರ್ಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಚಂಡೀಗಢಕ್ಕೆ ಹಂಚಿಕೆ ಮಾಡುತ್ತಿದೆ. ಇದು ಒಂಭತ್ತು ಸದಸ್ಯರ ಮಂಡಳಿಯಾಗಿದ್ದು, ಒಬ್ಬ ಪೂರ್ಣಾವಧಿ ಚೇರ್ಮನ್‌ ಹಾಗೂ ಇಬ್ಬರು ಪೂರ್ಣಾವಧಿ ಸದಸ್ಯರನ್ನು ಹೊಂದಿದೆ. ಜೊತೆಗೆ ಕೇಂದ್ರ ಸರ್ಕಾರದ ಇಬ್ಬರು ಪ್ರತಿನಿಧಿಗಳು ಹಾಗೂ ನಾಲ್ಕು ರಾಜ್ಯಗಳಿಂದ ಒಬ್ಬೊಬ್ಬರು ಪ್ರತಿನಿಧಿಗಳೂ ಇದ್ದಾರೆ. ಈ ಪ್ರತಿನಿಧಿಗಳು ತಂತ್ರಜ್ಞರೂ ಆಗಿರಬಹುದು ಅಥವಾ ಅಧಿಕಾರಿಗಳೂ ಆಗಿರಬಹುದು.

ಐಪಿಎಲ್‌ ಪಂದ್ಯಗಳು ಚೆನ್ನೈನಿಂದ ಶಿಫ್ಟ್‌?

ಕಾವೇರಿ ಹೋರಾಟಗಾರರು ಬೆದರಿಕೆ ಒಡ್ಡುತ್ತಿರುವ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಇನ್ನು ನಡೆಯಬೇಕಿರುವ ಐಪಿಎಲ್‌ ಟಿ20 ಕ್ರಿಕೆಟ್‌ ಪಂದ್ಯಗಳನ್ನು ಸ್ಥಳಾಂತರ ಮಾಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಚೆನ್ನೈನಲ್ಲಿ ಇನ್ನು 6 ಪಂದ್ಯಗಳು ನಡೆಯಬೇಕಿದ್ದು, ಕೇರಳ ಅಥವಾ ಆಂಧ್ರದಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆದಿದೆ.

ಹೋರಾಟಗಾರರಿಗೆ ಲಾಠಿ: ರಜನಿ ಕಿಡಿ

ಐಪಿಎಲ್‌ ಪಂದ್ಯ ವಿರೋಧಿಸುತ್ತಿದ್ದ ಕಾವೇರಿ ಹೋರಾಟಗಾರರ ಮೇಲೆ ಪೊಲೀಸರ ಲಾಠಿ ಪ್ರಹಾರವನ್ನು ಖಂಡಿಸಿರುವ ನಟ ರಜನಿಕಾಂತ್‌, ‘ಸಮವಸ್ತ್ರದಲ್ಲಿರುವ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು ಅತಿ ಕೆಟ್ಟಹಿಂಸಾಚಾರವಾಗಿದ್ದು, ದೇಶದ ಭದ್ರತೆಗೆ ಇದು ಮಾರಕವಾಗಿರುವುದರಿಂದ ಇಂಥ ಘಟನೆಗಳ ತಡೆಗೆ ಮುಂದಾಗಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ.

Follow Us:
Download App:
  • android
  • ios