ಬೆಂಗಳೂರು(ಸೆ.07): ರೈತರ ಪ್ರತಿಭಟನೆ ನಡುವೆಯೂ ತಮಿಳುನಾಡಿಗೆ ನಿನ್ನೆ ಸಂಜೆಯಿಂದ ಕಾವೇರಿ ಹರಿಯುತ್ತಿದ್ದಾಳೆ. ಇದ್ರಿಂದ ಕಾವೇರಿ ಕೊಳ್ಳದ ರೈತರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ನಿನ್ನೆ ಸಂಜೆ ರೈತನೋರ್ವ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನೂ ಮುಂಜಾಗ್ರತ ಕ್ರಮವಾಗಿ ಮಂಡ್ಯ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ ಮಾಡಲಾಗಿದೆ. ಕೆಆರ್ಎಸ್ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮಂಡ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ನಿನ್ನೆ ಸಂಜೆಯಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದರಿಂದ ರೈತರ ಆಕ್ರೋಶ ಮತ್ತಷ್ಟು ಸ್ಫೋಟಗೊಂಡಿದೆ.
ಕಾವೇರಿ ನದಿಗೆ ಹಾರಿ ರೈತ ಆತ್ಮಹತ್ಯೆಗೆ ಯತ್ನ
ಹೌದು ತಮಿಳುನಾಡಿಗೆ ಕಾವೇರ ನೀರು ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ರೈತನೋರ್ವ ಆತ್ಮಹತ್ಯೆಗೆ ಯತ್ನಿಸಿದ. ಕೆಂಗಾಲ್ ಕೊಪ್ಪಿನ ರೈತ ಸೂರಿ ಎಂಬಾತ ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿಯಿರುವ ಕಾವೇರಿ ನದಿಗೆ ಹಾರಿದ್ದಾನೆ. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ, ಸೂರಿಯನ್ನು ರಕ್ಷಣೆ ಮಾಡಿದ್ದಾರೆ.
ಮತ್ತೆ 2 ದಿನ ಮಂಡ್ಯ ಶಾಲಾ-ಕಾಲೇಜುಗಳಿಗೆ ರಜೆ
ತೀವ್ರ ವಿರೋಧದ ನಡುವೆಯೂ ಸುಪ್ರಿಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತದೆ.ಇದ್ರಿಂದ ಮತ್ತಷ್ಟು ಸಿಟ್ಟಿಗೆದ್ದಿರುವ ರೈತರು ಇವತ್ತು ಕೂಡ ಪ್ರತಿಭಟನೆ ನಡೆಸಲಿದ್ದಾರೆ. ಜೊತೆಗೆ ಸೆಪ್ಟೆಂಬರ್ 9 ರಂದು ಕನ್ನಡಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಮಂಡ್ಯ ಜಿಲ್ಲೆ ಶಾಲಾ-ಕಾಲೇಜುಗಳಿಗೆ ಇಂದು ಮತ್ತು ನಾಳೆ ರಜೆ ಘೋಷಿಸಲಾಗಿದೆ. ಅಲ್ದೇ ಆಯಾಕಟ್ಟಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಇನ್ನೂ ನಿನ್ನೆ ಕಾವೇರಿ ಕಿಚ್ಚಿಗೆ ಮಂಡ್ಯ ಅಕ್ಷರಶಃ ಬೆಂಕಿ ಕುಂಡವಾಗಿತ್ತು. ನಿನ್ನೆ ಬೆಳಗ್ಗೆಯಿಂದಲೇ ಬೀದಿಗಿಳಿದ ರೈತರು, ರಸ್ತೆ ತಡೆ ನಡೆಸಿದ್ರು. ಕೆಲ ಲಾರಿಗಳ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ರು. ಪ್ರಧಾನಿ ಮೋದಿ, ಮಾಜಿ ಸಂಸದೆ ರಮ್ಯಾ ಪೋಸ್ಟರ್ಗಳಿಗೆ ಚಪ್ಪಲಿಯಿಂದ ಹೊಡೆದು ಸುಟ್ಟರು. ಅಲ್ದೆ ಮಂಡ್ಯದ ಲೋಕೋಪಯೋಗಿ ಕಚೇರಿಗೆ ನುಗ್ಗಿ ಹೂಕುಂಡ ಸೇರಿದಂತೆ ಹಲವು ವಸ್ತುಗಳನ್ನ ಧ್ವಂಸಗೊಳಿಸಿದ್ರು.
ಒಟ್ಟಾರೆ ರೈತರಂತೂ ಪ್ರಾಣ ಬಿಟ್ಟೇವು, ನೀರು ಬಿಡೆವು ಅಂತ ಬೀದಿಗಿಳಿದ್ದಾರೆ. ಇದೀಗ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿ ನಿನ್ನೆ ಸಂಜೆಯಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದರಿಂದ ಕಾವೇರಿ ಕಿಚ್ಚು ಮತ್ತಷ್ಟು ಜೋರಾಗುವ ಸಾಧ್ಯತೆಯಿದೆ.
