ಮಂಡ್ಯ(ಸೆ.11): ಕಾವೇರಿ ಕೊಳ್ಳದಲ್ಲಿ ಕಾವೇರಿ ಕಿಚ್ಚು ಸದ್ಯಕ್ಕಂತೂ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ದಿನದಿಂದ ದಿನಕ್ಕೆ ತೀವ್ರವಾಗುತ್ತಲೆ ಇದೆ. ವಿಭಿನ್ನ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮಂಡ್ಯಕ್ಕೆ ಆಗಮಿಸಿ ಕಾವೇರಿ ಹೋರಾಟಕ್ಕೆ ಸಾಥ್ ನೀಡಲಿದ್ದಾರೆ. 

ಅತ್ತ ತಮಿಳುನಾಡಿಗೆ ಕಾವೇರಿ ಹರಿಯುತ್ತಲೇ ಇದ್ದಾಳೆ. ಇತ್ತ ಕಾವೇರಿ ಕೊಳ್ಳದಲ್ಲಿ ಪ್ರತಿಭಟನೆ ಕಾವು ಕೂಡ ಏರುತ್ತಲೇ ಇದೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಕಾವೇರಿ ಕೊಳ್ಳದಲ್ಲಿ ಪ್ರತಿಭಟನೆಗಳು ನಡೆಯುತ್ತಲೆ ಇದೆ. ಕೆ.ಆರ್‌ಎಸ್ ಬಳಿ ರೈತರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. 

ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮಂಡ್ಯ ಜಿಲ್ಲೆಗೆ ಆಗಮಿಸಿ ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನೂ ಮಂಡ್ಯದ ಸಂಜಯ್ ಸರ್ಕಲ್ ಅಂತೂ ಕನ್ನಡಪರ ಸಂಘಟನೆಗಳ ವಿಭಿನ್ನ ಪ್ರತಿಭಟನೆಗೆ ಸಾಕ್ಷಿಯಾಗುತ್ತಲೇ ಇದೆ. ನಿನ್ನೆ ಕೂಡ ಕಾವೇರಿ ಹರಿಯ ಬಿಡೆವು ಎಂದು ಮಂಡ್ಯದ ಸಂಜಯ್ ಸರ್ಕಲ್​ನಲ್ಲಿ ಕನ್ನಡಪರ ಸಂಘಟನೆಗಳು ವಿನೂತನವಾಗಿ ಪ್ರತಿಭಟಿಸಿ, ರಸ್ತೆ ತಡೆದು ಹುರುಳಿಕಾಳು, ಕಡ್ಲೇಪುರಿ ಚಳುವಳಿ ನಡೆಸಿದರು. 

ಇತ್ತ KRS ನಲ್ಲೂ ಪ್ರತಿಭಟನೆ ಜೊರಾಗಿತ್ತು.ಡ್ಯಾಂ ಮುಂಭಾಗ ಮಂಡ್ಯ ಜಿಲ್ಲೆ ರೈತ ಮುಖಂಡ ನಂಜುಂಡೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೀತು. ಮಡಿಕೇರಿಯಿಂದಲೂ ರೈತರು ಆಗಮಿಸಿದ್ದು, ಕೊಡವ ಸಂಘಟನೆಗಳು ಕೂಡ ಹೋರಾಟಕ್ಕೆ ಸಾಥ್ ನೀಡಿದ್ದವು.

ಇನ್ನೂ ನಿನ್ನೆ ಮಧ್ಯಾಹ್ನದ ವೇಳೆಗೆ ಮೂವರು ಪ್ರತಿಭಟನಾಕಾರರು ಕೆಆರ್​ಎಸ್​ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ರು. ಅಗ್ನಿ ಶಾಮಕ ಸಿಬ್ಬಂದಿ ಇವರನ್ನು ರಕ್ಷಿಸಿದ್ದಾರೆ. 

ಮಂಡ್ಯ ಮಾತ್ರವಲ್ಲದೇ ಬೆಂಗಳೂರು.. ಮೈಸೂರು.. ಚಾಮರಾಜನಗರ ಸೇರಿದಂತೆ ರಾಜ್ಯದ ಹಲವೆಡೆಯೂ ಕಾವೇರಿ ಉಳಿಸಿ ಹೋರಾಟ ಜೋರಾಗಿದೆ. ಇನ್ನೂ ಸೆಪ್ಟೆಂಬರ್ 16ರವರೆಗೆ ಬೃಂದಾವನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.