ಬೆಂಗಳೂರು(ಸೆ.20): ತಮಿಳುನಾಡಿಗೆ ಹೆಚ್ಚುವರಿ 30 ಸಾವಿರ ಕ್ಯುಸೆಕ್ಸ್​ ನೀರು ಬಿಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶಿಸಿದ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಪ್ರತಿಭಟನೆಗಳು ಕಾವೇರುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಿಗಿ ಪೊಲೀಸ್​ ಬಂದೋಬಸ್ತ್​ ಆಯೋಜಿಸಲಾಗಿದ್ದು ಮದ್ಯ ಮಾರಾಟ ನಿಷೇಧಿಸಲಾಗಿದೆ.

ತಮಿಳುನಾಡಿಗೆ ಇನ್ನಷ್ಟು ಹೆಚ್ಚುವರಿ ನೀರು ಬಿಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶಿಸಿದ ಬೆನ್ನಲ್ಲೇ ರಾಜ್ಯದ ಕೆಲವೆಡೆ ಪ್ರತಿಭಟನೆಗಳು ಆರಂಭವಾಗಿದೆ. ವಾರದ ಹಿಂದೆ ನಡೆದ ಉಗ್ರ ಹೋರಾಟದಲ್ಲಿ ಪೊಲೀಸರು ಎಡವಿದ್ದಾಗಿದೆ. ಆದರೆ ಈ ಬಾರಿಯಾದರೂ ಎಚ್ಚರಿಕೆಯಿಂದ ಬಂದೋಬಸ್ತು ಮಾಡಲು ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್​ ಪೊಲೀಸ್​ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಇಂದು ಸುಪ್ರಿಂಕೋರ್ಟ್​ನಲ್ಲಿ ಕಾವೇರಿ ನದಿ ವಿಚಾರಣೆ ನಡೆಯಲಿದೆ. ಹೀಗಾಗಿ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ರಾಮನಗರದಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ.

ಬೆಂಗಳೂರು ನಗರದಾದ್ಯಂತ ಮಧ್ಯರಾತ್ರಿ 1ರವರೆಗೆ ಮದ್ಯ ನಿಷೇಧ ಜಾರಿ ಮಾಡಲಾಗಿದೆ. ನಿಷೇಧಾಜ್ಞೆಯನ್ನ ಮುಂದುವರಿಸಲಾಗಿದೆ. ಮಂಡ್ಯ, ಮೈಸೂರು, ರಾಮನಗರದಲ್ಲೂ ಇಂದು ಬೆಳಗ್ಗೆ 6ರಿಂದ ನಾಳೆ ಬೆಳಗ್ಗೆ 6ಗಂಟೆವರೆಗೆ ಮದ್ಯ ನಿಷೇಧವಿದೆ.

ಇನ್ನು, ಪೊಲೀಸರ ನಿಧಾನಗತಿಯ ಭದ್ರತಾ ಕ್ರಮದಿಂದ ನಂತರ ಪರಿಸ್ಥಿತಿ ಸ್ಥಿಮಿತಕ್ಕೆ ತರಲು ಗೋಲಿಬಾರ್​ ನಡೆಸಬೇಕಾಯ್ತು. ಘಟನೆಯಲ್ಲಿ ಮೂವರು ಮೃತಪಟ್ಟಿದ್ದರು. ಈ ಬಾರಿ ಹಾಗಾಗದಂತೆ ಮುಂಜಾಗ್ರತಾ ಕ್ರಮವಾಗಿ ಒಟ್ಟೂ 20 ಸಾವಿರಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿಯನ್ನು ರಾಜ್ಯಾದ್ಯಂತ ನಿಯೋಜಿಸಲಾಗಿದೆ. ಮಂಡ್ಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.