ಕಾವೇರಿ ನೀರಿನ ಸಮಸ್ಯೆಯಿಂದ ಅ. ೧ರಿಂದ ಆರಂಭವಾಗಲಿರುವ ದಸರಾ ಉತ್ಸವಕ್ಕೂ ತೊಂದರೆಯಾಗುವ ಸಾಧ್ಯತೆ

ಮೈಸೂರು(ಸೆ.21): ಕಾವೇರಿ ನದಿಯಿಂದ ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಕೃಷಿ, ಕುಡಿಯುವ ನೀರು, ದಸರಾ ಮಹೋತ್ಸವ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೂ ಕರಿನೆರಳು ಬೀರಲಿದೆ.

ಕಾವೇರಿ ಕಣಿವೆಯಲ್ಲಿ ಕೆಆರ್‌ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಿವೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಿಗೆ ಮಾತ್ರವಲ್ಲದೇ ರಾಜ್ಯದ ರಾಜಧಾನಿ ಬೆಂಗಳೂರಿಗೂ ಕುಡಿಯುವ ನೀರನ್ನು ಈ ಜಲಾಶಯಗಳಿಂದಲೇ ಪೂರೈಸಲಾಗುತ್ತದೆ. ಇದಲ್ಲದೇ ಕಬಿನಿ ಜಲಾಶಯದ ಹಿನ್ನೀರಿನ ಅಕ್ಕಪಕ್ಕ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳು ವ್ಯಾಪಿಸಿಕೊಂಡಿದೆ. ಅಲ್ಲಿರುವ ವನ್ಯಪ್ರಾಣಿಗಳಿಗೂ ಕುಡಿಯುವ ನೀರಿಗೆ ಕಬಿನಿಯೇ ಆಧಾರ.

ಸಕ್ಕರೆ ನಾಡು ಮಂಡ್ಯ ಕಬ್ಬು ಹಾಗೂ ಬತ್ತದ ಬೆಳೆಗೆ ಹೆಸರುವಾಸಿ. ಬರದಿಂದಾಗಿ ಕಳೆದ ಬಾರಿಯೂ ಕೆಆರ್‌ಎಸ್ ಜಲಾಶಯ ಭರ್ತಿಯಾಗಲಿಲ್ಲ. ವರ್ಷಕ್ಕೆರಡು ಬಾರಿ ತುಂಬುವ ಖ್ಯಾತಿಯ ಹಾಗೂ ತಮಿಳುನಾಡು ನೀರಿಗಾಗಿ ಕ್ಯಾತೆ ಮಾಡಿದಾಗಲೆಲ್ಲ ಬಿಡುಗಡೆ ಮಾಡಲು ತೊಟ್ಟಿಯಂತೆ ಬಳಕೆಯಾಗುವ ಕಬಿನಿ ಜಲಾಶಯವೂ ಭರ್ತಿಯಾಗಲಿಲ್ಲ. ಈ ಬಾರಿಯಂತೂ ಕಳೆದ ಬಾರಿಗಿಂತಲೂ ಕೆಟ್ಟ ಪರಿಸ್ಥಿತಿ. ಕೃಷಿಗಿರಲಿ, ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ. ಸರಿಯಾಗಿ ಮಳೆಯಾಗಿಲ್ಲ. ಹಾಲಿ ಜಲಾಶಯಗಳಲ್ಲಿ ಇರುವ ನೀರು ಮುಂದಿನ ಮಳೆಗಾಲದವರೆಗೆ ಕುಡಿಯುವ ನೀರಿಗೂ ಸಾಕಾಗುವುದಿಲ್ಲ. ಇದೇ ಕಾರಣದಿಂದ ಈ ಬಾರಿ ಕೃಷಿಗೆ ನೀರು ಬಿಡುಗಡೆ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿತ್ತು. ಸತತ ಎರಡನೇ ವರ್ಷ ಬರಗಾಲದ ದವಡೆಗೆ ಸಿಲುಕಿರುವ ಅನ್ನದಾತರು ಎಕರೆಗೆ ₹೨೫ ಸಾವಿರ ಪರಿಹಾರ ಕೇಳುತ್ತಿದ್ದಾರೆ. ಅತ್ತ ನೀರು ಇಲ್ಲ, ಇತ್ತ ಪರಿಹಾರವೂ ಇಲ್ಲದಿದ್ದಲ್ಲಿ ಅನ್ನದಾತರು ಮತ್ತಷ್ಟು ಕಂಗಲಾಗುತ್ತಾರೆ.

ಕಾವೇರಿ ಕಣಿವೆಯಲ್ಲಿ ಪೂರ್ಣ ಬಿತ್ತನೆಯಾಗಿಲ್ಲ. ಬಿತ್ತನೆಯಾಗಿರುವ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಸುಪ್ರೀಂ ಕೋರ್ಟ್ ಆದೇಶದ ಪಾಲನೆಗಾಗಿ ರಾಜ್ಯ ಸರ್ಕಾರ ನೀರು ಬಿಡುಗಡೆ ಮಾಡಿರುವುದರಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಪೂರೈಕೆಯ ಮೇಲೆ ಆಗುವುದು ನಿಶ್ಚಿತ.

ದಸರೆಯ ಮೇಲೆ ಪರಿಣಾಮ

ಈ ಹಿಂದೆ ಎಸ್. ಬಂಗಾರಪ್ಪ, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕಾವೇರಿ ನದಿ ನೀರು ಹಂಚಿಕೆಯ ವಿಚಾರದಲ್ಲಿ ಹೊರ ಬಿದ್ದ ಕಾವೇರಿ ನ್ಯಾಯಾಧಿಕರಣ, ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಆಯಾ ವರ್ಷ ದಸರೆಯ ಆಚರಣೆಗೆ ಅಡ್ಡಿ, ಆತಂಕಗಳು ಎದುರಾಗಿದ್ದವು. ದಸರೆಗೆ ಮಾರ್ಗ ಬಂದ್ ಮಾಡುವುದಾಗಿ ಮಂಡ್ಯ ಜಿಲ್ಲಾ ರೈತ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಇದಲ್ಲದೇ ಕನ್ನಡದ ವರನಟ ಡಾ. ರಾಜ್‌ಕುಮಾರ್ ಅಪಹರಣ, ಮಾಜಿ ಸಚಿವ ಎಚ್. ನಾಗಪ್ಪ ಅಪಹರಣ ಪ್ರಕರಣ ನಡೆದಾಗಲೂ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗಿ. ದಸರೆಗೆ ಅಡ್ಡಿಯಾಗಿತ್ತು. ರಾಜ್ಯದಲ್ಲಿ ಬರ, ಸೂರತ್‌ನಲ್ಲಿ ಪ್ಲೇಗ್ ಕಾಣಿಸಿಕೊಂಡಾಗ, ಮಹಾರಾಷ್ಟ್ರದ ಲಾತೂರ್‌ನಲ್ಲಿ ಭೂಕಂಪ ಸಂಭವಿಸಿದಾಗ ದಸರೆಗೆ ಅಡ್ಡಿಯಾಗಿತ್ತು.

ಈಗಲೂ ಅಷ್ಟೇ. ಮಂಡ್ಯ ರೈತರು ಪ್ರತಿಭಟನೆ ನಿಲ್ಲಿಸದಿದ್ದಲ್ಲಿ ಬೆಂಗಳೂರು- ಮೈಸೂರು ನಡುವೆ ಸುಗಮ ಸಂಚಾರ ಸಾಧ್ಯವಾಗುವುದೇ ಇಲ್ಲ. ಈ ಬಾರಿಯ ದಸರಾ ಮಹೋತ್ಸವ ಅ.೧ ರಿಂದ ೧೧ ರವರೆಗೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ.

ಕಳೆದ ಬಾರಿ ಅನ್ನದಾತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ದಸರೆಯನ್ನು ಸರಳವಾಗಿ ಆಚರಿಸಲಾಗಿತ್ತು. ಬಹುತೇಕ ಕಾರ್ಯಕ್ರಮಗಳು ರದ್ದಾಗಿದ್ದವು. ಈ ಬಾರಿ ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗದಿದ್ದರೂ ಸಾಂಪ್ರದಾಯಿಕವಾಗಿ ದಸರೆಯನ್ನು ಆಚರಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ₹೧೪.೨೫ ಕೋಟಿಗಳನ್ನು ನಿಗದಿ ಮಾಡಲಾಗಿತ್ತು. ಈಗ ಇದನ್ನು ₹೧೧ ಕೋಟಿಗಳಿಗೆ ಇಳಿಸಲಾಗಿದೆ. ರಾಜ್ಯ ಸರ್ಕಾರ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸುತ್ತಿರುವುದರಿಂದ ಪ್ರವಾಸೋದ್ಯಮ ಮತ್ತಷ್ಟು ಗರಿಗೆದರಬಹುದು ಎಂದು ಹೋಟೆಲ್‌ಗಳು, ಪ್ರವಾಸಿ ಏಜೆಂಟರು ಸೇರಿದಂತೆ ಸಂಬಂಧಿತ ಎಲ್ಲಾ ವಲಯದ ಜನ ಸಂತಸದಿದ್ದರು. ಹೀಗಿರುವಾಗ ಸುಪ್ರೀಂ ತೀರ್ಪು ಬರಸಿಡಿಲಿನಂತೆ ಬಂದೆರಗಿದೆ.

ಪ್ರವಾಸೋದ್ಯಮಕ್ಕೆ ಹೊಡೆತ

ದಸರೆಗೆ ಆರಂಭಕ್ಕೆ ಹತ್ತು ದಿನಗಳು ಮಾತ್ರ ಬಾಕಿ ಉಳಿದಿರುತ್ತವೆ. ಇಂಥ ಸಂದರ್ಭದಲ್ಲಿ ಸೆ.೨೧ ರಿಂದ ಮತ್ತೆ ಕಾವೇರಿ ಕಣಿಮೆಯಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುವ ಎಲ್ಲ ಲಕ್ಷಣಗಳು ಕಂಡು ಬಂದಿವೆ. ಈಗಾಗಲೇ ನಡೆದಿರುವ ಸರಣಿ ಬಂದ್‌ಗಳ ಹಿನ್ನೆಲೆಯಲ್ಲಿ ಪ್ರವಾಸಿಗರು ಬರುತ್ತಿಲ್ಲ. ಮೈಸೂರಿನಲ್ಲಿ ವಾರಾಂತ್ಯದಲ್ಲಿ ಹೋಟೆಲ್‌ಗಳ ೨,೫೦೦ ಕೊಠಡಿಗಳು ಭರ್ತಿಯಾಗುತ್ತಿದ್ದವು. ದಸರೆ ಸಂದರ್ಭದಲ್ಲಿ ಹೌಸ್‌ಫುಲ್. ಆದರೆ, ಈಗ ಖಾಲಿ ಹೊಡೆಯುತ್ತಿವೆ. ಹೊರ ರಾಜ್ಯಗಳ ಪ್ರವಾಸಿಗರು ಬಂದಲ್ಲಿ ಶೇ.೩೦ ರಷ್ಟು ರಿಯಾಯ್ತಿ ನೀಡಲು ಹೋಟೆಲ್‌ಗಳವರು ಮುಂದಾಗಿದ್ದಾರೆ.

- ಅಂಶಿ ಪ್ರಸನ್ನಕುಮಾರ್ ಮೈಸೂರು