* ಸ್ಪೇನ್'ನಿಂದ ಸಿಡಿದುಬಿದ್ದ ಕತಲೂನಿಯಾ* ಸ್ವತಂತ್ರ ರಾಷ್ಟ್ರವೆಂದು ಘೋಷಣೆ ಮಾಡಿಕೊಂಡ ಕತಲೋನಿಯಾ* ಕತಲೂನಿಯಾವನ್ನು ಕಾನೂನು ಪ್ರಕಾರವಾಗಿ ಮರಳಿ ವಶಕ್ಕೆ ತೆಗೆದುಕೊಳ್ಳಲು ಸ್ಪೇನ್ ಸಂಕಲ್ಪ

ಬಾರ್ಸಿಲೋನಾ(ಅ. 27): ಸ್ಪೇನ್'ನ ಸ್ವಾಯತ್ತ ಸಂಸ್ಥಾನವಾಗಿದ್ದ ಕತಲೋನಿಯಾ ಈಗ ಸ್ವಾತಂತ್ರ್ಯ ಘೋಷಿಸಿಕೊಂಡಿದೆ. ಕತಲೂನಿಯಾದ ಜನಪ್ರತಿನಿಧಿಗಳು ಬಹುಮತಗಳ ಮೂಲಕ ಸ್ವಾತಂತ್ರ್ಯ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ, ಕತಲೂನಿಯಾದ ಸ್ವಾತಂತ್ರ್ಯಕ್ಕೆ ಸ್ಪೇನ್ ಮಾನ್ಯತೆ ಕೊಟ್ಟಿಲ್ಲ. ಕತಲೂನಿಯಾವನ್ನು ಕಾನೂನು ಪ್ರಕಾರವಾಗಿ ತಮ್ಮ ಸುಪರ್ದಿಗೆ ಪಡೆದುಕೊಳ್ಳಲಾಗುವುದು ಎಂದು ಸ್ಪೇನ್'ನ ಕೇಂದ್ರ ಸರಕಾರ ಹೇಳಿದೆ.

ಕತಲೂನಿಯಾದ ಸ್ವಾತಂತ್ರ್ಯ ಘೋಷಣೆಯಿಂದ ಯಾರೂ ತಾಳ್ಮೆ ಕಳೆದುಕೊಳ್ಳಬೇಡಿ. ಕಾನೂನನ್ನು ಅಲ್ಲಿ ಮರಳಿ ಸ್ಥಾಪಿಸಲಾಗುವುದು. ಅಲ್ಲಿಯವರೆಗೆ ಶಾಂತತೆ ಕಾಪಾಡಿ ಎಂದು ಸ್ಪೇನ್ ಪ್ರಧಾನಿ ಮಾರಿಯಾನೋ ರಜೋಯ್ ಮನವಿ ಮಾಡಿಕೊಂಡಿದ್ದಾರೆ.

ಸ್ಪೇನ್'ನ ಕಾನೂನು ಪ್ರಕಾರ ಯಾವುದೇ ಪ್ರಾಂತ್ಯವಾದರೂ ಸ್ವಾತಂತ್ರ್ಯ ಘೋಷಣೆ ಮಾಡಿಕೊಳ್ಳಲು ಅಧಿಕಾರವಿಲ್ಲ. ಕತಲೂನಿಯಾದ ಸ್ವಾತಂತ್ರ್ಯ ಘೋಷಣೆಗೆ ಅಲ್ಲಿಯ ಸಂಸತ್'ನಲ್ಲಿಯೇ ಅಭಿಪ್ರಾಯಭೇದ ಏರ್ಪಟ್ಟಿದೆ. ಕತಲೂನಿಯಾದ ವಿಪಕ್ಷಗಳು ಸ್ವಾತಂತ್ರ್ಯ ಘೋಷಣೆಗೆ ಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ, ಆಡಳಿತಾರೂಢ ಸರಕಾರವು ಮಂಡಿಸಿದ ಸ್ವಾತಂತ್ರ್ಯ ಘೋಷಣೆಯ ನಿರ್ಣಯದ ಪರವಾಗಿ 70 ಮತಗಳು ಬಿದ್ದರೆ, ವಿರುದ್ಧವಾಗಿ 10 ವೋಟ್'ಗಳು ಬಂದಿವೆ. ಇಬ್ಬರು ಮತದಾನದಲ್ಲಿ ಪಾಲ್ಗೊಳ್ಳಲೇ ಇಲ್ಲ. ಸ್ವಾತಂತ್ರ್ಯ ಘೋಷಣೆಯ ನಿರ್ಧಾರವನ್ನು ಕತಲೂನಿಯಾದ ವಿಪಕ್ಷಗಳು ಪ್ರಜಾತಂತ್ರದ ಕರಾಳ ದಿನವೆಂದು ಖಂಡಿಸಿವೆ.

ಸ್ಪೇನ್'ನಲ್ಲಿ ಮೊದಲಿಂದಲೂ ಸ್ವಾಯತ್ತ ಸಂಸ್ಥಾನವಾಗಿರುವ ಕತಲೂನಿಯಾದಲ್ಲಿ ಬಾರ್ಸಿಲೋನಾ, ಗಿರೋನಾ, ಲೀಡಾ ಮತ್ತು ಟರ್ರಗೋನಾ ಎಂಬ 4 ಪ್ರಾಂತ್ಯಗಳಿವೆ. ಅಲ್ಲಿ ಒಟ್ಟು 74 ಲಕ್ಷ ಜನಸಂಖ್ಯೆ ಇದೆ.