Asianet Suvarna News Asianet Suvarna News

ಖಾಕಿಗೂ ಮುಟ್ಟಿದೆ ’ಜಾತಿ’ ಬಿಸಿ; ಪೊಲೀಸರ ಜಾತಿ ಕೇಳ್ತಿದೆ ಜಾತ್ಯಾತೀತವಾದಿ ಸಿದ್ದರಾಮಯ್ಯ ಸರ್ಕಾರ

 ಹಿಂದುಳಿದ ವರ್ಗಗಳ ಆಯೋಗ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೂ ಗೊತ್ತಿಲ್ಲದಂತೆ ಯಾವ ಠಾಣೆ, ವೃತ್ತ ಕಚೇರಿ, ಉಪ ವಿಭಾಗ ಹಾಗೂ ಘಟಕದಲ್ಲಿ ಯಾವ್ಯಾವ ಜಾತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ಕಲೆಹಾಕಿದೆ.

Caste Politics in Police Department

ಬೆಂಗಳೂರು (ಮಾ.22): ಹಿಂದುಳಿದ ವರ್ಗಗಳ ಆಯೋಗ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೂ ಗೊತ್ತಿಲ್ಲದಂತೆ ಯಾವ ಠಾಣೆ, ವೃತ್ತ ಕಚೇರಿ, ಉಪ ವಿಭಾಗ ಹಾಗೂ ಘಟಕದಲ್ಲಿ ಯಾವ್ಯಾವ ಜಾತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ಕಲೆಹಾಕಿದೆ.

ಚುನಾವಣೆ ಆಯೋಗದ ಸೂಚನೆಯಂತೆ ವರ್ಗಾವಣೆ ಪ್ರಕ್ರಿಯೆಗೆ ಸಿದ್ಧತೆ ನಡೆದಿರುವ ವೇಳೆ ಸರ್ಕಾರದ ಈ ಜಾತಿ ಲೆಕ್ಕಾಚಾರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.  ಹಿಂದುಳಿದ ವರ್ಗಗಳ ಆಯೋಗದ ಸೂಚನೆ ಮೇರೆಗೆ ಮಾಹಿತಿ ಪಡೆದಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಆಯೋಗದ ಅಧ್ಯಕ್ಷರನ್ನು ಪ್ರಶ್ನಿಸಿದರೆ 2016ರಲ್ಲೇ ಯಾವ್ಯಾವ ಪ್ರವರ್ಗದ ಜನರು ಸರ್ಕಾರಿ ಹುದ್ದೆಗಳಲ್ಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಈಗ ಯಾವ ಕಾರಣಕ್ಕೆ ಸಂಗ್ರಹಿಸಲಾಗುತ್ತಿದೆ ಎಂಬುದು ತಿಳಿದಿಲ್ಲ. ಆಯೋಗಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶೀಘ್ರದಲ್ಲೇ ಚುನಾವಣೆ ದಿನಾಂಕ ಪ್ರಕಟವಾಗಲಿದ್ದು, ಮೇನಲ್ಲಿ ಎಲೆಕ್ಷನ್ ನಡೆಯುವ ಸಾಧ್ಯತೆ ಇರುವುದರಿಂದ ಚುನಾವಣಾ ಆಯೋಗ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. 3 ವರ್ಷದಿಂದ ಒಂದೇ ಸ್ಥಳದಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆಗೊಳಿಸುವಂತೆ ಚುನಾವಣಾ ಆಯೋಗ ಸೂಚನೆ ಕೊಟ್ಟಿರುವ ಸಂದರ್ಭದಲ್ಲೇ ಜಾತಿ ವಿವರ ಸಂಗ್ರಹಿಸಿರುವುದೇಕೆಂಬ ಪ್ರಶ್ನೆ ಅಧಿಕಾರಿ/ಸಿಬ್ಬಂದಿಯ ತಲೆಕೊರೆಯುತ್ತಿದೆ.

ಕೇಂದ್ರ ಕಚೇರಿಯಲ್ಲೇ ಸಿಗುತ್ತೆ
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಡಿಜಿಪಿ ಪ್ರಧಾನ ಕಚೇರಿಯಲ್ಲಿ ಪ್ರತ್ಯೇಕ ಮಾನವ ಸಂಪನ್ಮೂಲ ನಿರ್ವಹಣೆ ವಿಭಾಗ (ಎಚ್​ಆರ್​ಎಂ) ಇದೆ. ಪೊಲೀಸ್ ಇಲಾಖೆಯಲ್ಲಿರುವ ಒಟ್ಟಾರೆ ಅಧಿಕಾರಿ, ಸಿಬ್ಬಂದಿ ಸಂಖ್ಯೆ, ಅವರ ವೈಯಕ್ತಿಕ ವಿವರ, ನೇಮಕಾತಿ ದಿನಾಂಕ, ಜಾತಿ/ಉಪ ಜಾತಿ, ಸೇವಾ ಜ್ಯೇಷ್ಠತೆ ಸೇರಿ ನೇಮಕಾತಿ ಸಂದರ್ಭದಲ್ಲಿ ಪಡೆದಿರುವ ಎಲ್ಲ ಮಾಹಿತಿ ಸಂಗ್ರಹಿಸಿಡಲಾಗಿದೆ. ಬೇಕಿದ್ದರೆ ಅಲ್ಲಿಂದಲೇ ಮಾಹಿತಿ ಪಡೆಯಬಹುದಿತ್ತು. ಆದರೆ, ಯಾವ ಅಧಿಕಾರಿ/ಸಿಬ್ಬಂದಿ ಎಲ್ಲಿದ್ದಾರೆ ಎಂಬ ನಿಖರ ಮಾಹಿತಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಖುದ್ದು ಆಯಾ ಘಟಕದ ಮುಖ್ಯಸ್ಥರಿಂದಲೇ ಮಾಹಿತಿ ಸಂಗ್ರಹಿಸಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
 

ಧರ್ಮ ವಿಭಜನೆಯ ಪರಿಣಾಮ ತಿಳಿಯಲು?
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದರೆ ಚುನಾವಣೆ ಸಂದರ್ಭದಲ್ಲಿ ಇಲಾಖೆಯಲ್ಲಿರುವ ಲಿಂಗಾಯತ-ವೀರಶೈವ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವ ರೀತಿ ಪ್ರತಿಕ್ರಿಯಿಸಬಹುದು? ಯಾವ ಘಟಕ/ವಿಭಾಗದಲ್ಲಿ ಹೆಚ್ಚು ಲಿಂಗಾಯತ ಅಧಿಕಾರಿ, ಸಿಬ್ಬಂದಿ ಇದ್ದಾರೆ? ಅವರು ಆ ಭಾಗದ ಜನರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಬಹುದು ಎಂದು ತಿಳಿದುಕೊಳ್ಳುವ ಲೆಕ್ಕಾಚಾರದಿಂದಲೂ ಸರ್ಕಾರ ಜಾತಿ ವಿವರ ಸಂಗ್ರಹಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಒಂದೇ ದಿನದಲ್ಲಿ ಮಾಹಿತಿ ಸಂಗ್ರಹ
ಮಾ.14ರಂದು ಡಿಜಿಪಿ ಕಚೇರಿಯಿಂದ ಮುಖ್ಯಸ್ಥರಿಗೆ ಫ್ಯಾಕ್ಸ್ ಸಂದೇಶ ಕಳುಹಿಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದಾಖಲಾತಿ ಹಾಗೂ ಸರ್ಕಾರದ ಪತ್ರಗಳಲ್ಲಿರುವಂತೆ 2018ರ ಫೆ.28ರವರೆಗೆ ಆಯಾ ವ್ಯಾಪ್ತಿಯ ಠಾಣೆ, ವೃತ್ತ ಕಚೇರಿ, ಉಪ ವಿಭಾಗ ಹಾಗೂ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಎ, ಬಿ, ಸಿ ಮತ್ತು ಡಿ ವರ್ಗಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಜಾತಿವಾರು ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಅದೇ ದಿನ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕೆಂದು ಸೂಚಿಸುವ ಮುಖಾಂತರ ಮಾಹಿತಿ ತರಿಸಿಕೊಳ್ಳಲಾಗಿದೆ.

ಸಾಧ್ಯತೆಗಳು
ಎಲೆಕ್ಷನ್ ಹಿನ್ನೆಲೆ ವರ್ಗಾವಣೆಗೆ ಜಾತಿ ಪರಿಗಣಿಸಿ ಆಯಕಟ್ಟಿನ ಜಾಗಕ್ಕೆ ವರ್ಗ
ವೀರಶೈವ- ಲಿಂಗಾಯತ ಧರ್ಮ ಪ್ರತ್ಯೇಕದ ಕುರಿತು ಅಭಿಪ್ರಾಯ ಸಂಗ್ರಹ
ಜಾತಿ ಆಧಾರದ ಮೇಲೆ ಮತದಾರರ ಓಲೈಸಿಕೊಳ್ಳಲು ಬಳಸುವ ಸಾಧ್ಯತೆ
ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿ ಪರಿಗಣಿಸುವುದಕ್ಕಾಗಿ

58 ಜಾತಿಗಳ ಅಧಿಕಾರಿ/ಸಿಬ್ಬಂದಿ
ಒಟ್ಟು 58 ಜಾತಿ/ಉಪ ಜಾತಿಗಳ ಅಧಿಕಾರಿ/ಸಿಬ್ಬಂದಿ ಕರ್ತವ್ಯದಲ್ಲಿರುವ ಮಾಹಿತಿ ತಲುಪಿದೆ ಎಂದು ಗೊತ್ತಾಗಿದೆ. ಡಿಜಿಪಿ ಕಚೇರಿಯಿಂದಲೇ ಫ್ಯಾಕ್ಸ್ ಸಂದೇಶ ಕಳುಹಿಸಿದ್ದು, ಯಾವುದೇ ಕಾರಣ ತಿಳಿಸದೆ ಇದೇ ಮೊದಲ ಬಾರಿಗೆ ಜಾತಿವಾರು ಮಾಹಿತಿ ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
 

Follow Us:
Download App:
  • android
  • ios