ನವದೆಹಲಿ: ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ರಮ್ಯಾ ವಿರುದ್ಧ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ  ನ್ಯಾಯಾಂಗ ನಿಂದನೆ ದಾವೆ ದಾಖಲಾಗಿದೆ.

ಸಿಜೆಐ ದೀಪಕ್ ಮಿಶ್ರಾ ಕುರಿತು ರಮ್ಯಾ ಮಾಡಿದ್ದ ಟ್ವೀಟ್ ಆಧಾರದಲ್ಲಿ ಈ ಅರ್ಜಿ ದಾಖಲಾಗಿದೆ. 

ಸಿಜೆಐ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಲ್ಲಿಸಿದ್ದ ಗೊತ್ತುವಳಿಯನ್ನು ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿದ ಬಳಿಕ ರಮ್ಯಾ ನೀಡಿದ್ದ ಹೇಳಿಕೆಗಳು ಮತ್ತು ಟ್ವೀಟ್‌ಗಳು ನ್ಯಾಯಾಂಗದ ವಿರುದ್ಧವಾಗಿವೆ ಎಂದು ಅರ್ಜಿದಾರ ಅರುಣ್ ಕುಮಾರ್ ಪ್ರತಿಪಾದಿಸಿದ್ದಾರೆ. 

ವಾಗ್ದಂಡನೆ ಗೊತ್ತುವಳಿಗೆ ಸಂಬಂಧಿಸಿ ಸಿಜೆಐ ವಿರುದ್ಧ ರಮ್ಯಾ ಹಲವು ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆಪಾದಿಸಲಾಗಿದೆ.