ಅಮೆಝಾನ್‌ ಸಂಸ್ಥೆಯ ವಕ್ತಾರರ ಪ್ರಕಾರ, ನೋಟು ರದ್ದು ಆದ ಬಳಿಕ ಗ್ರಾಹಕರ ಮನೆ ಬಾಗಿಲಲ್ಲೇ ಇ ಪಾವತಿ ವಿಧಾನ ಸುಮಾರು 10 ಪಟ್ಟು ವೃದ್ಧಿಯಾಗಿದೆಯಂತೆ.
- ಕೃಷ್ಣಮೋಹನ ತಲೆಂಗಳ, ಕನ್ನಡಪ್ರಭ
ಭಾರತೀಯ ಗ್ರಾಹಕರು ಸೂಕ್ಷ್ಮಮತಿಗಳು. ದೇಶದಲ್ಲಿ ಈ ಕಾಮರ್ಸ್ ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಯಾದರೂ ಆನ್ಲೈನ್ ವ್ಯವಹಾರ ಮಾಡುವಾಗ ನೆಟ್'ಬ್ಯಾಂಕ್ ಪಾವತಿಗಿಂತಲೂ ಕ್ಯಾಶ್ ಆನ್ ಡೆಲಿವರಿ (ಉತ್ಪನ್ನ ಮನೆ ಬಾಗಿಲಿಗೆ ತಲುಪಿದ ಮೇಲೆ ದುಡ್ಡು ಪಾವತಿಸುವುದು) ಅಥವಾ ‘ಸಿಒಡಿ' ಪಾವತಿ ವಿಧಾನವನ್ನೇ ಹೆಚ್ಚು ವಿಶ್ವಾಸಾರ್ಹ ಎಂದು ನಂಬಿದ್ದಾರೆ. ಆದರೆ, ನ.8ರಂದು ರೂ.500, ರೂ.1 ಸಾವಿರ ನೋಟು ರದ್ದಾದ ಬಳಿಕ ಈ ನಂಬಿಕೆಗೆ ಪೆಟ್ಟು ಬಿದ್ದಿದೆ. ಮನೆ ಬಾಗಿಲಿಗೆ ಉತ್ಪನ್ನ ಬಂದರೂ ಪಾವತಿಸಲು ಚಿಲ್ಲರೆ ಇಲ್ಲ ಎಂಬ ವಾಸ್ತವದಿಂದಾಗಿ ಈ ಕಾಮರ್ಸ್ ಸಂಸ್ಥೆಗಳು ತಕ್ಷಣಕ್ಕೆ ಕ್ಯಾಶ್ ಆನ್ ಡೆಲಿವರಿ ಸೇವೆಯನ್ನೇ ಸ್ಥಗಿತಗೊಳಿಸಬೇಕಾಗಿ ಬಂತು.
ಆದರೆ, ಇದರಿಂದಾಗಿ ಕ್ಯಾಶ್ ಆನ್ ಡೆಲಿವರಿ ಇಷ್ಟಪಡುವ ಗ್ರಾಹಕರು ಚಿಂತೆ ಮಾಡಬೇಕಾಗಿಲ್ಲ. ಕ್ಯಾಶ್ ಆನ್ ಡೆಲಿವರಿ ಆಯ್ಕೆಯಲ್ಲೇ ನೀವು ದುಡ್ಡನ್ನು ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಲು ಬಹುತೇಕ ಸಂಸ್ಥೆಗಳು ಅವಕಾಶ ಮಾಡಿಕೊಟ್ಟಿವೆ. ಈ ವಿಧಾನ ಇತ್ತೀಚೆಗೆ ಜನಪ್ರಿಯವೂ ಆಗುತ್ತಿದೆ. ನೀವು ಆನ್'ಲೈನ್ನಲ್ಲಿ ಬುಕ್ ಮಾಡಿದ ಉತ್ಪನ್ನವನ್ನು ಡೆಲಿವರಿ ಬಾಯ್ ಮನೆ ಬಾಗಿಲಿಗೆ ತಂದಾಗ ಆತನಲ್ಲಿ ಸ್ವೈಪಿಂಗ್ ಮೆಷಿನ್ ತರಲು ಹೇಳಿ. ಅದರ ಮೂಲಕ ಪಾವತಿ ಮಾಡುವ ವಿಧಾನವೇ ಕಾರ್ಡ್ ಆನ್ ಡೆಲಿವರಿ. ಇದರಿಂದ ಕೈಯ್ಯಲ್ಲಿ ಸಾಕಷ್ಟು ದುಡ್ಡು ಇರಿಸಬೇಕಾದ ತಲೆಬಿಸಿಯೂ ಇಲ್ಲ, ಚಿಲ್ಲರೆ ಸಮಸ್ಯೆಯೂ ತಪ್ಪಿತು!
ದೇಶದಲ್ಲಿ 400 ಮಿಲಿಯನ್(40 ಕೋಟಿ)ಗಿಂತಲೂ ಅಧಿಕ ಡೆಬಿಟ್/ಕ್ರೆಡಿಟ್ ಕಾರ್ಡ್ ಇದ್ದರೂ ಆನ್'ಲೈನ್ ಖರೀದಿ ವೇಳೆ ನಗದನ್ನೇ ಬಳಸಲು ಭಾರತೀಯ ಗ್ರಾಹಕರು ಇಷ್ಟಪಡುತ್ತಾರೆ. ಈಗ ಬದಲಾದ ಸನ್ನಿವೇಶದಲ್ಲಿ ಇ-ಕಾಮರ್ಸ್ ರಂಗದ ಸಂಸ್ಥೆಗಳು ಗ್ರಾಹಕರಿಗೆ ಕಾರ್ಡಿನಲ್ಲೇ ಪಾವತಿಗೆ ಅವಕಾಶ ಕಲ್ಪಿಸುತ್ತಿವೆ.
ನೋಟು ರದ್ದಾದ ಬಳಿಕ ಕೊಲ್ಕೊತ್ತಾದ ಝೈಕಾ ಹೆಸರಿನ ಆಹಾರ ಸರಬರಾಜು ಸಂಸ್ಥೆಯೊಂದರ ವ್ಯವಹಾರ ಶೇ.50ರಷ್ಟುಕುಸಿತ ಕಂಡಿದ್ದು, ಇದೀಗ ಕಾರ್ಡ್ ಆನ್ ಡೆಲಿವರಿಯ ಉತ್ತೇಜನದ ಬಳಿಕ ಮತ್ತೆ ಸುಧಾರಿಸಿದೆ. ಗ್ರಾಹಕರೂ ಸಂತುಷ್ಟರಾಗಿದ್ದಾರೆ, ಅವರಾಗಿಯೇ ಮತ್ತೆ ಆರ್ಡರ್'ಗಳನ್ನು ನೀಡುತ್ತಿದ್ದಾರೆ ಎನ್ನುತ್ತಾರೆ ಮುಖ್ಯ ಚೆಫ್ ಸುನಿಲ್ ಮನೋಹರಿ. ಈ ವ್ಯವಸ್ಥೆ ಜನಪ್ರಿಯವಾಗಲು ಇ ಕಾಮರ್ಸ್ ಸಂಸ್ಥೆಗಳವರು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಲಾಜಿಸ್ಟಿಕ್ ಪಾಲುದಾರರಿಗೆ ಮೊಬೈಲ್ ಪಾಯಿಂಟ್ ಆಫ್ ಸೇಲ್ (ಎಂಪಿಒಎಸ್) ಉಪಕರಣ ಪೂರೈಸಬೇಕು. ಗ್ರಾಹಕರು ಈ ಉಪಕರಣದಲ್ಲಿ ತಮ್ಮ ಕಾರ್ಡ್ ಉಜ್ಜುವ ಮೂಲಕ ಪಾವತಿ ಮಾಡಬಹುದು. ಈ ವ್ಯವಸ್ಥೆ ಮೂಲಕ ಕಂತುಗಳಲ್ಲಿ ಉತ್ಪನ್ನಗಳನ್ನು ಖರೀದಿಸಲು ಅವಕಾಶವಿದೆ. 2015ರ ಜೂನ್ನಲ್ಲಿ ಫ್ಲಿಪ್'ಕಾರ್ಟ್ ಪೇ ಆನ್ ಡೆಲಿವರಿ ಸೇವೆ ಆರಂಭಿಸಿತ್ತು. ಇದೀಗ ಸ್ನಾಪ್ಡೀಲ್, ಅಮೆಝಾನ್'ನಂತಹ ದೈತ್ಯ ಸಂಸ್ಥೆಗಳೂ ಕ್ಯಾಶ್ ಆನ್ ಡೆಲಿವರಿ ವೇಳೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಲು ಅವಕಾಶ ಕಲ್ಪಿಸಿವೆ.
ವ್ಯವಹಾರ ಕುಸಿದಿತ್ತು: ರೂ. 500, 1000 ಮುಖಬೆಲೆಯ ನೋಟು ರದ್ದಾದ ಬಳಿಕ ಇ-ಕಾಮರ್ಸ್ ರಂಗದಲ್ಲಿ ಕ್ಯಾಶ್ ಆನ್ ಡೆಲಿವರಿ ಮೂಲಕ ಆನ್'ಲೈನ್ ಖರೀದಿಯ ಪ್ರಮಾಣ ಶೇ.50ರಷ್ಟುಕುಸಿತ ಕಂಡಿತ್ತು, ಅಥವಾ ಆರ್ಡರ್ ವಾಪಸ್ ಬರುತ್ತಿತ್ತು. ಒಂದು ಸರ್ವೇ ಪ್ರಕಾರ, ದೇಶದ ಶೇ. 55-60ರಷ್ಟು ಆನ್'ಲೈನ್ ಖರೀದಿ ವ್ಯವಹಾರ ಕ್ಯಾಶ್ ಆನ್ ಡೆಲಿವರಿ ಮೂಲಕವೇ ನಡೆಯುತ್ತಿದೆ. ಆನ್'ಲೈನ್ ಮಾರುಕಟ್ಟೆ ದೈತ್ಯರು ಇದಕ್ಕಾಗಿಯೇ ಕ್ರೆಡಿಟ್ ಕಾರ್ಡ್ ಆನ್ ಡೆಲಿವರಿ ವಿಧಾನದಲ್ಲಿ ಪಾವತಿಗೆ ಉತ್ತೇಜನ ನೀಡುತ್ತಿದೆ. ಸ್ನಾಪ್ಡೀಲ್ ಹಾಗೂ ಫ್ಲಿಪ್'ಕಾರ್ಟ್ ಆನ್ಲೈನ್ ಪಾವತಿ ಖರೀದಿಗೆ ರಿಯಾಯಿತಿ ಹಾಗೂ ಶೂನ್ಯ ದರದ ಇಎಂಐ ಯೋಜನೆಗಳನ್ನು ಘೋಷಿಸಿದೆ. ಅಮೆಝಾನ್ ಸಂಸ್ಥೆಯ ವಕ್ತಾರರ ಪ್ರಕಾರ, ನೋಟು ರದ್ದು ಆದ ಬಳಿಕ ಗ್ರಾಹಕರ ಮನೆ ಬಾಗಿಲಲ್ಲೇ ಇ ಪಾವತಿ ವಿಧಾನ ಸುಮಾರು 10 ಪಟ್ಟು ವೃದ್ಧಿಯಾಗಿದೆಯಂತೆ.
‘ಕಾರ್ಡ್ ಆನ್ ಡೆಲಿವರಿ' ಹೇಗೆ?: ಆನ್'ಲೈನ್ನಲ್ಲಿ ನಿಮ್ಮ ಆರ್ಡರ್ ಬುಕ್ ಮಾಡುವಾಗ, ಪಾವತಿ ಆಯ್ಕೆ ಬರುವಾದ ‘ಪೇ ಬೈ ಕ್ಯಾಶ್ ಆನ್ ಡೆಲಿವರಿ' ಆರಿಸಿಕೊಳ್ಳಿ. ಬಳಿಕ ನಿಗದಿತ ದಿನದೊಳಗೆ ಲಾಜಿಸ್ಟಿಕ್ ಸಂಸ್ಥೆ ಮೂಲಕ ಆರ್ಡರ್ ನಿಮ್ಮನ್ನು ತಲಪುತ್ತದೆ. ಮನೆ ಬಾಗಿಲಿಗೆ ಆರ್ಡರ್ ಬರುವ ಮೊದಲು, ನಿಮ್ಮನ್ನು ಫೋನ್'ನಲ್ಲಿ ಸಂಪರ್ಕಿಸುವ ಡೆಲಿವರಿ ಬಾಯ್ ಬಳಿ ಕಾರ್ಡ್ ಆನ್ ಡೆಲಿವರಿ ಮೂಲಕ (ಸ್ವೈಪಿಂಗ್ ಮೆಶಿನ್ ತರುವಂತೆ) ಪಾವತಿಸುವುದಾಗಿ ತಿಳಿಸಬೇಕು. ಅದರಂತೆ ಉತ್ಪನ್ನದ ಜೊತೆಗೆ ಸ್ವೈಪಿಂಗ್ ಮೆಶಿನ್ ತಂದಾಗ ನಿಮ್ಮ ಕಾರ್ಡನ್ನು ಮೆಶಿನ್'ಗೆ ಉಜ್ಜುವ ಮೂಲಕ, ಬಳಿಕ ನಾಲ್ಕಂಕಿ ಪಿನ್ ನಮೂದಿಸುವ ಮೂಲಕ ಸುಲಭವಾಗಿ ಹಾಗೂ ಸುರಕ್ಷಿತವಾಗಿ ಪಾವತಿ ಮಾಡಬಹುದು.
ನೆನಪಿಟ್ಟುಕೊಳ್ಳಿ
* ಕಾರ್ಡ್ ಆನ್ ಡೆಲಿವರಿ ವೇಳೆ ಕಾರ್ಡ್ ಸ್ವೈಪ್ ಮಾಡಿದ ಬಳಿಕ ಪಿನ್ನ್ನು ನೀವೇ ಒತ್ತಿ, ಇತರರಿಗೆ ಆ ಅಂಕಿ ತಿಳಿಸಬೇಡಿ.
* ಪಾವತಿಗೆ ಸ್ಥಳದಲ್ಲೇ ನೀಡುವ ರಶೀದಿ ಪಡೆದುಕೊಳ್ಳಿ, ಅದರಲ್ಲಿ ನಮೂದಾಗಿರುವ ಮೊತ್ತವನ್ನು ಖಾತರಿಪಡಿಸಿಕೊಳ್ಳಿ.
* ಆನ್ಲೈನ್ ಭದ್ರತೆಗೋಸ್ಕರ ನಿಮ್ಮ ಡೆಬಿಟ್ ಕಾರ್ಡ್ ಪಾಸ್ವರ್ಡ್ನ್ನು ಆಗಿಂದಾಗ್ಗೆ ಬದಲಾಯಿಸುತ್ತಾ ಇರಿ.
ಅನುಕೂಲತೆಗಳೇನು?
* ಕ್ಯಾಶ್/ಕಾರ್ಡ್ ಆನ್ ಡೆಲಿವರಿ ವಿಧಾನ ಅನುಕೂಲತೆಯೆಂದರೆ ಆರ್ಡರ್ ಬುಕ್ ಮಾಡುವ ವೇಳೆ ಪಾವತಿ ಮಾಡಬೇಕೆಂದಿಲ್ಲ.
* ಆರ್ಡರ್ ಕೈಸೇರಿದ ಬಳಿಕವಷ್ಟೇ ಪಾವತಿ ಮಾಡುವುದರಿಂದ ಮಾರಾಟಗಾರರ ವಿಶ್ವಾಸಾರ್ಹತೆ ಹೆಚ್ಚುತ್ತದೆ.
* ಕಾರ್ಡ್ ಆನ್ ಡೆಲಿವರಿ ಮಾಡುವುದರಿಂದ ಚಿಲ್ಲರೆ ಸಮಸ್ಯೆಯೇ ಬರುವುದಿಲ್ಲ. ವ್ಯವಹಾರ ಸಲೀಸಾಗುತ್ತದೆ.
(epaper.kannadaprabha.in)
