Asianet Suvarna News Asianet Suvarna News

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಶುರು : ಹೇಗಿದೆ ಪ್ರಕ್ರಿಯೆ

ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಪ್ರಕಟಿಸಬೇಕಾದ ಹಿನ್ನೆಲೆಯಲ್ಲಿ ಬಿಜೆಪಿಯು ಜಿಲ್ಲಾವಾರು ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸುವ ಮೂಲಕ ಅಧಿಕೃತ ಕಸರತ್ತು ಆರಂಭಿಸಿದೆ.

Candidate Selection Start In BJP

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಪ್ರಕಟಿಸಬೇಕಾದ ಹಿನ್ನೆಲೆಯಲ್ಲಿ ಬಿಜೆಪಿಯು ಜಿಲ್ಲಾವಾರು ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸುವ ಮೂಲಕ ಅಧಿಕೃತ ಕಸರತ್ತು ಆರಂಭಿಸಿದೆ.

ಬುಧವಾರದಿಂದ ಸಭೆ ಆರಂಭವಾಗಿದ್ದು, ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರರಾವ್‌, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಅರವಿಂದ್‌ ಲಿಂಬಾವಳಿ, ಎನ್‌.ರವಿಕುಮಾರ್‌, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್‌ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ಈ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಆಧರಿಸಿ ಕ್ಷೇತ್ರವಾರು ವರದಿ ಸಿದ್ಧಪಡಿಸಿ ಪಕ್ಷದ ವರಿಷ್ಠರಿಗೆ ಸಲ್ಲಿಸಲಾಗುತ್ತದೆ. ನಂತರ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಒಂದು ವಿಧಾನಸಭಾ ಕ್ಷೇತ್ರದ ಬಗ್ಗೆ ಸ್ಥಳೀಯ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ ಮುಖಂಡರು, ಯಾರನ್ನು ಅಭ್ಯರ್ಥಿಗಳನ್ನಾಗಿ ಮಾಡಿದರೆ ಗೆಲ್ಲಬಹುದು? ಜಾತೀ ಸಮೀಕರಣ ಏನು? ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಯಾರೆಲ್ಲ ಕಣಕ್ಕಿಳಿಯಬಹುದು? ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಯಾರ ಪರವಾದ ಒಲವು ಬಂದಿದೆ ಎಂಬಿತ್ಯಾದಿ ಅಂಶಗಳ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ಗುರುವಾರ ಮತ್ತು ಶನಿವಾರ ಮೂರು ದಿನಗಳ ಕಾಲ ನಡೆಯಲಿದೆ. ಮೊದಲ ದಿನವಾದ ಬುಧವಾರ ಬೆಂಗಳೂರು ನಗರ, ಕಲಬುರ್ಗಿ ನಗರ, ಕಲಬುರ್ಗಿ ಗ್ರಾಮಾಂತರ, ಬೀದರ್‌, ಯಾದಗಿರಿ, ಬಳ್ಳಾರಿ, ರಾಯಚೂರು, ಕೊಪ್ಪಳ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಮುಖಂಡರ ಸಭೆ ನಡೆಯಿತು.

ಎರಡನೆಯ ದಿನವಾದ ಗುರುವಾರ ಬೆಂಗಳೂರು ನಗರ ಜಿಲ್ಲೆ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಧಾರವಾಡ, ಧಾರವಾಡ ಗ್ರಾಮೀಣ, ಗದಗ ಜಿಲ್ಲೆಗಳ ಮುಖಂಡರ ಸಭೆ ನಡೆಯಲಿದೆ. ಶುಕ್ರವಾರ ಸಭೆ ಇರುವುದಿಲ್ಲ. ಮತ್ತೆ ಶನಿವಾರ ಕೊಡಗು, ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ. ಮಂಡ್ಯ, ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಸಭೆ ನಿಗದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಸಭೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮೂರು ದಿನಗಳ ಕಾಲ ಪ್ರತಿ ಕ್ಷೇತ್ರದ ಅಭಿಪ್ರಾಯ ಪಡೆಯುತ್ತೇವೆ. ಎಲ್ಲ ಮುಗಿದ ನಂತರ ಜಿಲ್ಲಾ ಮುಖಂಡರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಕೊಡುತ್ತೇವೆ. ಅಮಿತ್‌ ಶಾ ಅವರು ತಾವು ನಡೆಸಿರುವ ಸಮೀಕ್ಷೆ ಮತ್ತು ಈ ಅಭಿಪ್ರಾಯ ಎಲ್ಲವನ್ನೂ ಆಧರಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.

Follow Us:
Download App:
  • android
  • ios