ಲಕ್ನೋ : ಉತ್ತರ ಪ್ರದೇಶದಲ್ಲಿ ಬಿಜೆಪಿ ಮೈತ್ರಿ ಪಕ್ಷವಾಗಿರುವ ಅಪ್ನಾ ದಳ್  ಎಚ್ಚರಿಕೆ ಸಂದೇಶವೊಂದನ್ನು ರವಾನೆ ಮಾಡಿದೆ. ಬಿಜೆಪಿ ಮೈತ್ರಿಯಲ್ಲಿ ಪಾಲುದಾರಿಕೆ ಹೊಂದಿರುವ ಅತ್ಯಂತ ಪುಟ್ಟ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. 

ಕೇಂದ್ರ ಹಾಗೂ ಉತ್ತರ ಪ್ರದೇಶದ ಆಡಳಿತ ಪಕ್ಷ ತನ್ನ ವರ್ತನೆ ಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದಲ್ಲಿ ನಾವು ಬದಲಾಗಬೇಕಾಗುತ್ತದೆ. ಪಕ್ಷ ಯಾವುದೇ ಸಂದರ್ಭದಲ್ಲಿ  ಗಂಭೀರ ನಿರ್ಧಾರ ಕೈಗೊಳ್ಳಬಹುದು ಅಥವಾ ತೆಗೆದುಕೊಳ್ಳುತ್ತದೆ ಎಂದು ಪಕ್ಷದ ಅಧ್ಯಕ್ಷ ಆಶಿಶ್ ಪಟೇಲ್ ಹೇಳಿದ್ದಾರೆ. 

ಬಿಜೆಪಿಗೆ ಬಿಗ್ ಶಾಕ್: NDA ಮೈತ್ರಿಕೂಟದಿಂದ ಮತ್ತೊಂದು ಪಕ್ಷ ಔಟ್..!

2014ರಿಂದಲೂ ಕೂಡ ನಮ್ಮ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮುನ್ನಡೆಯುತ್ತಿದ್ದೇವೆ.  ಧರ್ಮ ಸಮ್ಮತವಾಗಿ ಮೈತ್ರಿಯನ್ನು ಪ್ರಮಾಣಿಕವಾಗಿ ಮುಂದುವರಿಸಿಕೊಂಡು ಸಾಗುತ್ತಿದ್ದೇವೆ. ಆದರೆ ಉತ್ತರ ಪ್ರದೇಶದಲ್ಲಿ ಮೈತ್ರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂದು ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ್ದಾರೆ. 

ನಿಮ್ಮ ನಡೆ ಬದಲಾಯಿಸಿಕೊಳ್ಳದೇ ಹೋದಲ್ಲಿ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದುಕೊಂಡಿರುವ ತನ್ನ ಪಕ್ಷದ ನಾಯಕಿ ಅನುಪ್ರಿಯಾ ಪಟೇಲ್ ಯಾವುದೇ ನಿರ್ಧಾರ ಕೈಗೊಳ್ಳಲು ಸಿದ್ಧರಿದ್ದಾರೆ. ಅವರ ನಿರ್ಧಾರಕ್ಕೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. 

ಈ ಹೇಳಿಕೆಗಳು ನಮ್ಮ ಬೆದರಿಕೆಯಲ್ಲ. ಬದಲಾಗಿ ಇದು ಇದು ನಮ್ಮ ಕೋರಿಕೆ. ರಾಜ್ಯದಲ್ಲಿ ಸರ್ಕಾರ ದಲಿತರು ಹಾಗೂ ಹಿಂದುಳಿದ ವರ್ಗದವ ಬಗ್ಗೆ ತಮ್ಮ ನಡೆಯನ್ನು ಬದಲಾಯಿಸಿಕೊಳ್ಳುವುದು ಅಗತ್ಯ ಎಂದಿದ್ದಾರೆ.

ಈಗಾಗಲೇ RLSP ಟಿಡಿಪಿ NDA ಮೈತ್ರಿಯಿಂದ ಹಿಂದೆ ಸರಿದು ವಿಪಕ್ಷಗಳೊಂದಿಗೆ ಕೈ ಜೋಡಿಸಿವೆ. ಇದೇ ಸಂದರ್ಭದಲ್ಲಿ ಮತ್ತೊಂದು ಪಕ್ಷವೂ ಕೂಡ ಎಚ್ಚರಿಕೆ ಸಂದೇಶ ರವಾನಿಸಿದೆ.