ನವದೆಹಲಿ[ಮೇ.30]: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಲು ಸಂಸದರು ತುದಿಗಾಲಿನಲ್ಲಿ ನಿಂತಿರುವಾಗಲೇ ಹಾಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ತಾವಾಗಿಯೇ ರೇಸ್‌ನಿಂದ ಹೊರನಡೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಹೊಸ ಸರ್ಕಾರದಲ್ಲಿ ತಾವು ಸಚಿವರಾಗಲು ಬಯಸುವುದಿಲ್ಲ ಎಂದು ಪ್ರಕಟಿಸಿದ್ದಾರೆ.

ನೂತನ ಸರ್ಕಾರದ ಪ್ರಮಾಣವಚನಕ್ಕೆ ಒಂದು ದಿನ ಮುನ್ನ ಅಂದರೆ ಬುಧವಾರ ಪ್ರಧಾನಿ ಮೋದಿ ಅವರಿಗೆ ಈ ಕುರಿತು ಪತ್ರವೊಂದನ್ನು ಬರೆದಿರುವ ಅವರು, ಅದನ್ನು ಟ್ವೀಟರ್‌ನಲ್ಲೂ ಪ್ರಕಟಿಸಿದ್ದಾರೆ. ತಮ್ಮನ್ನು ಯಾವ ರೀತಿಯ ಅನಾರೋಗ್ಯ ಕಾಡುತ್ತಿದೆ ಎಂಬುದನ್ನು ಅವರು ಪತ್ರದಲ್ಲಿ ಬಹಿರಂಗಪಡಿಸಿಲ್ಲ. ಸರ್ಕಾರ ಹಾಗೂ ಪಕ್ಷಕ್ಕೆ ಎಲ್ಲ ವಿಧದಲ್ಲೂ ಅನೌಪಚಾರಿಕವಾಗಿ ತಮ್ಮ ಬೆಂಬಲವಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪತ್ರದ ಸಾರಾಂಶ:

‘ಕಳೆದ 18 ತಿಂಗಳಿನಿಂದ ಹಲವಾರು ಗಂಭೀರ ಆರೋಗ್ಯ ಸವಾಲುಗಳನ್ನು ಎದುರಿಸಿದ್ದೇನೆ. ಆ ಪೈಕಿ ಬಹುತೇಕ ಸವಾಲುಗಳಿಂದ ನಾನು ಹೊರಬರುವಂತೆ ವೈದ್ಯರು ನೋಡಿಕೊಂಡಿದ್ದಾರೆ. ಚುನಾವಣಾ ಪ್ರಚಾರ ಮುಗಿಸಿ ತಾವು (ಮೋದಿ) ಕೇದಾರನಾಥಕ್ಕೆ ಹೊರಟಿದ್ದಾಗ ಮೌಖಿಕವಾಗಿ ನಾನೊಂದು ವಿಷಯ ತಿಳಿಸಿದ್ದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನನಗೆ ವಹಿಸಲಾಗಿದ್ದ ಜವಾಬ್ದಾರಿಗಳನ್ನು ನಿರ್ವಹಿಸಲು ನಾನು ಯಶಸ್ವಿಯಾಗಿದ್ದೇನಾದರೂ, ಭವಿಷ್ಯದಲ್ಲಿ ಒಂದಿಷ್ಟುಸಮಯ ಜವಾಬ್ದಾರಿಯಿಂದ ದೂರ ಇರುತ್ತೇನೆ. ಚಿಕಿತ್ಸೆ ಹಾಗೂ ಆರೋಗ್ಯದ ಮೇಲೆ ಗಮನಕೇಂದ್ರೀಕರಿಸಲು ನನಗೆ ಇದರಿಂದ ಅನುಕೂಲವಾಗುತ್ತದೆ ಎಂದೂ ಹೇಳಿದ್ದೆ. ನನಗಾಗಿ, ನನ್ನ ಚಿಕಿತ್ಸೆಗಾಗಿ ಹಾಗೂ ನನ್ನ ಆರೋಗ್ಯಕ್ಕಾಗಿ ಒಂದಿಷ್ಟುಸಮಯ ಪಡೆಯಲು ಅನುವು ಮಾಡಿಕೊಡಬೇಕು ಎಂದು ಅಧಿಕೃತವಾಗಿ ಈ ಮೂಲಕ ಕೋರಿಕೊಳ್ಳುತ್ತೇನೆ. ಹೀಗಾಗಿ ಸದ್ಯದ ಮಟ್ಟಿಗೆ ಹೊಸ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ಹೊರುವುದಿಲ್ಲ’ ಎಂದು ವಿವರಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರದ ಭಾಗವಾಗಿದ್ದು ನನಗೆ ಹೆಮ್ಮೆಯ ಸಂಗತಿ ಹಾಗೂ ಕಲಿಕಾ ಅನುಭವ. ಮೊದಲ ಎನ್‌ಡಿಎ ಸರ್ಕಾರದಲ್ಲೂ ಪಕ್ಷ ನನಗೆ ಜವಾಬ್ದಾರಿ ವಹಿಸಿತ್ತು. ಪ್ರತಿಪಕ್ಷದಲ್ಲಿದ್ದಾಗಲೂ ಹೊಣೆಗಾರಿಕೆ ನೀಡಿತ್ತು ಎಂದು ಸ್ಮರಿಸಿದ್ದಾರೆ.

ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಅರುಣ್‌ ಜೇಟ್ಲಿ ಅವರು ತೂಕ ಕಡಿಮೆ ಮಾಡಿಕೊಳ್ಳಲು 2014ರ ಸೆಪ್ಟೆಂಬರ್‌ನಲ್ಲಿ ಬೇರಿಯಾಟ್ರಿಕ್‌ ಸರ್ಜರಿ ಮಾಡಿಸಿಕೊಂಡಿದ್ದರು. 2018ರ ಮೇ 14ರಂದು ದೆಹಲಿಯ ಏಮ್ಸ್‌ನಲ್ಲಿ ಅವರು ಮೂತ್ರಪಿಂಡ ಕಸಿ ಚಿಕಿತ್ಸೆಗೆ ಒಳಗಾಗಿದ್ದರು. ಇದೇ ವರ್ಷ ಜ.22ರಂದು ಅಮೆರಿಕದಲ್ಲಿ ಎಡಗಾಲಿನ ಮೃದು ಅಂಗಾಂಶ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು. ಆರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾದ ದಿನದಂದೇ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಆದ ಕಾರಣ ಸರ್ಕಾರದ ಸಂಭ್ರಮಾಚರಣೆಯಲ್ಲೂ ಅವರು ಭಾಗಿಯಾಗಿರಲಿಲ್ಲ.