ನಾನು ಮತ್ತು ಕುಮಾರಸ್ವಾಮಿ ಅವರು ಚೆನ್ನಾಗಿಯೇ ಇದ್ದೀವಿ. ನಾವಿಬ್ಬರು ಬೇರೆ ಆಗಿಲ್ಲ. ಒಂದೇ ಕುಟುಂಬದ ರೀತಿಯಲ್ಲಿ ಇದ್ದೇವೆ. ಸಾಯೋ ತನಕ ಅವರ ಹೆಸರು ನನ್ನ ಹೆಸರಿನಿಂದ ಬೇರೆ ಆಗಲ್ಲ...

ಬೆಂಗಳೂರು(ಜು.30): ನಾನು ಮತ್ತು ಕುಮಾರಸ್ವಾಮಿ ಅವರು ಚೆನ್ನಾಗಿಯೇ ಇದ್ದೀವಿ. ನಾವಿಬ್ಬರು ಬೇರೆ ಆಗಿಲ್ಲ. ಒಂದೇ ಕುಟುಂಬದ ರೀತಿಯಲ್ಲಿ ಇದ್ದೇವೆ. ಸಾಯೋ ತನಕ ಅವರ ಹೆಸರು ನನ್ನ ಹೆಸರಿನಿಂದ ಬೇರೆ ಆಗಲ್ಲ.

ಹೀಗೆ ಹೇಳಿದ್ದು ನಟಿ ರಾಧಿಕಾ ಕುಮಾರಸ್ವಾಮಿ. ಅರ್ಜುನ್ ಸರ್ಜಾ, ಜೆಡಿ ಚಕ್ರವರ್ತಿ ಅವರು ನಟಿಸುತ್ತಿರುವ ‘ಕಾಂಟ್ರಾಕ್ಟ್’ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ನಾಯಕಿ. ಈ ಚಿತ್ರದ ಚಿತ್ರೀಕರಣದ ಭಾಗವಾಗಿ ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರಿಗೆ ‘ನಿಮ್ಮ ಹೆಸರಿನ ಜತೆಗೆ ಕುಮಾರಸ್ವಾಮಿ ಹೆಸರು ಬರೆಯಬಹುದೇ? ನೀವು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಒಟ್ಟಿಗೆ ಇದ್ದೀರಾ?’ ಎನ್ನುವ ಪ್ರಶ್ನೆ ಎದುರಾಯಿತು.

ಅದಕ್ಕೆ ಉತ್ತರಿಸಿದ ರಾಧಿಕಾ, ನೋಡಿ ನಾನು ಮತ್ತು ಅವರು (ಎಚ್‌ಡಿ ಕುಮಾರಸ್ವಾಮಿ) ದೂರ ಆಗಿದ್ದೇವೆ ಅಂತ ಹೇಳಿದ್ದು ಯಾರು? ನಾವು ಹೇಳಿದ್ವಾ? ಎಲ್ಲವನ್ನೂ ನೀವೇ ನಿರ್ಧರಿಸದ್ದೀರಿ. ನಾನು ಬೆಂಗಳೂರಿನಲ್ಲಿ ಇಲ್ಲ, ಲಂಡನ್‌ನಲ್ಲಿದ್ದೇನೆ, ಮಂಗಳೂರಿನಲ್ಲಿದ್ದೇನೆ, ಚಿತ್ರರಂಗದಿಂದ ಮತ್ತೆ ದೂರವಾಗಿದ್ದೇನೆ... ಹೀಗೆ ಎಲ್ಲವೂ ಸುಖಾಸುಮ್ಮನೆ ಸುದ್ದಿ ಆಗಿದೆ.

ಅಲ್ಲದೆ ನನಗೆ ಮೂರು ಮಕ್ಕಳು ಇದ್ದಾರೆ, ಒಬ್ಬರು ಲಂಡನ್, ಮತ್ತೊಬ್ಬರನ್ನ ಯಾರಿಗೋ ಕೊಟ್ಟು ಸಾಕಿಸುತ್ತಿದ್ದೇನೆ, ಒಬ್ಬರನ್ನು ಮಾತ್ರ ಮಂಗಳೂರಿನಲ್ಲಿ ನಾನು ಸಾಕುತ್ತಿದ್ದೇನೆ... ಹೀಗೆ ಸುಳ್ಳು ಸುದ್ದಿಗಳೇ ನ್ಯೂಸ್ ಆಗಿವೆ. ಆದರೆ, ನಿಜ ಏನು ಅಂತ ಯಾರೂ ಹೇಳಿಲ್ಲ. ನಾನು ಮತ್ತು ಕುಮಾರಸ್ವಾಮಿ ಅವರು ಯಾವ ಕಾರಣಕ್ಕೂ ದೂರವಾಗಿಲ್ಲ. ಜತೆಗೆ ಇದ್ದೀವಿ. ನನ್ನ ಮಗಳು ಸ್ಕೂಲ್‌ಗೆ ಹೋಗುತ್ತಿದ್ದಾಳೆ. ಅದು ಅವರಿಗೆ ಗೊತ್ತಿದೆ. ಹೀಗಾಗಿ ನಾವು ಕುಟುಂಬದವರ ಹಾಗೆ ಚೆನ್ನಾಗಿದ್ದೀವಿ. ಸಾಯುವ ತನಕ ಅವರು ಹೆಸರು ನನ್ನ ಹೆಸರಿನೊಂದಿಗೆ ಇರುತ್ತದೆ. ಹೀಗಾಗಿ ನನ್ನ ಬರೀ ರಾಧಿಕಾ ಅಂತ ಬರೆಯಬೇಡಿ. ರಾಧಿಕಾ ಕುಮಾರಸ್ವಾಮಿ ಅಂತಲೇ ಬರೆಯಿರಿ ಎಂದು ಖಾತರಿ ಪಡಿಸಿದರು.