ಕೋಲ್ಕತಾ: ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ ಬಿಜೆಪಿ ಹಮ್ಮಿಕೊಂಡಿದ್ದ ರಥಯಾತ್ರೆಗೆ ಕೋಲ್ಕತಾ ಹೈಕೋರ್ಟ್‌ ಗುರುವಾರ ಅನುಮತಿ ನೀಡಿದೆ. ಇದು ರಥಯಾತ್ರೆಯಿಂದ ರಾಜ್ಯದಲ್ಲಿ ಕೋಮುಗಲಭೆ ಸಂಭವಿಸಬಹುದು ಎಂಬ ಕಾರಣ ನೀಡಿ, ಅನುಮತಿ ನಿರಾಕರಿಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರಕ್ಕೆ ಬಾರೀ ಇರುಸು ಮುರುಸು ಉಂಟು ಮಾಡಿದೆ.

ರಾಜ್ಯದ ಮೂರು ಭಾಗಗಳಿಂದ ಹೊರಡಲಿರುವ ರಥಯಾತ್ರೆಯ ಒಂದೂವರೆ ತಿಂಗಳ ಅವಧಿಯಲ್ಲಿ 42 ಸಂಸದೀಯ ಕ್ಷೇತ್ರಗಳನ್ನು ಹಾದುಹೋಗುವ ಉದ್ದೇಶ ಹೊಂದಿದ್ದು, ನಡುನಡುವೆ ಆಯ್ದ ಕ್ಷೇತ್ರಗಳಲ್ಲಿ ಬೃಹತ್‌ ರಾರ‍ಯಲಿಯನ್ನೂ ಆಯೋಜಿಸಲಾಗುತ್ತದೆ. ಡಿ.7ಕ್ಕೇ ಕೂಚ್‌ಬಿಹಾರ್‌ನಲ್ಲಿ ರಥಯಾತ್ರೆಗೆ ಚಾಲನೆ ಸಿಗಬೇಕಿತ್ತಾದರೂ, ರಥಯಾತ್ರೆಗೆ ಅನುಮತಿ ಕೊಟ್ಟರೆ ಕೋಮುಗಲಭೆ ಸಂಭವಿಸುತ್ತದೆ ಎಂಬ ಕಾರಣ ನೀಡಿ, ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಈ ಅರ್ಜಿ ವಿಚಾರಣೆ ನಡೆಸಿ ಗುರುವಾರ ತೀರ್ಪು ನೀಡಿದ ಹೈಕೋರ್ಟ್‌, ರಥಯಾತ್ರೆ ನಡೆಸಿದರೆ ಕೋಮುಗಲಭೆ ಸಂಭವಿಸುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆದರೆ ರಾರ‍ಯಲಿಗೆ 12 ಗಂಟೆ ಮುನ್ನವೇ ಈ ಕುರಿತು ಆಯಾ ವಿಭಾಗದ ಎಸ್‌ಪಿಗಳಿಗೆ ಬಿಜೆಪಿ ಮಾಹಿತಿ ನೀಡಬೇಕು. ಸಂಚಾರಕ್ಕೆ ಅಡ್ಡಿಯಾಗದಂತೆ ಕಾರ್ಯಕ್ರಮ ಆಯೋಜಿಸಬೇಕು. ರಥಯಾತ್ರೆ ಅಥವಾ ರಾರ‍ಯಲಿ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದರೆ ಅದಕ್ಕೆ ಪಕ್ಷವೇ ಹೊಣೆಯಾಗಲಿದೆ. ಮತ್ತೊಂದೆಡೆ ರಾಜ್ಯ ಸರ್ಕಾರ ಕೂಡಾ ಸೂಕ್ತ ಬಂದೋಬಸ್‌್ತ ಒದಗಿಸಬೇಕು ಎಂದು ಸೂಚಿಸಿತು.