2014-15ರಲ್ಲಿ ಪ್ರಯಾಣಿಕ ಸೇವೆಯಿಂದ ರೈಲ್ವೆಗೆ 33,821 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.
ನವದೆಹಲಿ(ಮಾ.10): ಪ್ರಯಾಣಿಕ ರೈಲು ಸೇವೆಯ ನಷ್ಟ ಭರಿಸುವ ನಿಟ್ಟಿನಿಂದ ಹಂತ ಹಂತವಾಗಿ ಪ್ರಯಾಣ ದರಗಳ ಪರಿಷ್ಕರಣೆ ಮತ್ತು ರಿಯಾಯಿತಿ ಪಾಸ್'ಗಳಿಗೆ ಕಡಿವಾಣ ಹಾಕುವಂತೆ ರೈಲ್ವೆಗೆ ಮಹಾಲೇಖಪಾಲರು (ಸಿಎಜಿ) ಶಿಫಾರಸು ಮಾಡಿದ್ದಾರೆ.
ಸಬ್ ಅರ್ಬನ್ ರೈಲು ಸೇವೆಗಳ ಕಾರ್ಯನಿರ್ವಹಣೆ ವೆಚ್ಚವನ್ನು ಸರಿದೂಗಿಸಲು ಹಂತ ಹಂತವಾಗಿ ಪ್ರಯಾಣಿಕರ ಶುಲ್ಕವನ್ನು ಏರಿಕೆ ಮಾಡಬೇಕು ಮತ್ತು ವಿವಿಧ ವರ್ಗಗಳ ಪ್ರಯಾಣಿಕರ ರಿಯಾಯಿತಿ ಪಾಸ್'ಗಳ ಹೊಣೆಗಾರಿಕೆಯನ್ನು ಕಡಿಮೆ ಮಾಡಬೇಕು ಎಂದು ಸಂಸತ್ತಿಗೆ ಮಹಾಲೇಖಪಾಲರು ವರದಿ ಸಲ್ಲಿಸಿದ್ದಾರೆ.
2014-15ರಲ್ಲಿ ಪ್ರಯಾಣಿಕ ಸೇವೆಯಿಂದ ರೈಲ್ವೆಗೆ 33,821 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಪ್ರಯಾಣಿಕ ಸಾರಿಗೆಯ ಕಾರ್ಯನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ರೈಲ್ವೆಯಿಂದ ಸಾಧ್ಯವಾಗುತ್ತಿಲ್ಲ. ಆದರೆ, ಸರಕು ಸಾಗಣೆಯಿಂದ 38,312 ಕೋಟಿ ರೂಪಾಯಿ ಲಾಭವಾಗಿದೆ. ಅದನ್ನು ಪ್ರಯಾಣಿಕ ಸೇವೆಯಿಂದ ಉಂಟಾದ ನಷ್ಟವನ್ನು ತುಂಬಿಕೊಳ್ಳಲು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಿಎಜಿ ವರದಿ ತಿಳಸಿದೆ.
