ನೇತ್ರಾವತಿ ತಟದಲ್ಲಿ ಉದ್ಯಮಿ ಸಿದ್ಧಾರ್ಥ ನಿಗೂಢ ನಾಪತ್ತೆ: ಚಾಲಕ ಕೊಟ್ಟ ದೂರಿನಲ್ಲೇನಿದೆ?

ಕಾಫಿಡೇ ಮಾಲೀಕ ಸಿದ್ದಾರ್ಥ ನಾಪತ್ತೆ| ಡ್ರೈವರ್ ಬಸವರಾಜ್ ಪಾಟೀಲ್ ಕೊಟ್ಟಿರುವ ದೂರು| ನೇತ್ರಾವತಿ ತಟದಲ್ಲಿ ನಾಪತ್ತೆಯಾದ ಮಾಲಿಕನ ಬಗ್ಗೆ ಡ್ರೈವರ್ ಕೊಟ್ಟ ದೂರಿನಲ್ಲೇನಿದೆ? ಇಲ್ಲಿದೆ ಕಂಪ್ಲೇಂಟ್ ಕಾಪಿ

Cafe coffee day owner Siddhartha Missing In Mangalore car Driver Files Complaint

ಮಂಗಳೂರು[ಜು.30]: ಸೋಮವಾರ ಸಂಜೆಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಎಸ್. ಎಂ. ಕೃಷ್ಣ ಅಳಿಯ ಉದ್ಯಮಿ ಸಿದ್ಧಾರ್ಥಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ವ್ಯವಹಾರ ನಿಮಿತ್ತ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಸಿದ್ಧಾರ್ಥದಾರಿ ಮಧ್ಯೆ ಮಂಗಳೂರಿನ ಜಪ್ಪಿನಮೊಗರು ಎಂಬಲ್ಲಿ ಇಳಿದಿದ್ದರು. ಬಳಿಕ ಚಾಲಕನಿಗೆ ಅಲ್ಲೇ ಇರುವಂತೆ ತಿಳಿಸಿ ಮೊಬೈಲ್ ನಲ್ಲಿ ಮಾತನಾಡುತ್ತಾ ಅಲ್ಲಿಂದ ತೆರಳಿದ್ದರು. ಇದಾದ ಬಳಿಕ ಅವರು ಮರಳಿರಲಿಲ್ಲ. ಹೀಗಾಗಿ ಗಾಬರಿಗೊಂಡ ಕಾರು ಚಾಲಕ ಬಸವರಾಜ್ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಅಷ್ಟಕಲ್ಕೂ ಚಾಲಕ ನೀಡಿದ ದೂರಿನಲ್ಲೇನಿದೆ? ನೀವೇ ಓದಿ

ಎಸ್. ಎಂ ಕೃಷ್ಣ ಅಳಿಯ, ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ? ಪತ್ರದಲ್ಲಿ ಮಹತ್ವದ ಮಾಹಿತಿ!

ಸಿದ್ಧಾರ್ಥ್ ಕಾರು ಚಾಲಕನ ದೂರು

ಮಾನ್ಯರೇ, 

ನಾನು ಕಳೆದ ಮೂರು ವರ್ಷಗಳಿಂದ ಕಾಫೀ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ಬಳಿ ಕಾರ್ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ. 29-07-2019ರಂದು ಬೆಳಗ್ಗೆ ಎಂದಿನಂತೆ ಸದಾಶಿವನಗರದಲ್ಲಿರುವ ಸಿದ್ಧಾರ್ಥ ಹೆಗ್ಡೆಯವರ ಮನೆಗೆ ಕೆಲಸಕ್ಕೆ ಹೋಗಿರುತ್ತೇನೆ. ನಂತರ ಸುಮಾರು 8 ಗಂಟೆ ಸಮಯದಲ್ಲಿ ಸಿದ್ಧಾರ್ಥ ಹೆಗ್ಡೆರವರನ್ನು ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಅವರ ಕಚೇರಿಗೆ ಇನ್ನೋವಾ ಕಾರಿನಲ್ಲಿ ಕರೆದುಕೊಂಡು ಹೋಗಿ ನಂತರ ಕಚೇರಿಯಲ್ಲಿದ್ದು ಪುನಃ 11 ಗಂಟೆ ಸಮಯದಲ್ಲಿ ಮನೆಗೆ ವಾಪಸ್ ಬಂದೆವು.

ಮನೆಗೆ ಬಂದ ನಂತರ ನಮ್ಮ ಮಾಲೀಕರಾದ ಸಿದ್ಧಾರ್ಥ್ ಊರಿಗೆ ಹೋಗಬೇಕಾಗಿದೆ. ನೀನು ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು  ಬಾ ಎಂದು ತಿಳಿಸಿದ್ರು. ನಾನು ವಾಪಾಸ್ ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬಂದೆ. ಮಧ್ಯಾಹ್ನ ಸುಮಾರು 12.30ಕ್ಕೆ ನಮ್ಮ ಮಾಲೀಕರು ಸಕಲೇಶಪುರದ ಕಡೆಗೆ ನಡೆ ಎಂದರು. ಅವರು ತಿಳಿಸಿದಂತೆ ನಾನು ಮತ್ತು ಮಾಲೀಕರು ಇನ್ನೋವಾ KA-03 NC 2592 ಕಾರಿನಲ್ಲಿ ಸಕಲೇಶಪುರದ ಕಡೆ ಕಾರನ್ನು ಚಲಾಯಿಸಿಕೊಂಡು ಹೊರಟೆನು. ಸಕಲೇಶಪುರ ಸಮೀಪಿಸಿದಂತೆ ಮುಂದೆ ಮಂಗಳೂರು ಕಡೆ ಹೋಗೋಣ ಎಂದು  ತಿಳಿಸಿದರು. ಮಂಗಳೂರು ನಗರಕ್ಕೆ ಪ್ರವೇಶಿಸುವ ಸರ್ಕಲ್ಗೆ ಬಂದಾಗ ಮಾಲೀಕರು ಎಡಗಡೆ ತೆಗೆದುಕೊ ಸೈಡ್ಗೆ ಹೋಗಬೇಕು ಎಂದು ತಿಳಿಸಿದರು. ಅವರು ಹೇಳಿದಂತೆ ನಾನು ಎಡಗಡೆ ತೆಗೆದುಕೊಂಡು ಕೇರಳ ಹೈವೇ ರಸ್ತೆಯಲ್ಲಿ 3-4 ಕಿ.ಮೀ ಬಂದಾಗ ನದಿಗೆ ಅಡ್ಡವಾಗಿ ಕಟ್ಟಿರುವ ಒಂದು ದೊಡ್ಡ ಸೇತುವೆ ಆರಂಭವಾಗುತ್ತಿದ್ದಂತೆ ನನ್ನಲ್ಲಿ ಕಾರನ್ನು ನಿಲ್ಲಿಸು ಎಂದು ಹೇಳಿದರು. ನಂತರ ಅವರು ಕಾರಿನಿಂದ ಇಳಿದು ನೀನು ಈ ಸೇತುವೆ ತುದಿಗೆ ಗಾಡಿಯನ್ನು ನಿಲ್ಲಿಸು. ನಾನು ವಾಕಿಂಗ್ ಮಾಡಿಕೊಂಡು ಬರುತ್ತೇನೆಂದು ಹೇಳಿದರು.

ನಾನು ಅವರು ತಿಳಸಿದಂತೆ ಸೇತುವೆಯ ತುದಿಗೆ ಬಂದು ಕಾರನ್ನು ನಿಲ್ಲಿಸಿದೆ. ಆಮೇಲೆ ಮಾಲೀಕರು ನಡೆದುಕೊಂಡು ನನ್ನ ಹತ್ತಿರ ಬಂದವರು ನೀನು ಕಾರಿನಲ್ಲಿಯೇ ಕುಳಿತುಕೊಂಡಿರು. ನಾನು ಬರ್ತೀನಿ ಎಂದು ಹೇಳಿ ಜೋಡಿ ರಸ್ತೆಯ ಬಲಭಾಗದ ಕಡೆ ಹೋಗಿ ವಾಪಾಸ್ ಸೇತುವೆ ದಾಟಿಕೊಂಡು ಮಂಗಳೂರು ಕಡೆ ಬ್ರಿಡ್ಜ್ನಲ್ಲಿ ವಾಕಿಂಗ್ ಮಾಡಿಕೊಂಡು ಹೋದರು.  ಸುಮಾರು 8 ಗಂಟೆ ಸಮಯದಲ್ಲಿ ಮಾಲೀಕರು ವಾಪಸ್ ಬಾರದ ಕಾರಣ ನಾನು ಅವರ ಮೊಬೈಲ್ ನಂಬರ್ .........99ಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ನಾನು ಈ ನಂಬರ್ಗೆ ಮತ್ತೆ ಕರೆ ಮಾಡಿದಾಗಲೂ ಸ್ವಿಚ್ ಆಫ್ ಆಗಿತ್ತು. ಇದನ್ನು ತಿಳಿದು ರಾತ್ರಿ 9ಗಂಟೆ ಸಮಯದಲ್ಲಿ ಮಾಲೀಕರ ಮಗನಾದ ಅಮರ್ಥ ಹೆಗ್ಡೆಗೆ ಕರೆ ಮಾಡಿ ವಾಕಿಂಗ್ ಹೋದ ಮಾಲೀಕರು ಬಾರದೆ ಇರುವ ಬಗ್ಗೆ  ತಿಳಿಸಿದೆ. 

ನಮ್ಮ ಮಾಲೀಕರು ಕಾಣೆಯಾದ ಬಗ್ಗೆ ಹಾಗೂ ಫೋನ್ ಕೂಡಾ ಸ್ವಿಚ್ ಆಫ್ ಆದ ಬಗ್ಗೆ ನನಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಲು ಮಾಲೀಕರ ಪುತ್ರ ತಿಳಿಸಿದರು. ಸಿದ್ಧಾರ್ಥ್ ವಯಸ್ಸು 60. ಕಾಣೆಯಾದ ಸಮಯದಲ್ಲಿ ಕಪ್ಪು ಬಣ್ಣದ ಟೀ ಶರ್ಟ್, ಜೀನ್ಸ್ ಪ್ಯಾಂಟ್ ಕಪ್ಪು ಬಣ್ಣದ ಬೂಟು ಧರಿಸಿದ್ದರು.

Cafe coffee day owner Siddhartha Missing In Mangalore car Driver Files Complaint

ಎಸ್‌.ಎಂ.ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ಸಿದ್ಧಾರ್ಥ ನೇತ್ರಾವತಿ ನದಿ ಬಳಿ ನಾಪತ್ತೆ

ಚಾಲಕ ನೀಡಿರುವ ದೂರಿನನ್ವಯ ಪೊಲೀಸರು ನೇತ್ರಾವತಿ ನದಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಿದ್ಧಾರ್ಥ ನಾಪತ್ತೆಯಾಗುವುದಕ್ಕೂ ಮೊದಲು ಬರೆದ ಪತ್ರದಲ್ಲಿ ಹಲವಾರು ಮಹತ್ವದ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ತಾನು ಸಾಲದ ಸುಳಿಗೆ ಸಿಲುಕಿರುವುದಾಗಿಯೂ ತಿಳಿಸಿದ್ದಾರೆ. ಈ ಪತ್ರ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸದ್ಯ ಚಾಲಕ ಬಸವರಾಜ್‌ನನ್ನು ಕಂಕನಾಡಿ ಠಾಣೆ ಪೊಲೀಸರು ಕರೆದೊಯ್ದು ವಿಚಾಋಣೆ ನಡೆಸುತ್ತಿದ್ದಾರೆ.

"

Latest Videos
Follow Us:
Download App:
  • android
  • ios