ಎಸ್.ಎಂ.ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ಸಿದ್ಧಾರ್ಥ ನೇತ್ರಾವತಿ ನದಿ ಬಳಿ ನಾಪತ್ತೆ
ಕಾಫಿ ಡೇ ಮಾಲೀಕ ಸಿದ್ಧಾರ್ಥ್ ದಿಢೀರ್ ಕಾಣೆಯಾಗಿ ಆತಂಕ/ ಎಸ್.ಎಂ.ಕೃಷ್ಣ ಅವರ ಅಳಿಯನೂ ಆಗಿರುವ ಖ್ಯಾತ ಉದ್ಯಮಿ/ ವಿವಿಐಪಿ ಸಿದ್ಧಾರ್ಥ್ ಗಾಗಿ ದಕ್ಷಿಣ ಕನ್ನಡದಲ್ಲಿ ಭಾರೀ ಹುಡುಕಾಟ
ಬೆಂಗಳೂರು/ಮಂಗಳೂರು(ಜು. 30) ಮಾಜಿ ವಿದೇಶಾಂಗ ಸಚಿವ, ಮಾಜಿ ರಾಜ್ಯಪಾಲ, ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಕರ್ನಾಟಕದ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ ಅವರು ಸೋಮವಾರ ದಿಢೀರ್ ನಾಪತ್ತೆಯಾಗಿದ್ದು, ಕುಟುಂಬ ಹಾಗೂ ಆಪ್ತ ವಲಯದಲ್ಲಿ ಆತಂಕ ಮನೆ ಮಾಡಿದೆ.
ಕೆಫೆ ಕಾಫಿ ಡೇ ಸೇರಿದಂತೆ ಹಲವು ಉದ್ಯಮಗಳನ್ನು ಮುನ್ನಡೆಸುತ್ತಿದ್ದ ಸಿದ್ಧಾರ್ಥ್ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಅವರು ಕಾಣೆಯಾಗಿದ್ದಾರೆ ಎಂಬ ಮಾಹಿತಿ ಇದ್ದು, ಅವರಿಗಾಗಿ ಸ್ಥಳೀಯ ಪೊಲೀಸರು ಭಾರೀ ಹುಡುಕಾಟ ನಡೆಸಿದ್ದಾರೆ.
ಆಗಿದ್ದೇನು?: ಸಿದ್ಧಾರ್ಥ ಅವರು ಸೋಮವಾರ ವ್ಯವಹಾರ ನಿಮಿತ್ತ ತಮ್ಮ ಇನ್ನೋವಾ ವಾಹನದಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳಿದ್ದರು. ಅಲ್ಲಿಂದ, ಮಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಮಂಗಳೂರಿನಿಂದ ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನ ಮೊಗರು ಎಂಬಲ್ಲಿ ಕಾರು ಚಾಲಕನಿಗೆ ಹೇಳಿ ಕೆಳಗಿಳಿದಿದ್ದರು.
ಕಾಫಿ ಡೇ ಖರೀದಿಗೆ ಮುಂದಾದ ಬಹುರಾಷ್ಟ್ರೀಯ ಕಂಪನಿ
‘ಇಲ್ಲೇ ಇರು, ಈಗ ವಾಪಸ್ ಬರುತ್ತೇನೆ ಎಂದು ಸೂಚಿಸಿ ಮೊಬೈಲ್‌ನಲ್ಲಿ ಮಾತನಾಡುತ್ತ ತೆರಳಿದ್ದರು. ಅರ್ಧ ಗಂಟೆ ಕಳೆದರೂ ವಾಪಸ್ ಬರದಿದ್ದುದರಿಂದ ಸಿದ್ಧಾರ್ಥ ಅವರ ಮೊಬೈಲ್‌ಗೆ ಕರೆ ಮಾಡಿದೆ. ಫೋನ್ ಸ್ವಿಚ್ ಆಫ್ ಆಗಿತ್ತು. ಗಾಬರಿಯಾಗಿ ಮನೆಯವರಿಗೆ ತಿಳಿಸಿದೆ’ ಎಂದು ಕಾರಿನ ಚಾಲಕ ಹೇಳಿರುವುದಾಗಿ ತಿಳಿದು ಬಂದಿದೆ.
ಸಿದ್ಧಾರ್ಥ ಕಾರಿನಿಂದ ಇಳಿದ ಜಪ್ಪಿನ ಮೊಗರು ಎಂಬ ಸ್ಥಳ ನೇತ್ರಾವತಿ ನದಿ ತಟದಲ್ಲೇ ಇದ್ದು, ಇದು ಕುಟುಂಬಸ್ಥರ ಆತಂಕ ಹೆಚ್ಚಲು ಕಾರಣವಾಗಿದೆ.
ಕಾರು ಚಾಲಕನಿಂದ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸಿದ್ಧಾರ್ಥ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ನೇತೃತ್ವದಲ್ಲಿ ಭಾರೀ ಸಂಖ್ಯೆಯ ಪೊಲೀಸರು ಶೋಧ ನಡೆಸಿದ್ದಾರೆ.
"
ಚಿಕ್ಕಮಗಳೂರು ಮೂಲದ ಸಿದ್ಧಾರ್ಥ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಮಗಳನ್ನು ಮದುವೆಯಾಗಿದ್ದಾರೆ. ಮಾಸ್ಟರ್ ಡಿಗ್ರಿ ಪೂರೈಸಿದ ಸಿದ್ಧಾರ್ಥ ಮುಂಬೈನ ಜೆ.ಎಂ.ಫೈನಾಶಿಯಲ್ ಲಿಮಿಟೆಡ್ ನಲ್ಲಿ ಕಾರ್ಯನಿರ್ವಹಿಸಿದರು. ಎರಡು ವರ್ಷಗಳ ನಂತರ ಬೆಂಗಳೂರಿಗೆ ಆಗಮಿಸಿ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ತೊಡಗಿದರು. ಸಿವಾನ್ ಸೆಕ್ಯೂರಿಟೀಸ್ ಎಂಬ ಹೆಸರಿನಲ್ಲಿ ಮೊದಲು ಕಂಪನಿ ಆರಂಭಿಸಿದರು. 2000ನೇ ಇಸವಿಯಲ್ಲಿ ಇದಕ್ಕೆ ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಅಂಥ ನಾಮಕರಣ ಮಾಡಲಾಯಿತು.
ಇದರ ಜತೆಗೆ ಮೇಲೆ ಇಂದು ಖ್ಯಾತವಾಗಿರುವ ಕಾಫೀ ಡೇ ಉದ್ಯಮವನ್ನು ಆರಂಭಿಸಿದರು. ಚಿಕ್ಕಮಗಳೂರಿನ ಕಾಫಿ ಘಮವನ್ನು ಇಡೀ ಪ್ರಪಂಚದಾದ್ಯಂತ ಪರಿಚಯಿಸಿದ ಕೀರ್ತಿ ಸಿದ್ದಾರ್ಥ ಅವರಿಗೆ ಸಲ್ಲುತ್ತದೆ.