ನಿರೀಕ್ಷೆಯಂತೆ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅತೃಪ್ತಿ ಸ್ಫೋಟಗೊಂಡಿದೆ. ಪ್ರಮುಖ ನಾಯಕರಿಗೆ ಸಚಿವ ಸ್ಥಾನ ತಪ್ಪಿರುವ ಪರಿಣಾಮ ಅವರ ಅಭಿಮಾನಿಗಳು ರಾಜ್ಯದ ವಿವಿಧೆಡೆ ರಸ್ತೆಗಿಳಿದು ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಿದರೆ, ಅತೃಪ್ತರ ತಂಡವೊಂದು ಬುಧವಾರ ತಡರಾತ್ರಿ ನಗರದ ಹೊಟೇಲ್‌ವೊಂದರಲ್ಲಿ ಸಭೆಯೊಂದನ್ನು ನಡೆಸುವ ಮೂಲಕ ಬಂಡಾಯದ ಕಹಳೆ ಮೊಳಗಿಸಿದೆ.

ಬೆಂಗಳೂರು : ನಿರೀಕ್ಷೆಯಂತೆ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅತೃಪ್ತಿ ಸ್ಫೋಟಗೊಂಡಿದೆ. ಪ್ರಮುಖ ನಾಯಕರಿಗೆ ಸಚಿವ ಸ್ಥಾನ ತಪ್ಪಿರುವ ಪರಿಣಾಮ ಅವರ ಅಭಿಮಾನಿಗಳು ರಾಜ್ಯದ ವಿವಿಧೆಡೆ ರಸ್ತೆಗಿಳಿದು ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಿದರೆ, ಅತೃಪ್ತರ ತಂಡವೊಂದು ಬುಧವಾರ ತಡರಾತ್ರಿ ನಗರದ ಹೊಟೇಲ್‌ವೊಂದರಲ್ಲಿ ಸಭೆಯೊಂದನ್ನು ನಡೆಸುವ ಮೂಲಕ ಬಂಡಾಯದ ಕಹಳೆ ಮೊಳಗಿಸಿದೆ.

ಕೆಲ ಅವಕಾಶ ವಂಚಿತರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರೆ, ಕೆಲವರು ಕಾರ್ಯಕರ್ತರ ಮೂಲಕ ತಮ್ಮ ಆಕ್ರೋಶ ಬಯಲುಗೊಳಿಸಿದ್ದಾರೆ. ಕೆಲ ಆಕಾಂಕ್ಷಿಗಳು ಮೈತ್ರಿಗೆ ಭಂಗ ತರುವ ಪರೋಕ್ಷ ಎಚ್ಚರಿಕೆಯನ್ನೂ ರವಾನಿಸಿದ್ದು, ಆಕಾಂಕ್ಷಿಗಳ ಪರ ಕಾರ್ಯಕರ್ತರು ಆತ್ಮಹತ್ಯೆ ಯತ್ನ, ರಾಜೀನಾಮೆ ಬೆದರಿಕೆಗಳ ಮೂಲಕ ಕಾಂಗ್ರೆಸ್‌ ವಲಯದಲ್ಲಿ ಅಸಮಾಧಾನದ ಕಾವು ಹೆಚ್ಚಿಸಿದ್ದಾರೆ. ಕೆಲ ಪ್ರಮುಖ ನಾಯಕರ ಬೆಂಬಲಿಗರು ತಮ್ಮ ಗ್ರಾಮ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಹಿರಿಯರಾದ ಶಾಮನೂರು ಶಿವಶಂಕರಪ್ಪ, ಎಂ.ಬಿ. ಪಾಟೀಲ್‌, ರಾಮಲಿಂಗಾರೆಡ್ಡಿ, ರೋಷನ್‌ಬೇಗ್‌, ಎಂ. ಕೃಷ್ಣಪ್ಪ, ಸತೀಶ್‌ ಜಾರಕಿಹೊಳಿ, ಎಂಟಿಬಿ ನಾಗರಾಜು, ಬಿ.ಸಿ.ಪಾಟೀಲ್‌, ಶಿವಳ್ಳಿ, ಎಚ್‌.ಎಂ.ರೇವಣ್ಣ, ಡಾ.ಸುಧಾಕರ್‌, ಎನ್‌.ಎ.ಹ್ಯಾರಿಸ್‌ ಸೇರಿ ಹಲವರಿಗೆ ಅವಕಾಶ ತಪ್ಪಿದೆ. ಬುಧವಾರ ಬೆಳಗ್ಗೆ ಹೊಸ ಸಚಿವರ ಪಟ್ಟಿರಾಜಭವನಕ್ಕೆ ರವಾನೆಯಾಗುತ್ತಿದ್ದಂತೆಯೇ ಸಚಿವ ಸ್ಥಾನ ವಂಚಿತರು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಲು ಆರಂಭಿಸಿದರು.

ಸತೀಶ್‌ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ವಿಧಾನಸೌಧದ ಮುಂಭಾಗ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿರುವವರಿಗೆ ಅವಕಾಶ ನೀಡಿಲ್ಲ. ಈ ಧೋರಣೆ ಮುಂದುವರೆಸಿದರೆ ಪಕ್ಷಕ್ಕೆಉಳಿಗಾಲ ವಿರುವುದಿಲ್ಲ ಎಂದು ಎಚ್ಚರಿಸಿದರು. ಮತ್ತೊಂದೆಡೆ, ಲಿಂಗಾಯತ ಸಮುದಾಯದ ಶಾಸಕ ಎಂ.ಬಿ.ಪಾಟೀಲ್‌ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರು ತೀವ್ರ ಬೇಸರ ವ್ಯಕ್ತಪಡಿಸಿದರು. ಅತೃಪ್ತ ಎಂ.ಬಿ. ಪಾಟೀಲ್‌ ಮನವೊಲಿಸಲು ಸದಾಶಿವನಗರದ ಅವರ ನಿವಾಸಕ್ಕೆ ಭೇಟಿ ನೀಡಿದ ಸಚಿವ ಕೃಷ್ಣಬೈರೇಗೌಡಗೆ ಬೆಂಬಲಿಗರು ಮುತ್ತಿಗೆ ಹಾಕಿದರು. ಇದೇ ವೇಳೆ ಅಭಿಮಾನಿ ಶೇಖರ್‌ ಅಹ್ಮದ್‌ ಮೋದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಈ ವೇಳೆ ಅಡ್ಡಿಪಡಿಸಿದ ಎಂ.ಬಿ. ಪಾಟೀಲ್‌ ಶಾಂತ ರೀತಿಯಿಂದ ಇರುವಂತೆ ಮನವೊಲಿಸಲು ಯತ್ನಿಸಿದರು.

ಇನ್ನು ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದು, ಸಾಮೂಹಿಕ ರಾಜೀನಾಮೆಯ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ಘೋಷಣೆ ಕೂಗಿದರು.

ಕುರುಬರಿಗೆ ಅನ್ಯಾಯ- ಎಚ್‌ಎಂ ರೇವಣ್ಣ:

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ‘ಮಂಗಳವಾರ ರಾತ್ರಿ ಸಚಿವ ಸಂಪುಟ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ ಈಗ ಇಲ್ಲ. ಸಚಿವ ಸಂಪುಟದಲ್ಲಿ ಕುರುಬ ಸಮುದಾಯವನ್ನು ಕಡೆಗಣಿಸಲಾಗಿದೆ. ಪಕ್ಷದ ಪರ ನಿಂತ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ’ ಎಂದು ಅಸಮಾಧಾನ ಹೊರಹಾಕಿದರು.

ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್‌ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹಣ ಹೊಂದಿರುವವರಿಗೆ, ಬೆದರಿಕೆ ಹಾಕುವವರಿಗೆ ಮಾತ್ರ ಕಾಂಗ್ರೆಸ್‌ನಲ್ಲಿ ಅವಕಾಶವೇ ಹೊರತು ಪ್ರಮಾಣಿಕರಿಗೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ನಾನು ಬಿಜೆಪಿಯಿಂದ ಆಫರ್‌ ಬಂದರೂ ಹೋಗಿಲ್ಲ. ಸ್ವಂತ ಬಲದ ಮೇಲೆ ಶಾಸಕನಾದವನು. ಪಕ್ಷ ನನ್ನನ್ನು ಗುರುತಿಸಿಲ್ಲ. ಬ್ಲಾಕ್‌ಮೇಲ್‌ ಮಾಡುವವರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಕುಂದಗೋಳ ಶಾಸಕ ಶಿವಳ್ಳಿ, ಸಚಿವ ಸ್ಥಾನ ನೀಡದಿರುವುದು ನನಗೆ ಭಾರಿ ನಿರಾಸೆ ಮೂಡಿಸಿದೆ. ಕ್ಷೇತ್ರಕ್ಕೆ ಹೋಗಿ ಕಾರ್ಯಕರ್ತರ ಸಲಹೆ ಪಡೆಯುತ್ತೇನೆ. ಅವರು ಏನು ಹೇಳುತ್ತಾರೋ ಅದರಂತೆ ಮಾಡುವೆ ಎಂದು ಶಿವಳ್ಳಿ ಹೇಳಿಕೆ ನೀಡಿದ್ದಾರೆ. ರಾಜೀನಾಮೆಗೂ ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಶಾಸಕ ಸತೀಶ್‌ ಜಾರಕಿಹೊಳಿ ಅವರಿಗೂ ಸಚಿವ ಸ್ಥಾನ ಕೈತಪ್ಪಿದೆ. ಇದಕ್ಕಾಗಿ ಅವರು, ನನಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕಾರಣ ಗೊತ್ತಿಲ್ಲ. ಸಂಪುಟ ರಚನೆ ಬಳಿಕ ಹೈಕಮಾಂಡ್‌ ಬಳಿ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ನೀಡದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರು, ಬ್ಲಾಕ್‌ ಕಾಂಗ್ರೆಸ್‌ ಸದಸ್ಯರು ಹಾಗೂ ಜಿಲ್ಲಾ ಘಟಕದ ಸದಸ್ಯರು ಸೇರಿದಂತೆ 39 ಮಂದಿ ರಾಜೀನಾಮೆಗೆ ಅಣಿಯಾಗಿದ್ದಾರೆ ಎಂದು ತಿಳಿದುಬಂದಿದೆ. 

ಪಕ್ಷದ ಕಚೇರಿ-ವಿಧಾನಸೌಧ ಮುಂಭಾಗ ಪ್ರತಿಭಟನೆ : ಎಂಟಿಬಿ ನಾಗರಾಜ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ನಾಗರಾಜ್‌ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಉಳಿದಂತೆ ಸತೀಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ವಿಧಾನಸೌಧದ ಮುಂಭಾಗ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಒಂದು ವೇಳೆ ನೀಡದಿದ್ದರೆ 30 ಜಿಲ್ಲೆಗಳಲ್ಲಿ ಸಮುದಾಯದ ಮುಖಂಡರು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಬಿಸಿ ಪಾಟೀಲ್‌ ಆಕ್ರೋಶ

ಪಕ್ಷಕ್ಕಾಗಿ ನಿಷ್ಠೆಯಿಂದ ನಡೆದುಕೊಳ್ಳುವುದು ತಪ್ಪು ಎಂದು ಭಾಸವಾಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದವರನ್ನು ಪಕ್ಷ ಗುರುತಿಸಿಲ್ಲ. ಬ್ಲ್ಯಾಕ್‌ಮೇಲ್‌ ಮಾಡಿದವರು ಸಚಿವರಾಗುತ್ತಿದ್ದಾರೆ. ಬಿಜೆಪಿಯಿಂದ ಆಫರ್‌ ಬಂದರೂ ನಾನು ಹೋಗಿಲ್ಲ. ಮುಂದೇನು? ಅಸಮಾಧಾನಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗುತ್ತದೆ.

- ಬಿ.ಸಿ. ಪಾಟೀಲ್‌, ಹಿರೇಕೆರೂರು ಶಾಸಕ

ಸಚಿವ ಸ್ಥಾನ ಕೇಳೋದಿಲ್ಲ

ನನಗೆ ಏಕೆ ಸಚಿವ ಸ್ಥಾನ ತಪ್ಪಿದೆ ಎಂಬುದು ಗೊತ್ತಿಲ್ಲ. ಸಂಜೆ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಪಕ್ಷದ ಮಟ್ಟದಲ್ಲಿ ಏನು ಚರ್ಚೆ ಆಯಿತು ಎಂಬುದನ್ನು ಸಿದ್ದರಾಮಯ್ಯ ಅವರ ಬಳಿ ಕೇಳುತ್ತೇನೆ. ಹಾಗಂತ ಸಚಿವ ಸ್ಥಾನ ಕೊಡಿ ಎಂದು ಕೇಳಲ್ಲ. ಕೆಲವೊಮ್ಮೆ ಹೀಗೆ ಆಗುತ್ತದೆ. ನಾನು ಹಿರಿಯನೂ ಅಲ್ಲ ಕಿರಿಯನೂ ಅಲ್ಲ.

- ಎಂ.ಬಿ. ಪಾಟೀಲ್‌, ಬಬಲೇಶ್ವರ ಶಾಸಕ

ಎಂ.ಬಿ. ಪಾಟೀಲ್‌ಗೆ ಸಚಿವ ಸ್ಥಾನ ಕೊಡಬೇಕಿತ್ತು. ಅವರನ್ನು ನಿರ್ಲಕ್ಷಿಸುವ ಮೂಲಕ ಉತ್ತರ ಕರ್ನಾಟಕವನ್ನು ಮರೆತಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇವೆ. ಯಾಕೆ ಸಚಿವ ಸ್ಥಾನ ತಪ್ಪಿದೆ ಎಂದು ಅವರ ಬಳಿ ಚರ್ಚೆ ಮಾಡುತ್ತೇವೆ. ಈಗೇನೂ ಮುಗಿದಿಲ್ಲ, ಇನ್ನೂ ಸಮಯ ಇದೆ.

- ವಿನಯ್‌ಕುಲಕರ್ಣಿ, ಮಾಜಿ ಸಚಿವ

ಖಾಸಗಿ ಹೋಟೆಲಲ್ಲಿ ಅತೃಪ್ತರಿಂದ ಸಭೆ

ಅತೃಪ್ತಿ, ಅಸಮಾಧಾನದ ನಡುವೆಯೇ ಶಾಸಕರ ಗುಂಪೊಂದು ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಸಭೆ ನಡೆಸುವ ಮೂಲಕ ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆ ಆರಂಭಿಸುವ ಲಕ್ಷಣ ತೋರಿದೆ. ಸತೀಶ್‌ ಜಾರಕಿಹೊಳಿ, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್‌, ಎನ್‌.ಎ.ಹ್ಯಾರಿಸ್‌, ಈಶ್ವರ್‌ ಖಂಡ್ರೆ, ರಹೀಂ ಖಾನ್‌ ಸೇರಿದಂತೆ ಹಲವರು ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ್ದಾರೆ. ಪಕ್ಷವು ತಮ್ಮನ್ನು ನಡೆಸಿಕೊಂಡಿರುವ ರೀತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಪಕ್ಷದ ಧೋರಣೆಗೆ ಕಾರಣಗಳ ಬಗ್ಗೆ ಚರ್ಚಿಸಿದರು. ಇದೇ ವೇಳೆ ಪಕ್ಷದ ಮೇಲೆ ಹೇಗೆ ಒತ್ತಡ ಹೇರಬೇಕು, ಪಕ್ಷ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ನಡೆ ಏನಿರಬೇಕು ಎಂಬ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.