ಸಿಎಂ ಸಿದ್ದರಾಮಯ್ಯ, ಈ ಮೂರೂ ಖಾತೆಗಳನ್ನು ಇದೀಗ ಬಹಳ ಅಳೆದುತೂಗಿ ಹಂಚಿಕೆ ಮಾಡಿದ್ದಾರೆ. ಮೇಟಿ ಅವರು ಕುರುಬ ಸಮುದಾಯದವರಾಗಿದ್ದು, ಅವರ ಅಬಕಾರಿ ಸ್ಥಾನಕ್ಕೆ ಆ ಸಮುದಾಯದವರೇ ಆದ ಎಚ್.ಎಂ.ರೇವಣ್ಣನವರನ್ನು ಆಯ್ಕೆ ಮಾಡಲಾಗಿದೆ. ಮಹದೇವಪ್ರಸಾದ್ ಲಿಂಗಾಯತ ಸಮುದಾಯದವರಾಗಿದ್ದು, ಅವರ ಜಾಗಕ್ಕೆ ಅವರ ಪತ್ನಿಯನ್ನೇ ಆರಿಸಿಲಾಗಿದೆ. ಪರಮೇಶ್ವರ್ ಸ್ಥಾನಕ್ಕೆ ಮತ್ತೊಬ್ಬ ದಲಿತ ಆರ್.ಬಿ.ತಿಮ್ಮಾಪೂರ್ ಅವರಿಗೆ ಅವಕಾಶ ಕೊಡಲಾಗಿದೆ.
ಬೆಂಗಳೂರು(ಆ. 31): ಸಿದ್ದರಾಮಯ್ಯ ಸರಕಾರದ ಸಂಪುಟ ವಿಸ್ತರಣೆಯಾಗುವುದು ಖಚಿತವಾಗಿದೆ. ನಾಳೆ ಶುಕ್ರವಾರದಂದು ಸಂಪುಟ ವಿಸ್ತರಣೆಯಾಗಲಿದೆ. ರಾಜಭವನದಲ್ಲಿ ನಾಳೆ ಸಂಜೆ 5ಗಂಟೆಗೆ ಮೂವರು ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಸುವರ್ಣನ್ಯೂಸ್'ಗೆ ಲಭಿಸಿದೆ. ಆರ್.ಬಿ.ತಿಮ್ಮಾಪುರ್, ಎಚ್.ಎಂ.ರೇವಣ್ಣ ಮತ್ತು ಗೀತಾ ಮಹದೇವಪ್ರಸಾದ್ ಅವರು ಸಂಪುಟ ವಿಸ್ತರಣೆಯಲ್ಲಿ ಸಚಿವ ಭಾಗ್ಯ ಪಡೆಯಲಿದ್ದಾರೆ. ಈಗ್ಗೆ ಕೆಲವಾರು ದಿನಗಳಿಂದಲೂ ಸಂಪುಟ ವಿಸ್ತರಣೆಯಲ್ಲಿ ಮೂವರಿಗೆ ಸಚಿವ ಭಾಗ್ಯ ಸಿಗುತ್ತದೆಂಬ ಸುದ್ದಿ ಚಾಲನೆಯಲ್ಲಿತ್ತು. ಆದರೆ, ಕೊನೇ ಗಳಿಗೆಯಲ್ಲಿ ಆದ ಅಚ್ಚರಿಯ ಬದಲಾವಣೆಯಲ್ಲಿ ತಿಪಟೂರು ಶಾಸಕ ಕೆ.ಷಡಕ್ಷರಿ ಅವರಿಗೆ ಕೊಕ್ ಕೊಟ್ಟು ಗೀತಾ ಮಹದೇವಪ್ರಸಾದ್'ರನ್ನು ಸಚಿವರನ್ನಾಗಿ ಮಾಡಲು ನಿರ್ಧರಿಸಲಾಗಿದೆ.
ಎಚ್.ವೈ.ಮೇಟಿ ಅವರು ಲೈಂಗಿಕ ಕಿರುಕುಳ ಆರೋಪ ಹೊತ್ತು ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಹಕಾರಿ ಸಚಿವರಾಗಿದ್ದ ಮಹದೇವ ಪ್ರಸಾದ್ ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ ಆವರ ಸ್ಥಾನ ತೆರವಾಗಿದೆ. ಹಾಗೆಯೇ, ಜಿ.ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
ಸಿದ್ದು ಪ್ಲಾನ್:
ಸಿಎಂ ಸಿದ್ದರಾಮಯ್ಯ, ಈ ಮೂರೂ ಖಾತೆಗಳನ್ನು ಇದೀಗ ಬಹಳ ಅಳೆದುತೂಗಿ ಹಂಚಿಕೆ ಮಾಡಿದ್ದಾರೆ. ಮೇಟಿ ಅವರು ಕುರುಬ ಸಮುದಾಯದವರಾಗಿದ್ದು, ಅವರ ಅಬಕಾರಿ ಸ್ಥಾನಕ್ಕೆ ಆ ಸಮುದಾಯದವರೇ ಆದ ಎಚ್.ಎಂ.ರೇವಣ್ಣನವರನ್ನು ಆಯ್ಕೆ ಮಾಡಲಾಗಿದೆ. ಮಹದೇವಪ್ರಸಾದ್ ಲಿಂಗಾಯತ ಸಮುದಾಯದವರಾಗಿದ್ದು, ಅವರ ಜಾಗಕ್ಕೆ ಅವರ ಪತ್ನಿಯನ್ನೇ ಆರಿಸಿಲಾಗಿದೆ. ಪರಮೇಶ್ವರ್ ಸ್ಥಾನಕ್ಕೆ ಮತ್ತೊಬ್ಬ ದಲಿತ ಆರ್.ಬಿ.ತಿಮ್ಮಾಪೂರ್ ಅವರಿಗೆ ಅವಕಾಶ ಕೊಡಲಾಗಿದೆ.
ಇನ್ನು, ಷಡಕ್ಷರಿ ಅವರಿಗೆ ಕೊಕ್ ಕೊಡುವುದರ ಹಿಂದೆಯೂ ಸಿದ್ದರಾಮಯ್ಯನವರ ಮಾಸ್ಟರ್'ಪ್ಲಾನ್ ಅಡಗಿರುವ ಅನುಮಾನವಿದೆ. ಷಡಕ್ಷರಿ ಅವರು ಜಿ.ಪರಮೇಶ್ವರ್ ಅವರ ಆಪ್ತರಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸಂಪುಟ ಸೇರ್ಪಡೆಯ ಯೋಗ ಪಡೆದಿರುವ ಎಲ್ಲಾ ಮೂವರೂ ಕೂಡ ಸಿದ್ದರಾಮಯ್ಯನವರ ಬೆಂಬಲಿಗರೇ ಆಗಿರುವುದು ವಿಶೇಷ.