ಮಂಗಳೂರು (ಆ. 23): ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ನಳಿನ್‌ ಕುಮಾರ್‌ ಕಟೀಲ್‌, 3ನೇ ಬಾರಿ ದ.ಕ. ಸಂಸದರಾಗಿ ಆಯ್ಕೆಯಾಗಿದ್ದಾರೆ. ಆರ್‌ಎಸ್‌ಎಸ್‌ ಕಟ್ಟಾಳು ಆಗಿರುವ ಅವರು, ಸಾಮಾನ್ಯ ಕಾರ್ಯಕರ್ತನಾಗಿ, ಕೆಳಸ್ತರದಿಂದ ಈ ಹಂತದ ವರೆಗೆ ಬಂದವರು.

ಕರ್ನಾಟಕ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಿರು ಪರಿಚಯ

ಲೋಕಸಭಾ ಸದಸ್ಯರಾಗಿ ಕರ್ನಾಟಕದ ಬಿಜೆಪಿ ಸಂಸದರಿಗೆ ಸಚೇತಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿದಿದ್ದಾರೆ. ಇದೇ ವೇಳೆ ನಳಿನ್‌ ಕುಮಾರ್‌ ಕಟೀಲ್‌ ಆಯ್ಕೆ ವಿರುದ್ಧ ವಿಪಕ್ಷ ಮಾತ್ರವಲ್ಲ ಸ್ವಪಕ್ಷದಲ್ಲೇ ಟೀಕೆ ಕೂಡ ಕೇಳಿಬಂದಿದ್ದು, ಈ ಎಲ್ಲಾ ವಿಚಾರಗಳ ಕುರಿತು ನಳಿನ್‌ ಕುಮಾರ್‌ ಕಟೀಲ್‌ ‘ಕನ್ನಡಪ್ರಭ’ ಜತೆ ಮಾತನಾಡಿದ್ದಾರೆ.

ನಳಿನ್‌ ಕುಮಾರ್‌ ಕಟೀಲ್‌ಗೆ ದ.ಕ. ಬಿಟ್ಟು ಬೇರೆ ಜಿಲ್ಲೆಗಳನ್ನು ಸುತ್ತಾಡಿ ಪರಿಚಯ ಇಲ್ಲವೆಂದು ಸ್ವಪಕ್ಷೀಯರೇ ಆದ ಬಸನಗೌಡ ಪಾಟೀಲ್‌ ಯತ್ನಾಳ್‌ ಟೀಕಿಸಿದ್ದಾರಲ್ಲ?

ಅವರ ಟೀಕೆಯ ಬಗ್ಗೆ ನಾನೇನೂ ಹೇಳುವುದಿಲ್ಲ. ಏನಿದ್ದರೂ ಪಕ್ಷದ ಹಿರಿಯರ, ಮುಖಂಡರ, ಶಾಸಕರ ಸಹಕಾರದಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತೇನೆ.

ಕಟೀಲ್ ನೇಮಕ: ಬಿಜೆಪಿ ಸಂಘಟನೆ ಸಂತೋಷ್ ತೆಕ್ಕೆಗೆ!

ಉತ್ತರ ಕರ್ನಾಟಕ ಸೇರಿದಂತೆ ಬಿಜೆಪಿ ಅಸ್ತಿತ್ವದಲ್ಲಿ ಇಲ್ಲದ ಭಾಗಗಳಲ್ಲಿ ಯಾವ ರೀತಿ ಪಕ್ಷವನ್ನು ಸಂಘಟಿಸುತ್ತೀರಿ?

ರಾಜ್ಯದ ಎಲ್ಲ ಭಾಗಗಳಲ್ಲೂ ಕರಾವಳಿ ಜಿಲ್ಲೆಯ ಮಾದರಿಯಲ್ಲಿ, ಮತಗಟ್ಟೆಆಧಾರದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇನೆ. ಇದರಲ್ಲಿ ಯಾರೂ ಅನುಮಾನ ಪಡುವ ಅಗತ್ಯವಿಲ್ಲ.

ಕೇಂದ್ರದಲ್ಲಿ ಪಕ್ಷದ ಮುಖಂಡ ಸಂತೋಷ್‌ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇವರಿಬ್ಬರ ನಡುವೆ ಸಮನ್ವಯತೆ ಸಾಧಿಸುವುದು ಸುಲಭವೇ?

ಬಿಜೆಪಿಯಲ್ಲಿ ಸಮನ್ವಯತೆಯ ಕೊರತೆ ಎಂಬುದು ಇಲ್ಲ. ನಾವು ತಂಡವಾಗಿ ಕೆಲಸ ಮಾಡುತ್ತೇವೆ. ಅವರಿಬ್ಬರ ಮಧ್ಯೆ ಯಾವುದೇ ರೀತಿಯ ಭಿನ್ನಮತ, ಭಿನ್ನಾಭಿಪ್ರಾಯ, ಅಸಂತೋಷ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಹಾಗಾಗಿ ಇಲ್ಲಿ ಸಮನ್ವಯ ಸಾಧಿಸುವ ಪ್ರಶ್ನೆಯೇ ಬರುವುದಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವ ಸಂಪುಟದಲ್ಲಿ ಹಿರಿಯರಿದ್ದಾರೆ. ಇವರ ಮಧ್ಯೆ ಕಿರಿಯವರಾದ ನೀವು ಹೇಗೆ ಪಕ್ಷದ ಚುಕ್ಕಾಣಿ ಹಿಡಿದು ಮುಂದೆ ಸಾಗುತ್ತೀರಿ?

ನನಗೆ ಇದೇನು ಕಷ್ಟದ ಸಂಗತಿ ಅಲ್ಲ. ಏಕೆಂದರೆ, ನನಗೆ ಪಕ್ಷದ ಸಂಘಟನೆಯೇ ಹೊರತು ಆಡಳಿತ ನಡೆಸುವ ಜವಾಬ್ದಾರಿಯಲ್ಲ. ಹಾಗಾಗಿ ಮುಖ್ಯಮಂತ್ರಿ ಹಾಗೂ ಮಂತ್ರಿ ಮಂಡಲದ ಸಲಹೆ, ಸಹಕಾರ ಪಡೆದು ಪಕ್ಷ ಬಲಪಡಿಸುತ್ತೇನೆ.

ಮುಖ್ಯವಾಗಿ ನಿಮ್ಮ ತವರು ಜಿಲ್ಲೆ ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಂಪುಟ ಸೇರ್ಪಡೆ ವಂಚಿತರು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಇದನ್ನು ಹೇಗೆ ಸರಿಪಡಿಸುತ್ತೀರಿ?

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭ ಹಾಗೂ ಸಂಪುಟ ವಿಸ್ತರಣೆಯ ಸನ್ನಿವೇಶವನ್ನು ಪಕ್ಷದ ಶಾಸಕರು ಅರ್ಥ ಮಾಡಿಕೊಳ್ಳಬೇಕು. ಪೂರ್ಣ ಪ್ರಮಾಣದಲ್ಲಿ ಇನ್ನೂ ಸಂಪುಟ ವಿಸ್ತರಣೆಯಾಗಿಲ್ಲ. ಅಲ್ಲದೆ ಅಮಾನತುಗೊಂಡ ಶಾಸಕರಿಗೆ ಸುಪ್ರೀಂಕೋರ್ಟ್‌ನ ತೀರ್ಪನ್ನು ಆಧರಿಸಿ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಅತೃಪ್ತರ ಅಸಮಾಧಾನವನ್ನು ಮಾತನಾಡಿ ಸರಿಪಡಿಸುತ್ತೇವೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ನೆರೆ ಪೀಡಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಕನಿಷ್ಠ ತುರ್ತು ಪರಿಹಾರ ಮೊತ್ತವನ್ನೂ ಘೋಷಿಸಿಲ್ಲ ಎಂಬ ಆರೋಪ ಇದೆಯಲ್ಲ?

ಹಾಗೇನಿಲ್ಲ, ಕೇಂದ್ರ ಸರ್ಕಾರ ಪರಿಹಾರ ಮೊತ್ತ ಘೋಷಿಸಬೇಕಾದರೆ, ಅದರದ್ದೇ ಆದ ನಿಯಮಾವಳಿಗಳಿವೆ. ರಾಜ್ಯ ಸರ್ಕಾರ ಹಾನಿಯ ಪ್ರಮಾಣವನ್ನು ಲೆಕ್ಕಹಾಕಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಅಲ್ಲಿಂದ ಅಧಿಕಾರಿಗಳ ತಂಡ ಆಗಮಿಸಿ ಸಮೀಕ್ಷೆ ನಡೆಸಬೇಕು. ಆ ಬಳಿಕವೇ ಪರಿಹಾರ ಮೊತ್ತ ಪ್ರಕಟಿಸುವುದು ಕ್ರಮ. ಹಾಗಾಗಿ ಸರ್ಕಾರ ತನ್ನ ಕೆಲಸವನ್ನು ಮಾಡುತ್ತಿರುತ್ತದೆ.

ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನ ಸವಾಲನ್ನು ಹೇಗೆ ನಿಭಾಯಿಸುತ್ತೀರಿ?

ಉಪಚುನಾವಣೆಯಲ್ಲಿ ಪಕ್ಷದ ಎಲ್ಲ ಅಭ್ಯರ್ಥಿಗಳ ಗೆಲವಿಗೆ ಪಣ ತೊಡುತ್ತೇವೆ. ಎಲ್ಲರ ನೆರವಿನಲ್ಲಿ ಚುನಾವಣೆಯಲ್ಲಿ ಗೆಲ್ಲಿಸಿಕೊಡುವ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎನ್ನುವ ವಿಶ್ವಾಸವಿದೆ. ಈ ಬಗ್ಗೆ ಚುನಾವಣಾ ಕಾರ್ಯತಂತ್ರ ರೂಪಿಸುತ್ತೇವೆ.

- ಆತ್ಮಭೂಷಣ್