Asianet Suvarna News Asianet Suvarna News

ಪ್ರತಾಪ್‌ಗೆ ಮಂತ್ರಿಗಿರಿ ಕೇಳಿದ್ದಕ್ಕೆ ಪರಂ ಗರಂ

ಪ್ರತಾಪಚಂದ್ರ ಶೆಟ್ಟಿಬೆಂಬಲಿಗರು ಮಾಡಿದ ತೀವ್ರ ವಾದದಿಂದ ಸಿಟ್ಟಾದ ಪರಮೇಶ್ವರ್‌, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ನ ಹೆಮ್ಮರವನ್ನೇ ಕಡಿದು ಹಾಕಿ ಈಗ ಸಚಿವ ಸ್ಥಾನ ಕೇಳಲು ಬಂದಿದ್ದೀರಾ ಎಂದು ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡರು.

Cabinet Berth: Prathap Chandra Shetty Supporters Protest

ಬೆಂಗಳೂರು :  ವಿಧಾನ ಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಉಡುಪಿ ಮತ್ತು ಬಂಟ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿ ಅವರ ಬೆಂಬಲಿಗರು ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌ ಅವರ ಸದಾಶಿವನಗರದ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.

ಒಂದು ಹಂತದಲ್ಲಿ ಪ್ರತಾಪಚಂದ್ರ ಶೆಟ್ಟಿಬೆಂಬಲಿಗರು ಮಾಡಿದ ತೀವ್ರ ವಾದದಿಂದ ಸಿಟ್ಟಾದ ಪರಮೇಶ್ವರ್‌, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ನ ಹೆಮ್ಮರವನ್ನೇ ಕಡಿದು ಹಾಕಿ ಈಗ ಸಚಿವ ಸ್ಥಾನ ಕೇಳಲು ಬಂದಿದ್ದೀರಾ ಎಂದು ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್‌ ಶೆಟ್ಟಿನೇತೃತ್ವದಲ್ಲಿ ಪರಮೇಶ್ವರ್‌ ನಿವಾಸದ ಮುಂದೆ ಜಮಾಯಿಸಿದ ಪ್ರತಾಪಚಂದ್ರ ಶೆಟ್ಟಿಬೆಂಬಲಿಗರು ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು. ಈ ವೇಳೆ ಮನೆಯಿಂದ ಹೊರಬಂದ ಪರಮೇಶ್ವರ್‌ ಅವರನ್ನು ಸುತ್ತುವರಿದ ಪ್ರತಿಭಟನಾಕಾರರು, ಉಡುಪಿ ಜಿಲ್ಲೆ ಮತ್ತು ಬಂಟ ಸಮುದಾಯಕ್ಕೆ ಸಚಿವ ಸ್ಥಾನ ಸಿಗದೆ ಅನ್ಯಾಯ ಮಾಡಲಾಗಿದೆ. ಹಾಗಾಗಿ ಪ್ರತಾಪಚಂದ್ರ ಶೆಟ್ಟಿಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ  ಪ್ರತಿಕ್ರಿಯಿಸಿದ ಪರಮೇಶ್ವರ್‌, ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಎಷ್ಟುಜನ ಶಾಸಕರನ್ನು ಗೆಲ್ಲಿಸಿಕೊಂಡು ಬಂದಿದ್ದೀರಿ ಹೇಳಿ. ಆ ಭಾಗದಲ್ಲಿ ಕಾಂಗ್ರೆಸ್‌ ಹೆಮ್ಮರವನ್ನೇ ಕಡಿದು ಹಾಕಿದ್ದೀರಾ. ಈಗ ಸಚಿವ ಸ್ಥಾನ ಕೇಳಲು ಬಂದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಭಟನಾಕಾರರು, ಈ ಹಿಂದಿನ ಚುನಾವಣೆಯಲ್ಲಿ ಮಂಗಳೂರಿನಲ್ಲಿ ಹತ್ತು ಶಾಸಕ ಸ್ಥಾನಗಳನ್ನು ಗೆಲ್ಲಿಸಿದ್ದೆವು. ಈ ಬಾರಿಯೂ ಹೋರಾಟ ಮಾಡಿದ್ದೀವಿ ಎಂದರು. ಅವರ ಮಾತಿಗೆ ತಿರುಗೇಟು ನೀಡಿದ ಪರಮೇಶ್ವರ್‌, ಎಲ್ಲಿ ಹೋರಾಟ ಮಾಡಿದ್ದೀರಿ? ಎಲ್ಲಾ ಬೆಂಗಳೂರಿನಲ್ಲಿ ಇದ್ದುಕೊಂಡು ಏನೂ ಕೆಲಸ ಮಾಡಲಿಲ್ಲ. ಹಿಂದೆ ಗೆದ್ದಿದ್ದು ಹೇಳಬೇಡಿ. ಈಗ ಏನಾಗಿದೆ ಎಂಬುದನ್ನು ಹೇಳಿ. ಹಾಗೆ ಹೇಳೋದಾದರೆ 2013ರಲ್ಲಿ ಕಾಂಗ್ರೆಸ್‌ 121 ಸ್ಥಾನ ಗೆದ್ದಿತ್ತು. ಅದನ್ನು ಈಗ ಹೇಳಿ ಅಧಿಕಾರ ಪಡೆಯೋಕೆ ಆಗುತ್ತಾ ಎಂದರು.

ಅಷ್ಟಕ್ಕೂ ಸುಮ್ಮನಾಗದ ಪ್ರತಾಪಚಂದ್ರ ಶೆಟ್ಟಿಬೆಂಬಲಿಗರು, ಮೈಸೂರಿನಲ್ಲಿ ಕೂಡಾ ಕಾಂಗ್ರೆಸ್‌ ಸೋತಿದೆಯಲ್ಲಾ ಎಂದರು. ಅದಕ್ಕೆ ಪರಮೇಶ್ವರ್‌, ಅದೆಲ್ಲಾ ಹೋಲಿಕೆ ಈಗ ಬೇಡ ಮಾರಾಯಾ. ನಿಮ್ಮದು ಹೇಳಿ ಎಂದರು.

ಆಗ ಬೆಂಬಲಿಗನೊಬ್ಬ, ಬೆಳವಣಿಗೆ ಆಗಬೇಕಾದರೆ ಪೋಷಕಾಂಶ ಹಾಕಬೇಕು, ಹಾಗಾಗಿ ಜಿಲ್ಲೆಗೆ ಮಂತ್ರಿ ಸ್ಥಾನ ಕೊಡಿ, ಮುಂದೆ ಫಲ ಸಿಗುತ್ತೆ ಎಂದರು. ಅದಕ್ಕೆ ಪರಮೇಶ್ವರ್‌, ಮರ ಕಡಿದುಬಿಟ್ಟು ಈಗ ಫಲ ಕೇಳಲು ಬಂದಿದ್ದೀರಾ ಎಂದರು. ಅದಕ್ಕೆ ಮತ್ತೊಬ್ಬ ಬೆಂಬಲಿಗ ಕಾಂಗ್ರೆಸ್‌ ಸಾಗವಾನಿ ಮರ, ಕಡಿದರೆ ಮತ್ತೆ ಚಿಗುರುತ್ತೆ ಸಾರ್‌ ಎಂದು ಹೇಳಿದ್ದು ಕೇಳಿ ಪರಮೇಶ್ವರ್‌ ನಕ್ಕು ಸುಮ್ಮನಾದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌, ಎಂಎಲ್‌ಸಿ ಪ್ರತಾಪಚಂದ್ರ ಶೆಟ್ಟಿಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಉಡುಪಿ ಜಿಲ್ಲಾ ಕಾರ್ಯಕರ್ತರು ಮತ್ತವರ ಬೆಂಬಲಿಗರ ಮನವಿಯನ್ನು ಹೈಕಮಾಂಡ್‌ ಗಮನಕ್ಕೆ ತಂದು ಎರಡನೇ ಹಂತದ ಸಂಪುಟ ವಿಸ್ತರಣೆ ವೇಳೆ ಸ್ಥಾನ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

Follow Us:
Download App:
  • android
  • ios