ಬೆಂಗಳೂರು :  ಬಿಬಿಎಂಪಿಯ ಎರಡು ವಾರ್ಡ್‌ಗೆ ಮೇ 29ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಲೋಕಸಭೆ ಚುನಾವಣೆ ಮಾದರಿಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಮೈತ್ರಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಇನ್ನೆರಡು ದಿನದಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ.

ಕಾವೇರಿಪುರ ಮತ್ತು ಸಗಾಯಪುರ ವಾರ್ಡ್‌ಗಳ ಸದಸ್ಯರ ಅಕಾಲಿಕ ಮರಣದಿಂದ ತೆರವಾದ ಸ್ಥಾನಗಳಿಗೆ ಮೇ 29ರಂದು ಚುನಾವಣೆ ನಡೆಯಲಿದ್ದು, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಇದಕ್ಕೆ ಎರಡೂ ಪಕ್ಷದ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಕಾವೇರಿಪುರ ವಾರ್ಡ್‌ನ ಸದಸ್ಯೆರಮೀಳಾ ಜೆಡಿಎಸ್‌ ಪಕ್ಷದವರಾದ ಕಾರಣ ಕ್ಷೇತ್ರವನ್ನು ಜೆಡಿಎಸ್‌ಗೆ, ಸಗಾಯಪುರದ ಏಳುಮಲೈ ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಸದಸ್ಯರಾಗಿದ್ದರಿಂದ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ನಿರ್ಧರಿಸಲಾಗಿದೆ.

ವರಿಷ್ಠರಿಗೆ ಆಯ್ಕೆ ಹೊಣೆ

ಕಾವೇರಿಪುರದಲ್ಲಿ ಜೆಡಿಎಸ್‌ ಅಭ್ಯರ್ಥಿ ಆಯ್ಕೆಯ ಹೊಣೆಯನ್ನು ವರಿಷ್ಠರು ನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌ ಅವರಿಗೆ ವಹಿಸಿದ್ದಾರೆ. ಕಾವೇರಿಪುರ ವಾರ್ಡ್‌ ಒಬಿಸಿ-ಎ (ಮಹಿಳೆ) ಮೀಸಲಾತಿ ಹೊಂದಿದ್ದು, ಆ ವರ್ಗಕ್ಕೆ ಸೇರಿದ ಮಹಿಳೆಯನ್ನೇ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಮಂಗಳವಾರ ಅಥವಾ ಬುಧವಾರ ಪಕ್ಷದ ಕಾರ್ಯಕರ್ತರ ಜತೆಗೆ ಸಭೆ ನಡೆಸಲಿರುವ ಜೆಡಿಎಸ್‌ ಮುಖಂಡರು, ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ. ಇನ್ನು ಸಗಾಯಪುರ ಸಾಮಾನ್ಯ ಮೀಸಲಾಗಿದ್ದು, ಏಳುಮಲೈ ಅವರ ಸಹೋದರರೊಬ್ಬರಿಗೆ ಟಿಕೆಟ್‌ ನೀಡುವ ಬಗ್ಗೆಯೂ ಕಾಂಗ್ರೆಸ್‌ ಮುಖಂಡರು ಚಿಂತನೆ ನಡೆಸಿದ್ದಾರೆ.