ನಂಜನಗೂಡು ಹಾಗು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ನಾಳೆ ಎರಡೂ ಕ್ಷೇತ್ರಗಳಲ್ಲೂ ಎರಡೂ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ.
ಮೈಸೂರು (ಮಾ.19): ಸರ್ಕಾರ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯು ನಿಧಾನವಾಗಿ ಕಾವು ಪಡೆದುಕೊಂಡಿದೆ.
ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ನಾಳೆ ಎರಡೂ ಕ್ಷೇತ್ರಗಳಲ್ಲೂ ಎರಡೂ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ.
ಈ ಮೂಲಕ ಅಧಿಕೃತವಾಗಿ ಎರಡೂ ಪಕ್ಷಗಳು ಮತಬೇಟೆಗೆ ಬೀದಿಗೆ ಇಳಿಯಲಿವೆ. ಮೀಸಲು ಕ್ಷೇತ್ರ ನಂಜನಗೂಡಿನ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಬೆಳಿಗ್ಗೆ 10.30 ರ ಸುಮಾರಿಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ 11.30ಕ್ಕೆ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಅದೇ ರೀತಿ ಸಾಮಾನ್ಯ ಕ್ಷೇತ್ರ ಗುಂಡ್ಲುಪೇಟೆಯಲ್ಲಿ ಕೂಡ ಬಿಜೆಪಿಯ ನಿರಂಜನ್ ಕುಮಾರ್ ಹಾಗೂ ಕಾಂಗ್ರೆಸ್'ನಿಂದ ದಿವಂಗತ ಡಾ.ಹೆಚ್.ಎಸ್.ಮಹದೇವ್ ಪ್ರಸಾದ್ ಪತ್ನಿ ಗೀತಾ ಪ್ರಸಾದ್ ನಾಮಪತ್ರ ಸಲ್ಲಿಸಲಿದ್ದಾರೆ.
