ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ. ಈ ನಡುವೆ, ಪ್ರಭಾವಿ ಜ್ಯೋತಿಷಿ ದ್ವಾರಕಾನಾಥ್ ಅವರು ಜನವರಿ 5 ರಿಂದ 30ರೊಳಗೆ ಡಿಕೆಶಿ ಜೀವನದಲ್ಲಿನ ಬದಲಾವಣೆ ಬಗ್ಗೆ ಹೇಳಿದ್ದಾರೆ.

ಸದ್ಯ ಕರ್ನಾಟಕದ ರಾಜಕೀಯ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಇರುವ ಒಂದು ಮುಖ್ಯಮಂತ್ರಿ ಖುರ್ಚಿಗೆ ಹಲವು ಕಣ್ಣುಗಳು ಬಿದ್ದಿವೆ. ಎರಡೂವರೆ ವರ್ಷಗಳ ಬಳಿಕ ಕಾಂಗ್ರೆಸ್‌ ಅಧಿಕಾರಕ್ಕೆ ಬರುವಲ್ಲಿ ಬಹುದೊಡ್ಡ ಪಾಲು ಹೊತ್ತ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಮಾತುಕೊಟ್ಟ ಸಿಎಂ ಸಿದ್ದರಾಮಯ್ಯ ಈಗ ಉಲ್ಟಾ ಹೊಡೆದಿರುವ ಹಿನ್ನೆಲೆಯಲ್ಲಿ, ಪಕ್ಷದ ಒಳಗೆ ಭಾರಿ ಅಸಮಾಧಾನದ ಹೊಗೆಯಾಡುತ್ತಿದೆ. ಇದಾಗಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೋಗಿ ಬರದ ದೇವಾಲಯಗಳಿಲ್ಲ, ಮಾಡದ ಪೂಜೆಗಳಿಲ್ಲ. ಆದರೂ ಅವರ ಸಿಎಂ ಖುರ್ಚಿಯ ಭವಿಷ್ಯವೇನು ಎನ್ನುವುದು ಇಂದೂ ಗೊತ್ತಿಲ್ಲ. ಒಂದು ವೇಳೆ ಸಿದ್ದರಾಮಯ್ಯನವರು ಸಿಎಂ ಖುರ್ಚಿಯಿಂದ ಕೆಳಕ್ಕೆ ಇಳಿದರೂ, ಆ ಖುರ್ಚಿ ಡಿ.ಕೆ.ಶಿವಕುಮಾರ್‌ ಅವರಿಗೇ ಸಿಗುತ್ತದೆ ಎನ್ನುವ ಭರವಸೆಯೂ ಸದ್ಯಕ್ಕಿಲ್ಲ.

ಡಿಕೆಶಿ ಭವಿಷ್ಯ

ಇಂಥ ಪರಿಸ್ಥಿತಿಯಲ್ಲಿ ಇದಾಗಲೇ ಹಲವು ಜ್ಯೋತಿಷಿಗಳು ಡಿ.ಕೆ.ಶಿವಕುಮಾರ್‌ (DCM D.K.Shivakumar) ಅವರ ಭವಿಷ್ಯವನ್ನು ನುಡಿದಿದ್ದಾರೆ. ಇದೀಗ ರಾಜಕೀಯ ವಲಯದಲ್ಲಿ ಪ್ರಭಾವಿ ಎಂದು ಎನ್ನಿಸಿಕೊಂಡಿರುವ ದ್ವಾರಕಾನಾಥ್‌ ಅವರು ಶಿವಕುಮಾರ್‌ ಅವರ ಸಿಎಂ ಖುರ್ಚಿಯ ಭವಿಷ್ಯವನ್ನು ನುಡಿದಿದ್ದಾರೆ. ಅವರು ಹೇಳಿರುವ ಪ್ರಕಾರನ, 14ನೇ ತಾರೀಖು ರಾತ್ರಿಯ ಕಾಲದಲ್ಲಿ ಮಕರಕ್ಕೆ ಸೂರ್ಯ ಬರುತ್ತಾನೆ. ಸೂರ್ಯನು ಮೇಲ್ಮುಖವಾಗಿ ಹೋಗುತ್ತಾನೆ. ಅದಕ್ಕಿಂತ ಹತ್ತು ದಿನ ಮೊದಲು ಸೌರ್ಯಶಕ್ತಿ ಇಳಿಯುತ್ತಾ ಬರುತ್ತದೆ. ಮಕರ ಸಂಕ್ರಮಣದ ಮೊದಲ ಹತ್ತು ದಿನಗಳ ಬಗ್ಗೆ ಹೇಳುವುದಾದರೆ, ಅದು ಜನವರಿ 5. ಆದ್ದರಿಂದ ಜನವರಿ 5 ರಿಂದ ಜನವರಿ 30ರ ಒಳಗೆ ಡಿಕೆಶಿ ಅವರ ಜೀವನದಲ್ಲಿ ಏನು ಬೇಕಾದರೂ ಆಗಬಹುದು. ಅವರಿಗೆ ಸ್ಥಾನ ಸಿಕ್ಕಿಯೇ ಸಿಗುತ್ತದೆ ಎಂದಿದ್ದಾರೆ ದ್ವಾರಕಾನಾಥ್‌.

ಡಿಕೆಶಿ ಸಂಬಂಧ

ಇನ್ನು ಜ್ಯೋತಿಷಿ ದ್ವಾರಕಾನಾಥ್‌ ಮತ್ತು ಡಿ.ಕೆ.ಶಿವಕುಮಾರ್‌ ಅವರ ಸಂಬಂಧದ ಕುರಿತು ಹೇಳುವುದಾದರೆ, ಇದು ತುಂಬಾ ಹಳೆಯ ಸಂಬಂಧ. ರಾಜಕೀಯ ವಲಯದಲ್ಲಿ ದ್ವಾರಕಾನಾಥ್‌ ಅವರ ಪವರ್‌ಫುಲ್‌ ಜ್ಯೋತಿಷಿ ಎಂದು ಎನ್ನಿಸಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ಇಂದು ಈ ಮಟ್ಟಿಗೆ ಬರುವಲ್ಲಿ ಅದರ ಹಿಂದೆ ದ್ವಾರಕಾನಾಥ್‌ ಅವರ ಕೊಡುಗೆ ಅಪಾರವಾಗಿದೆ ಎನ್ನುವ ಮಾತಿದೆ.

ರಾಜಕೀಯ ಪ್ರಭಾವಿಗಳು

ರಾಜಕೀಯ ಪ್ರಭಾವಿಗಳು ಇವರ ಬಳಿಯೇ ಬಹಳ ವರ್ಷಗಳಿಂದಲೂ ಭವಿಷ್ಯ ಕೇಳುವುದು ಸಾಮಾನ್ಯ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಹಿಡಿದು ಘಟಾನುಘಟಿ ರಾಜಕೀಯ ಮುಖಂಡರು ಇವರ ಬಳಿಯೇ ಜ್ಯೋತಿಷಿ ಕೇಳುತ್ತಿದದರು ಎನ್ನಲಾಗಿದೆ. ಮಾಜಿ ಸಿಎಂ ದೇವರಾಜು ಅರಸು, ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಮಹಾರಾಷ್ಟ್ರ ಮಾಜಿ ಸಿಎಂ ವಿಲಾಸ್ ರಾವ್ ದೇಶ್‍ಮುಖ್, ಉದ್ಯಮಿ ಅನಿಲ್ ಅಂಬಾನಿ ಮಾತ್ರವಲ್ಲದೇ ಬಾಲಿವುಡ್ ತಾರೆಯವರೂ ಇವರ ಬಳಿಯೇ ಭವಿಷ್ಯನಟ-ನಟಿಯರು ದ್ವಾರಕನಾಥ್ ಬಳಿ ಜ್ಯೋತಿಷ್ಯ ಕೇಳುತ್ತಾರೆ ಎನ್ನುವ ಮಾತು ಇದೆ.