ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 35,000 ಮತಗಳ ಅಂತರದಿಂದ ಪರಾಭವ| ಬಸವಣ್ಣ ತತ್ವ ಪಾಲಿಸದ್ದಕ್ಕೆ ಎಚ್‌ಡಿಕೆ ಮಾಜಿಯಾದರು| ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಟೀಕೆ

ಕೆ.ಆರ್‌.ನಗರ[ಆ.18]: ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 35,000 ಮತಗಳ ಅಂತರದಿಂದ ಪರಾಭವಗೊಂಡರೆ, ಬಸವಣ್ಣನವರ ತತ್ವ ಪಾಲಿಸದ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು ಎಂದು ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಟೀಕಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮ ಒಡೆಯುವವರು ಮತ್ತು ವಚನ ಪಾಲಿಸದವರು ಪತನದ ಹಾದಿ ಹಿಡಿಯುತ್ತಾರೆ ಎಂಬುದಕ್ಕೆ ಈ ಎರಡು ಘಟನೆಗಳು ಜ್ವಲಂತ ಸಾಕ್ಷಿ ಎಂದರು. ನಾನು ಸದಾ ಸತ್ಯವನ್ನೇ ಮಾತನಾಡುತ್ತೇನೆ, ಇದರಿಂದ ಕೆಲವರು ನನ್ನನ್ನು ವಿವಾದಾತ್ಮಕ ವ್ಯಕ್ತಿ ಎಂದು ಕರೆಯುತ್ತಾರೆ.

ಆದರೆ, ಬಸವಣ್ಣನ ನೆಲದಲ್ಲಿ ಹುಟ್ಟಿರುವ ನಾವು ಅಂಜಿಕೆಗಳಿಗೆ ಹೆದರದೆ ಸತ್ಯ ಹೇಳಿ ಮುಂದಿನದನ್ನು ದೇವರಿಗೆ ಬಿಡಬೇಕು ಎಂದರು. ಅಯ್ಯ ಎಂದರೆ ಸ್ವರ್ಗ, ಎಲವೋ ಎಂದರೆ ನರಕ. ಸ್ವರ್ಗದ ಮಾತನಾಡದ ಎಚ್‌.ಡಿ.ಕುಮಾರಸ್ವಾಮಿ ನರಕ ಸೃಷ್ಟಿಯ ವರ್ತನೆ ತೋರಿಸಿ ತಮ್ಮ ಅಧಿಕಾರ ಕಳೆದುಕೊಂಡರು. ಧರ್ಮದ ವಿಚಾರದಲ್ಲಿ ಮೂಗು ತೂರಿಸುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.