Asianet Suvarna News Asianet Suvarna News

ಆನ್‌ಲೈನ್‌ನಲ್ಲೇ 16 ಲಕ್ಷ ದೋಖಾ

ಮುಂಬೈನಲ್ಲಿ ಕುಳಿತು ಕಾರ್ಪೆಂಟರ್‌ವೊಬ್ಬ ಬೆಂಗಳೂರಿನ ಕಂಪನಿಯೊಂದರ ಮಾಲೀಕನಿಗೆ ನಕಲಿ ಇ-ಮೇಲ್ ವಿಳಾಸ ನೀಡುವ ಮೂಲಕ ₹16 ಲಕ್ಷ ದೋಖಾ ಮಾಡಿ ನಗರ ಸೈಬರ್ ಪೊಲೀಸರ ಅತಿಥಿಯಾಗಿದ್ದಾನೆ.

Business Man Duped of Rs 16 Lakhs in Online Fraud

ಬೆಂಗಳೂರು: ಮುಂಬೈನಲ್ಲಿ ಕುಳಿತು ಕಾರ್ಪೆಂಟರ್‌ವೊಬ್ಬ ಬೆಂಗಳೂರಿನ ಕಂಪನಿಯೊಂದರ ಮಾಲೀಕನಿಗೆ ನಕಲಿ ಇ-ಮೇಲ್ ವಿಳಾಸ ನೀಡುವ ಮೂಲಕ ₹16 ಲಕ್ಷ ದೋಖಾ ಮಾಡಿ ನಗರ ಸೈಬರ್ ಪೊಲೀಸರ ಅತಿಥಿಯಾಗಿದ್ದಾನೆ.

ಜಾರ್ಖಂಡ್ ಮೂಲದ ಆಶಿಶ್ ಕುಮಾರ್ (23) ಬಂಧಿತ. ನಗರದ ಕೆ.ಆರ್.ರಸ್ತೆಯಲ್ಲಿರುವ ‘ಕೆಮಿಕ್ಸೆಲ್ ಕಾರ್ಪೋರೇಷನ್’ ಕಂಪನಿಯ ಮಾಲೀಕ ಶ್ರೇಯಸ್ ಕಶ್ಯಪ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಸೈಬರ್ ಠಾಣೆಯ ಪೊಲೀಸರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಘಟನೆ ಸಂಬಂಧ ‘ಕೆಮಿಕ್ಸೆಲ್ ಕಾರ್ಪೋರೇಷನ್’ ಕಂಪನಿ ವ್ಯವಹಾರ ನಡೆಸುವ ‘ಯೂನಿವರ್ಸ್‌ಲ್ ಬಯೋ ಫ್ಯೂಯಲ್ಸ್ ಲಿಮಿಟೆಡ್’ ಕಂಪನಿ ಕೂಡ ಹೈದರಾಬಾದ್ ಸೈಬರ್ ಪೊಲೀಸರಿಗೆ ದೂರು ನೀಡಿದೆ. ವಂಚನೆ ಹಿಂದೆ ದೊಡ್ಡ ಜಾಲದ ಕೈವಾಡ ಇರುವ ಶಂಕೆ ಇದ್ದು, ‘ಮುತ್ತಿನ ನಗರಿ’ ಪೊಲೀಸರು ಕೂಡ ಆರೋಪಿಗಳ ಜಾಲದ ಬೆನ್ನತ್ತಿದ್ದಾರೆ.

ಏನಿದು ಘಟನೆ?: ಅಮೆರಿಕ ಮೂಲದ ‘ಯೂನಿವರ್ಸಲ್ ಬಯೋ ಫ್ಯೂಯಲ್ಸ್’ ಕಂಪನಿ ದೇಶದ ಪ್ರಮುಖ ನಗರಗಳಿಗೆ ಗ್ಲಿಸರಿನ್ ವಸ್ತುಗಳನ್ನು ಪೂರೈಕೆ ಮಾಡುತ್ತದೆ. ಇದರ ಕೇಂದ್ರ ಕಚೇರಿ ಅಮೆರಿಕದಲ್ಲಿದ್ದು, ಹೈದರಾಬಾದ್ ಮತ್ತು ಸಿಕಂದ್ರಾಬಾದ್‌ನಲ್ಲಿ ಶಾಖೆ ಹೊಂದಿದೆ. ಈ ಕಂಪನಿ ನಗರದಲ್ಲಿರುವ ‘ಕೆಮಿಕಲ್ ಕಾರ್ಪೋರೇಷನ್’ ಕಂಪನಿಯೊಂದಿಗೆ ವ್ಯವಹಾರ ಹೊಂದಿದ್ದು, ಕೆಮಿಕ್ಸೆಲ್ ಕಂಪನಿಗೆ ಗ್ಲಿಸರಿನ್ ವಸ್ತುಗಳನ್ನು ಪೂರೈಕೆ ಮಾಡುತ್ತದೆ. ನ.14ರಂದು ಕೆಮಿಕ್ಸೆಲ್ ಕಂಪನಿಯ ಮಾಲೀಕ ಶ್ರೇಯಸ್, ಗ್ಲಿಸರಿನ್ ವಸ್ತುಗಳನ್ನು ಪೂರೈಸುವಂತೆ ಹೈದರಾಬಾದ್‌ನಲ್ಲಿರುವ ‘ಯೂನಿವರ್ಸ್‌ಲ್ ಬಯೋ ಫ್ಯೂಯಲ್ಸ್’ ಕಂಪನಿಯ ಮೇಲ್ವಿಚಾರಕ ಕೃಷ್ಣಮೋಹನ್ ಎಂಬುವರ krishnamohan@universalbiofuelsltd.com ಈ ಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿದ್ದರು.

ಬಳಿಕ ಕೃಷ್ಣಮೋಹನ್ ಅವರ ಜತೆ ಶ್ರೇಯಸ್ ಗ್ಲಿಸರಿನ್ ವಸ್ತು ಪೂರೈಕೆ ಬಗ್ಗೆ ಫೋನ್‌ನಲ್ಲಿ ಸಂಭಾಷಣೆ ನಡೆಸಿದ್ದರು. ಈ ವೇಳೆ ಹಣ ವರ್ಗಾವಣೆ ಮಾಡುವ ಸಂಬಂಧ ಕೂಡ ಮಾತನಾಡಿದ್ದರು. ಇಬ್ಬರು ಮುಖ್ಯಸ್ಥರ ನಡುವೆ ಸಂಭಾಷಣೆ ನಡೆದ ಅರ್ಧ ತಾಸಿನಲ್ಲೇ krishnamohan@universalbiofuelsltd.cf ಮೇಲ್‌ನಿಂದ ಆ್ಯಕ್ಸಿಸ್ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ₹16.04 ಲಕ್ಷ ಹಣ ವರ್ಗಾವಣೆ ಮಾಡುವಂತೆ ಖಾತೆ ಸಂಖ್ಯೆ ನೀಡಲಾಗಿತ್ತು.

ಸರಿಯಾಗಿ ಈ ಮೇಲ್ ವಿಳಾಸ ಗ್ರಹಿಸದ ಶ್ರೇಯಸ್, ಆರೋಪಿಗಳು ನೀಡಿದ್ದ ಖಾತೆಗೆ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಮರು ದಿನ ‘ಯೂನಿವರ್ಸ್‌ಲ್ ಬಯೋ ಫ್ಯೂಯಲ್ಸ್’ ಕಂಪನಿಯ ಮೇಲ್ವಿಚಾರಕ ಕೃಷ್ಣಮೋಹನ್ ಅವರಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದ್ದರು.

ಕೃಷ್ಣಮೋಹನ್ ಅವರು ಪರಿಶೀಲಿಸಿದಾಗ ಯಾವುದೇ ಹಣ ಕಂಪನಿಯ ಖಾತೆಗೆ ಜಮೆಯಾಗಿರಲಿಲ್ಲ. ಆ್ಯಕ್ಸಿಸ್ ಬ್ಯಾಂಕ್ ಖಾತೆಗೆ ಜಮೆ ಮಾಡಿರುವುದಾಗಿ ಶ್ರೇಯಸ್ ತಿಳಿಸಿದ್ದರು. ಈ ವೇಳೆ ಪ್ರತಿಕ್ರಿಯಿಸಿರುವ ಕೃಷ್ಣಮೋಹನ್ ನಾವು ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿಲ್ಲ ಎಂದು ಶ್ರೇಯಸ್‌ಗೆ ತಿಳಿಸಿದ್ದರು.

ಆತಂಕಗೊಂಡ ಶ್ರೇಯಸ್ ಈ ಮೇಲ್ ವಿಳಾಸ ಪರಿಶೀಲಿಸಿದಾಗ ಕೃಷ್ಣಮೋಹನ್ ಎಂಬ ವಿಳಾಸದ ಕೊನೆಯಲ್ಲಿ ಕೊನೆ ಅಕ್ಷರ ‘ಸಿಎಫ್’ ಎಂಬುದನ್ನು ಬದಲಿಸಿ ಶ್ರೇಯಸ್ ಅವರಿಗೆ ಸಂದೇಶ ರವಾನಿಸಲಾಗಿತ್ತು. ವಂಚನೆಗೆ ಒಳಗಾಗಿರುವುದನ್ನು ಅರಿತ ಶ್ರೇಯಸ್ ನ.15 ರಂದು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹಣ ಡ್ರಾ ಮಾಡಲು ಹೋಗಿ ಸಿಕ್ಕಿಬಿದ್ದ:

ಮುಂಬೈನ ‘ವಿಲ್ಲೆ ಪಾರ್ಲೆ’ಯಲ್ಲಿರುವ ಆ್ಯಕ್ಸಿಸ್ ಬ್ಯಾಂಕ್‌ನ ಶಾಖೆಗೆ ಹಣ ಜಮೆಯಾಗಿರುವುದನ್ನು ತಿಳಿದ ನಗರ ಪೊಲೀಸರು ಅಲ್ಲಿನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಬ್ಯಾಂಕ್ ಖಾತೆಯ ಹಣ ವರ್ಗಾವಣೆ ಆಗದಂತೆ ತಡೆಯಲು ಮನವಿ ಮಾಡಿದ್ದರು. ಅದರಂತೆ ಸ್ಥಳೀಯ ಪೊಲೀಸರು ಬ್ಯಾಂಕ್ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರು. ನ.19ರಂದು ಆರೋಪಿ ಆಶಿಶ್ ಹಣ ಡ್ರಾ ಮಾಡಲು ಬ್ಯಾಂಕ್‌ಗೆ ಬಂದಿದ್ದ. ಈ ವೇಳೆ ಬ್ಯಾಂಕ್ ಸಿಬ್ಬಂದಿ ಆರೋಪಿ ಹಣ ಡ್ರಾ ಮಾಡಲು ಬಂದಿರುವ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ತೆರಳಿದ್ದ ಪೊಲೀಸರು ಆರೋಪಿ ಆಶಿಶ್‌ನನ್ನು ವಶಕ್ಕೆ ಪಡೆದು ನಗರ ಸೈಬರ್ ಕ್ರೈಂ ಪೊಲೀಸರ ಸುರ್ಪದಿಗೆ ಒಪ್ಪಿಸಿದ್ದಾರೆ.

ದೊಡ್ಡ ಜಾಲದ ಶಂಕೆ:

23 ವರ್ಷದ ಆರೋಪಿ, ವಿಚಾರಣೆ ವೇಳೆ ಮುಂಬೈ ನಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತೇನೆ. ಜಾರ್ಖಂಡ್‌ನಲ್ಲಿರುವ ಸ್ನೇಹಿತ ಹೇಳಿದ್ದಂತೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಲೆ ಬೀಸಲಾಗಿದೆ ಎಂದು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದರು. ಇನ್ನು 2 ಕಂಪನಿಗಳ ನಡುವೆ ವಸ್ತು ಪೂರೈಕೆ ಸಂಬಂಧ ಮಾತುಕತೆ ನಡೆದ ಅರ್ಧ ತಾಸಿನಲ್ಲೇ ನಕಲಿ ಈ ಮೇಲ್ ವಿಳಾಸ ದಲ್ಲಿ ಸಂದೇಶ ಬಂದಿರುವುದನ್ನು ನೋಡಿದರೆ, ‘ಯೂನಿವರ್ಸ್‌ಲ್ ಬಯೋ ಫ್ಯೂಯಲ್ಸ್’ ಕಂಪನಿಯ ಸರ್ವರ್ ಹ್ಯಾಕ್ ಆಗಿರುವ ಸಾಧ್ಯತೆ ಇದೆ.

ಇದರ ಹಿಂದೆ ದೊಡ್ಡ ಜಾಲ ಇರುವ ಶಂಕೆ ಇದ್ದು, ಹೈದರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಹೈದರಾಬಾದ್ ಪೊಲೀಸರು ನಗರ ಸೈಬರ್ ಕ್ರೈಂ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Latest Videos
Follow Us:
Download App:
  • android
  • ios