ಕೋಲ್ಕತಾದಲ್ಲಿ 1 ರು. ಕೊಟ್ಟು 17 ಕಿ.ಮೀ. ಬಸ್‌'ನಲ್ಲಿ ಸಂಚರಿಸಿ...

ಕೋಲ್ಕತಾ: 1 ರುಪಾಯಿಗೆ ಒಳ್ಳೆಯ ಚಾಕೋಲೆಟ್‌ ಕೂಡ ಬರುವುದಿಲ್ಲ. ಅಂಥದ್ದರಲ್ಲಿ ಕೋಲ್ಕತಾ ಮೂಲದ ಕಂಪನಿ ಯೊಂದು ಕೇವಲ 1 ರು.ಗೆ 17.5 ಕಿ.ಮೀ. ದೂರದವರೆಗೆ ಬಸ್‌ ಪ್ರಯಾಣ ಮಾಡಲು ಜನರಿಗೆ ಅವಕಾಶ ಕಲ್ಪಿಸುತ್ತಿದೆ!

ಶುಕ್ರವಾರದಿಂದ ಇಂತಹದ್ದೊಂದು ಬಸ್‌ ಸೇವೆ ಕೋಲ್ಕತಾದಲ್ಲಿ ಆರಂಭವಾಗಿದೆ. ಫೀನಿಕ್ಸ್‌ ಇಂಡಿಯಾ ರೀಸರ್ಚ್ ಮತ್ತು ಡೆವಲಪ್‌ಮೆಂಟ್‌ ಗ್ರೂಪ್‌ ಎಂಬ ಕಂಪನಿ ಗೋವಿನ ಸಗಣಿಯಿಂದ ತಯಾರಿಸಲಾದ ಬಯೋಗ್ಯಾಸ್‌ನಿಂದ ಓಡುವ ಬಸ್‌ ಅನ್ನು ವಿನ್ಯಾಸಗೊಳಿಸಿದೆ. ಈ ಬಸ್‌ನಲ್ಲಿ 17.5 ಕಿ.ಮೀ. ದೂರದ ಪ್ರಯಾಣಕ್ಕೆ ಕೇವಲ 1 ರು. ದರ ನಿಗದಿಪಡಿಸಿ ಗಮನ ಸೆಳೆದಿದೆ. ಇಷ್ಟುಕಡಿಮೆ ಬಸ್‌ ಪ್ರಯಾಣ ದರ ದೇಶದಲ್ಲಿ ಎಲ್ಲೂ ಇಲ್ಲ ಎಂಬುದು ಗಮನಾರ್ಹ. ಕೋಲ್ಕತಾದಲ್ಲೇ ಬಸ್‌ ಟಿಕೆಟ್‌'ಗೆ ಕನಿಷ್ಠ 6 ರು. ಇದೆ.

ಪ್ರಾಣಿಗಳು ಹಾಗೂ ಸಸ್ಯದ ತ್ಯಾಜ್ಯದಿಂದ ಬಯೋಗ್ಯಾಸ್‌ ಅನ್ನು ಈ ಕಂಪನಿ ತಯಾರಿಸುತ್ತದೆ. ಇದಕ್ಕಾಗಿ ಪ್ರತ್ಯೇಕ ಘಟಕವೊಂದನ್ನು ಹೊಂದಿದೆ. ಅದು ಮೀಥೇನ್‌ ಅನಿಲವಾಗಿದ್ದು, ವಿಷಕಾರಿಯಲ್ಲ, ಶುದ್ಧ ಇಂಧನವಾಗಿದೆ. ಪರಿಸರ ಸ್ನೇಹಿಯೂ ಆಗಿದೆ. ಒಂದು ಕೆ.ಜಿ. ಬಯೋಗ್ಯಾಸ್‌ ತಯಾರಿಸಲು 20 ರು. ವೆಚ್ಚವಾಗುತ್ತದೆ. 1 ಕೆ.ಜಿ. ಗ್ಯಾಸ್‌'ನಿಂದ 5 ಕಿ.ಮೀ.ವರೆಗೆ ಬಸ್‌ ಚಲಿಸುತ್ತದೆ. ಬಸ್‌ ಮೇಲೆ ಜಾಹೀರಾತು ಪ್ರಕಟಣೆ ಮೂಲಕ ಚಾಲಕ, ನಿರ್ವಾಹಕರಿಗೆ ಸಂಬಳ ಸಿಗುವಂತೆ ಮಾಡುತ್ತದೆ. ಹೀಗಾಗಿ ಇಷ್ಟು ಕಡಿಮೆ ಪ್ರಯಾಣದರವನ್ನು ನಿಗದಿಪಡಿಸಿದೆ. 13 ಲಕ್ಷ ರು. ವೆಚ್ಚದಲ್ಲಿ 54 ಆಸನವುಳ್ಳ ಬಸ್‌'ಗಳ ಉತ್ಪಾದನೆಗೆಂದು ಅಶೋಕ್‌ ಲೇಲ್ಯಾಂಡ್‌ ಕಂಪನಿ ಜತೆ ಫೀನಿಕ್ಸ್‌ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಇದೇ ವರ್ಷದಲ್ಲಿ ಇಂಥ 15 ಬಸ್‌'ಗಳನ್ನು ರಸ್ತೆಗೆ ಇಳಿಸಲು ನಿರ್ಧರಿಸಿದೆ.

epaper.kannadaprabha.in