ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಣ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಂಪರ್ ಟಿಕೆಟ್ ಪಡೆಯುವುದು ಬಹುತೇಕ ಖಚಿತ.
ಬೆಂಗಳೂರು (ಜ.2): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಣ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಂಪರ್ ಟಿಕೆಟ್ ಪಡೆಯುವುದು ಬಹುತೇಕ ಖಚಿತ. ಸಿಎಂ ಅವರಿಗೆ ಆಪ್ತರೆನಿಸಿದ ಇಬ್ಬರು ಹಿರಿಯ ಅಧಿಕಾರಿಗಳು ಹಾಗೂ ಇಬ್ಬರು ವಿಧಾನಪರಿಷತ್ ಸದಸ್ಯರು ಪಕ್ಷದ ಉಮೇದುವಾರಿಕೆ ಗಿಟ್ಟಿಸುವುದು ಬಹುತೇಕ ಅಂತಿಮ ಎನ್ನಲಾಗುತ್ತಿದೆ.
ಇದಲ್ಲದೆ, ಇನ್ನು ಕೆಲವು ಆಪ್ತರು ವಿಧಾನಸಭೆ ಚುನಾವಣೆಗೆ ಟಿಕೆಟ್ ಗೆ ಪ್ರಯತ್ನಿಸಿದ್ದರೂ ಅವರಿಗೆ ಟಿಕೆಟ್ ದೊರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ತಿಳಿಸಿರುವ ಕಾರಣ ಅವರೀಗ ಮುಂದಿನ ಜೂನ್-ಜುಲೈನಲ್ಲಿ ತೆರವಾಗುವ ವಿಧಾನಪರಿಷತ್ ಸದಸ್ಯ ಸ್ಥಾನದ ಆಕಾಂಕ್ಷಿಗಳಾಗಿ ಬದಲಾಗಿದ್ದಾರೆ.
ಕುತೂಹಲಕಾರಿ ಸಂಗತಿಯೆ ಎಂದರೆ, ಮುಖ್ಯಮಂತ್ರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೈಕಿ ಇಬ್ಬರು ಅಧಿಕಾರಗಳು ಈ ಬಾರಿ ಟಿಕೆಟ್ ಗಿಟ್ಟಿಸುವುದು ಬಹುತೇಕ ಖಚಿತವಾಗಿದೆ. ಇದರಲ್ಲಿ ಒಬ್ಬರು ಟಿಕೆಟ್ ಬಯಸಿರುವ ಕ್ಷೇತ್ರದಲ್ಲಿ ಹಾಲಿ ಶಾಸಕ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಕಾಂಗ್ರೆಸ್‌ನ ಶಿವಮೂರ್ತಿ ನಾಯ್ಕ್ ಶಾಸಕರಾಗಿರುವ ಮಾಯಕೊಂಡ ಕ್ಷೇತ್ರದಿಂದ ಈ ಬಾರಿ ಟಿಕೆಟ್ ಪಡೆಯುವಲ್ಲಿ ಮುಂಚೂಣಿಯಲ್ಲಿರುವವರು ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ಹೀರಾನಾಯ್ಕ್.
ಸೌಮ್ಯ ಸ್ವಭಾವದ ಹೀರಾನಾಯ್ಕ್ ಅವರು ಮಾಯಕೊಂಡ ಕ್ಷೇತ್ರದ ಟಿಕೆಟ್ ಪಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಶಿವಮೂರ್ತಿ ನಾಯ್ಕ್ ಅವರು ಮತ್ತೆ ಸ್ಪರ್ಧಿಸಿದರೆ ಸೋಲು ಗ್ಯಾರಂಟಿ ಎಂಬ ಸಮೀಕ್ಷೆಯ ವರದಿ. ಕೆಪಿಸಿಸಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ನಡೆಸಿದ ಸಮೀಕ್ಷೆಯಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ಶಿವಮೂರ್ತಿ ನಾಯ್ಕ್ ಅವರು ಮತ್ತೆ ಸ್ಪರ್ಧಿಸಿದರೆ ಅವರು ಗೆಲ್ಲುವ ಸಾಧ್ಯತೆ ಕಡಿಮೆ ಎಂಬ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಲಂಬಾಣಿ ಸಮುದಾಯಕ್ಕೆ ಸೇರಿದ ಹೊಸ ಅಭ್ಯರ್ಥಿ ಹುಡುಕಾಟದಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೀರಾನಾಯ್ಕ ಹೆಸರು ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಉಳಿದಂತೆ ಮುಖ್ಯಮಂತ್ರಿಯವರ ಅಪರ ಕಾರ್ಯದರ್ಶಿಯಾಗಿರುವ ಭೀಮಸೇನ ಶಿಂಧೆ ಅವರಿಗೆ ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಟಿಕೆಟ್ ಖಚಿತವಾಗಿದ್ದು, ಅವರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಶಿಂಧೆ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಕೂಡ ಒಪ್ಪಿದೆ ಎನ್ನಲಾಗುತ್ತಿದೆ.
ಈ ಇಬ್ಬರು ಅಧಿಕಾರಿಗಳ ಹೊರತಾಗಿ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರ ಹೆಸರು ಮೂಡುಬಿದಿರೆ ಕ್ಷೇತ್ರಕ್ಕೆ ಕೇಳಿ ಬಂದಿತ್ತು. ಹಾಲಿ ಶಾಸಕ ಅಭಯಚಂದ್ರ ಜೈನ್ ನಿರಾಸಕ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಅಮೀನ್‌ಮಟ್ಟು ಅವರ ಹೆಸರನ್ನು ಗಂಭೀರವಾಗಿಯೇ ಪರಿಗಣಿಸಾಲಾಗಿತ್ತು. ಇದೇ ಕ್ಷೇತ್ರಕ್ಕೆ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಹಾಗೂ ಯುವ ನಾಯಕ ಮಿಥುನ್ ರೈ ಕೂಡ ತೀವ್ರ ಪೈಪೋಟಿ ನಡೆಸಿದ್ದರು. ಆದರೆ, ರಾಜ್ಯದ ಜೈನ ಸಮುದಾಯದ ಪ್ರಮುಖರ ಮನವೊಲಿಕೆಯ ನಂತರ ಈಗ ಅಭಯಚಂದ್ರ ಜೈನ್ ಅವರೇ ಈ ಕ್ಷೇತ್ರದಿಂದ ಸ್ಪರ್ಧಿಸಲು ಅಣಿಯಾಗಿದ್ದಾರೆ ಎನ್ನಲಾಗುತ್ತಿದೆ. ರೇವಣ್ಣ ಮಹಾಲಕ್ಷ್ಮೀ ಲೇಔಟ್,
ಬೈರತಿ ಸುರೇಶ್ ಹೆಬ್ಬಾಳಕ್ಕೆ ಖಚಿತ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಣದ ಹಲವರು ಬೆಂಗಳೂರಿನ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಲು ಆಸಕ್ತಿ ಹೊಂದಿದ್ದರು. ಈ ಪೈಕಿ ಕೆಲವರು ನಿರ್ದಿಷ್ಟ ಕ್ಷೇತ್ರಕ್ಕಾಗಿ ತೀವ್ರ ಪೈಪೋಟಿಯನ್ನು ನಡೆಸಿದ್ದರು. ಉದಾಹರಣೆಗೆ ಹೆಬ್ಬಾಳ ಕ್ಷೇತ್ರದಲ್ಲಿ ಬೈರತಿ ಸುರೇಶ್ ಸ್ಪರ್ಧಿಸುವ ಬಯಕೆ ಹೊಂದಿದ್ದರೆ, ಇದೇ ಕ್ಷೇತ್ರದ ಮೇಲೆ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಕೂಡ ಆಸಕ್ತರಾಗಿದ್ದರು. ಈ ಪೈಪೋಟಿ ಸಿಎಂಗೆ ತಲೆನೋವು ಸಹ ಆಗಿತ್ತು. ಆದರೆ, ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಬ್ಬಾಳ ಕ್ಷೇತ್ರಕ್ಕೆ ಬೈರತಿ ಸುರೇಶ್ ಸ್ಪರ್ಧೆಗೆ ಅಡ್ಡಿಪಡಿಸದಂತೆ ರೇವಣ್ಣ ಅವರಿಗೆ ಮನವೊಲಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಬದಲಾಗಿ, ರೇವಣ್ಣ ಅವರಿಗೆ ಮಹಾಲಕ್ಷ್ಮಿ ಲೇಔಟ್‌ನಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ 4 ಕುರುಬರಿಗೆ ಟಿಕೆಟ್: ಮುಖ್ಯಮಂತ್ರಿಯವರ ಈ ನಡೆಯಿಂದಾಗಿ ಬೆಂಗಳೂರು ಭಾಗದ ನಾಲ್ಕು ಕ್ಷೇತ್ರಗಳಲ್ಲಿ ಕುರುಬ ಜನಾಂಗದವರಿಗೆ ಟಿಕೆಟ್ ದೊರೆಯುವ ಸನ್ನಿವೇಶ ನಿರ್ಮಾಣವಾಗಿದೆ. ಈಗಾಗಲೇ ಹೊಸಕೋಟೆಯಿಂದ ಎಂ.ಟಿ.ಬಿ. ನಾಗರಾಜ್ ಹಾಗೂ ಕೆ.ಆರ್. ಪುರದಿಂದ ಬೈರತಿ ಬಸವರಾಜ ಅವರು ಕಾಂಗ್ರೆಸ್ ಪಕ್ಷವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಇವರಿಗೆ ಟಿಕೆಟ್ ಮತ್ತೆ ಸಿಗುವುದು ಖಚಿತ. ಈಗ ಬೈರತಿ ಸುರೇಶ್ ಮತ್ತು ರೇವಣ್ಣ ಸೇರಿದರೆ ಒಟ್ಟು ೪ ಮಂದಿ ಟಿಕೆಟ್ ಪಡೆದಂತಾಗುತ್ತದೆ.
