ನವದೆಹಲಿ[ಜು.15]: ವಿಮಾನದಲ್ಲಿ ನಿಗದಿಗಿಂತ ಹೆಚ್ಚಿನ ಲಗೇಜ್‌ ಇದ್ದರೆ ಅದನ್ನು ಪ್ರತ್ಯೇಕ ಜಾಗದಲ್ಲಿ ಇಡುವುದು, ಆ ಮಿತಿಯನ್ನೂ ಮೀರಿದರೆ ಅದಕ್ಕ ಹೆಚ್ಚುವರಿ ಶುಲ್ಕ ತೆರಬೇಕಾದ ನಿಯಮ ಜಾರಿಯಲ್ಲಿದೆ. ಈ ನಿಯಮವನ್ನು 2025ರಲ್ಲಿ ಭಾರತದಲ್ಲೂ ಓಡಲಿದೆ ಎಂದು ಅಂದಾಜಿಸಲಾದ ಮೊದಲ ಬುಲೆಟ್‌ ರೈಲಿಗೂ ವಿಸ್ತರಿಸುವ ಯೋಜನೆಯನ್ನು ಅಧಿಕಾರಿಗಳು ಹಾಕಿಕೊಂಡಿದ್ದಾರೆ.

ಮುಂಬೈ ಮತ್ತು ಅಹಮದಾಬಾದ್‌ ಮಾರ್ಗದಲ್ಲಿ ಓಡಲಿರುವ ಮೊದಲ ಬುಲೆಟ್‌ ರೈಲಿನಲ್ಲಿ ಪ್ರಯಾಣಿಕರಿಗೆ ತಮ್ಮ ಜೊತೆ ಸಣ್ಣ ಬ್ಯಾಗ್‌ ಇಟ್ಟುಕೊಳ್ಳಲು ಮಾತ್ರವೇ ಅವಕಾಶ ಮಾಡಿಕೊಡಲಾಗುವುದು. ಉಳಿದ ಬ್ಯಾಗ್‌ಗಳನ್ನು ಕಡೆಯ ಬೋಗಿಯಲ್ಲಿನ ಕೆಲ ಸೀಟುಗಳನ್ನು ತೆಗೆದು, ಅಲ್ಲಿ ಲಗೇಜ್‌ ಇಡಲು ವ್ಯವಸ್ಥೆ ಮಾಡಲಾಗುವುದು. ಒಂದು ವೇಳೆ ಲಗೇಜ್‌ ತೂಕ ನಿಗದಿತ ಮಿತಿ ದಾಟಿದರೆ ಅದಕ್ಕೆ ಹೆಚ್ಚಿನ ಶುಲ್ಕ ವಿಧಿಸಲೂ ಅಧಿಕಾರಿಗಳು ಯೋಜಿಸಿದ್ದಾರೆ.

ಈ ನಿಯಮ ಜಾರಿ ಮಾಡಿದ್ದು ಹಣ ಗಳಿಕೆಯ ಉದ್ದೇಶವಲ್ಲ. ಹೆಚ್ಚಿನ ಲಗೇಜು ಸಾಗಣೆಗೆ ಕಡಿವಾಣ ಹಾಕಲು ಈ ಕ್ರಮ ವಹಿಸಲಾಗಿದೆ. ಈ ರೀತಿ ಮಾಡಲಾಗದಿದ್ದರೆ ಜನರನ್ನು ನಿಯಂತ್ರಿಸಲು ಅಸಾಧ್ಯ. ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆ ಲಗೇಜುಗಳನ್ನು ಕಡಿಮೆ ಪ್ರಮಾಣದಲ್ಲಿ ಕೊಂಡೊಯ್ಯಬೇಕು ಎಂಬ ಕಾರಣಕ್ಕಾಗಿ ಹೆಚ್ಚಿನ ಲಗೇಜಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ ಎಂದು ರಾಷ್ಟ್ರೀಯ ಹೈ ಸ್ಪೀಡ್‌ ರೈಲು ನಿಗಮ(ಎನ್‌ಎಚ್‌ಎಸ್‌ಆರ್‌ಸಿಎಲ್‌) ಸ್ಪಷ್ಟನೆ ನೀಡಿದೆ.