ಈ ಕಳ್ಳರು ಕದಿಯೋದು ಬುಲೆಟ್’ಗಳನ್ನು ಮಾತ್ರ : ಯಾಕೆ ಗೊತ್ತಾ..?

Bullet Thives Arrest In Bengaluru
Highlights

ಐಷಾರಾಮಿ ಎನ್‌ಫೀಲ್ಡ್ ಕಂಪನಿಯ ಬುಲೆಟ್ ಬೈಕ್‌ಗಳನ್ನೇ ಕಳವು ಮಾಡುತ್ತಿದ್ದ ತಮಿಳುನಾಡು ಮೂಲದ ಇಬ್ಬರು ಅಂತಾರಾಜ್ಯ ಕಳ್ಳರು ವಿವೇಕನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು: ಐಷಾರಾಮಿ ಎನ್‌ಫೀಲ್ಡ್ ಕಂಪನಿಯ ಬುಲೆಟ್ ಬೈಕ್‌ಗಳನ್ನೇ ಕಳವು ಮಾಡುತ್ತಿದ್ದ ತಮಿಳುನಾಡು ಮೂಲದ ಇಬ್ಬರು ಅಂತಾರಾಜ್ಯ ಕಳ್ಳರು ವಿವೇಕನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮಣಿಕಂಠ ಮತ್ತು ಸೇಲಂ ಜಿಲ್ಲೆಯ ಅರ್ಜುನ್ ಬಂಧಿತರು. ಆರೋಪಿಗಳಿಂದ 21 ಲಕ್ಷ ಮೌಲ್ಯದ ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಬೈಕ್ ಕಳವು ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಆರೋಪಿಗಳು ಬಸ್ ಮೂಲಕ ತಮಿಳುನಾಡಿನಿಂದ ರಾತ್ರಿ ವೇಳೆ ನಗರಕ್ಕೆ ಬರುತ್ತಿದ್ದರು. ಬಳಿಕ ರಾತ್ರಿ ಇಡೀ ನಗರದ ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿ ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗಳ ಹ್ಯಾಂಡಲ್ ಲಾಕ್ ಮುರಿದು ಕದ್ದ ಬೈಕ್ ಜತೆಯಲ್ಲೇ ತಮಿಳುನಾಡಿಗೆ ಪರಾರಿಯಾಗುತ್ತಿದ್ದರು.

ಆರೋಪಿಗಳು ಕದ್ದ ಬೈಕ್‌ಗಳನ್ನು ತಮಿಳುನಾಡಿನಲ್ಲಿರುವ ವ್ಯಕ್ತಿಯೋರ್ವನಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ಎನ್‌ಫೀಲ್ಡ್ ಕಂಪನಿ ಹೊರತು ಬೇರೆ ಕಂಪನಿಯ ಕದ್ದ ಬೈಕ್‌ಗಳನ್ನು ವ್ಯಕ್ತಿ ಹೆಚ್ಚು ಖರೀದಿಸುತ್ತಿರಲಿಲ್ಲ. ಹೀಗಾಗಿ ಆರೋಪಿಗಳು ಎನ್‌ಫೀಲ್ಡ್ ಕಂಪನಿಯ ಬುಲೆಟ್ ಬೈಕ್‌ಗಳನ್ನೇ ಕಳವು ಮಾಡುತ್ತಿದ್ದರು.

ಮಾರಾಟ ಮಾಡಿ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು. ಕದ್ದ ಬೈಕ್‌ಗಳ ನಂಬರ್ ಪ್ಲೇಟ್ ಬದಲಿಸಿ ಹಳ್ಳಿಗಳಲ್ಲಿ ಓಡಾಡಿಸಲಾಗುತ್ತಿತ್ತು. ಕಡಿಮೆ ಮೊತ್ತಕ್ಕೆ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದರಿಂದ ಕೊಳ್ಳುವವರು ಯಾವುದೇ ದಾಖಲೆ ಕೇಳುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳವು ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ. ಬಂಧಿತರಿಂದ ಬೈಕ್ ಖರೀದಿಸುತ್ತಿದ್ದ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿಗಳ ವಿರುದ್ಧ ತಮಿಳುನಾಡಿನಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಬಂಧಿತರು. ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಕೃತ್ಯ ಮುಂದುವರೆಸಿದ್ದರು.

ಆರೋಪಿಗಳ ಬಂಧನದಿಂದ ವಿವೇಕನಗರ ಠಾಣಾ ವ್ಯಾಪ್ತಿಯ 10 ಬುಲೆಟ್, ಪರಪ್ಪನ ಅಗ್ರಹಾರದ 2 ಹಾಗೂ ಅಶೋಕನಗರ ಠಾಣಾ ವ್ಯಾಪ್ತಿಯ ಬುಲೆಟ್ ಕಳವು ಪ್ರಕರಣ ಬೆಳಕಿಗೆ ಬಂದಿದೆ. ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಬುಲೆಟ್ ಕಳವು ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳ ಬಂಧನಕ್ಕೆ ಇನ್ಸ್‌ಪೆಕ್ಟರ್ ದಿವಾಕರ್ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದರು.

loader