ಮುಂಬೈ [ಜು.16] :  ಮುಂಬೈನ ಡೋಂಗ್ರಿ ಪ್ರದೇಶದಲ್ಲಿ ಬಹು ಮಹಡಿ ಕಟ್ಟಡವೊಂದು ಕುಸಿದು 12 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 40 ಕ್ಕೂ ಮಂದಿ ಅವಶೇಷದ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಕಟ್ಟಡದ ಅಡಿಯಲ್ಲಿ ಸಿಲುಕಿರುವವರನ್ನು ಹೊರಕ್ಕೆ ತರುವ ಯತ್ನ ನಡೆಸಲಾಗುತ್ತಿದೆ. 

ಬೆಳಗ್ಗೆ 11.40ರ ಸುಮಾರಿಗೆ ಕಟ್ಟಡ ಏಕಾ ಏಕಿ ಕುಸಿದು ಬಿದ್ದು ದುರಂತ ಸಂಭವಿಸಿದೆ. ಈ ಕಟ್ಟಡದಲ್ಲಿ ಸುಮಾರು 40 ಜನ ವಾಸ ಮಾಡುತ್ತಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. 

ಕಳೆದ ಕೆಲ ದಿನಗಳ ಹಿಂದಷ್ಟೇ ಮಲಾಡ್ ಪ್ರದೇಶದಲ್ಲಿ ಬೃಹತ್ ಕಟ್ಟಡ ಕುಸಿದು 20ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಇದರಿಂದ ಮುಂಬೈ ಮಹಾನಗರ ಪಾಲಿಕೆ ಹಳೆಯ ಕಟ್ಟಡಗಳ ಪರಿಶೀಲನೆಗೆ ತಂಡವೊಂದನ್ನು ರಚಿಸಿತ್ತು. 

ಇದೇ ಬೆನ್ನಲ್ಲೇ ಕಟ್ಟಡ ಕುಸಿದು ದುರಂತ ಸಂಭವಿಸಿದೆ. ಹಲವು ದಿನಗಳಿಂದ ಮುಂಬೈ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು,  ಮಳೆಯ ಕಾರಣದಿಂದ ಹಲವು ಅವಘಡ ಸಂಭವಿಸುತ್ತಿವೆ.