ಬೆಂಗಳೂರು [ಜು.24] : ತಿಪ್ಪಗೊಂಡನಹಳ್ಳಿ ಜಲಾಶಯ ಹಾಗೂ ಜಲಾನಯನ ಪ್ರದೇಶದಲ್ಲಿ ಬರುವ ಅರ್ಕಾವತಿ ಮತ್ತು ಕುಮುದ್ವತಿ ನದಿ ವ್ಯಾಪ್ತಿಗೆ ಬಫರ್‌ ಜೋನ್‌ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಅಲ್ಲದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಎಲ್ಲ ನಗರ ಯೋಜನಾ ಪ್ರಾಧಿಕಾರಗಳು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದೆ. ಜತೆಗೆ ‘ಬೆಂಗಳೂರು ಮಹಾನಗರ ಪ್ರದೇಶ ಪರಿಷ್ಕೃತ ರಚನಾ ನಕ್ಷೆ-2031’ನಲ್ಲಿ (ಮಾಸ್ಟರ್‌ ಪ್ಲಾನ್‌) ನಗರಾಭಿವೃದ್ಧಿ ಇಲಾಖೆಯ ನಿಯಮಾವಳಿಗಳನ್ನು ಅಳವಡಿಕೆ ಮಾಡಿಕೊಳ್ಳುವಂತೆ ಆದೇಶಿಸಿದೆ.

ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶ ಸಂರಕ್ಷಣೆಗಾಗಿ 2003ರಲ್ಲಿ ರಾಜ್ಯ ಸರ್ಕಾರ ಹೊಡಿಸಿದ್ದ ಆದೇಶ ಮುಂದುವರೆಸುವ ಕುರಿತು ಹೈಕೋರ್ಟ್‌ ಸ್ಪಷ್ಟನೆ ಕೇಳಿದ ಹಿನ್ನೆಲೆಯಲ್ಲಿ ಜೂನ್‌ 26ರಂದು ನಡೆದ ಸಂಪುಟಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ, ಬಫರ್‌ ಜೋನ್‌ ನಿಗದಿಪಡಿಸಿ ಕ್ರಮಕೈಗೊಳ್ಳುವ ಕುರಿತು ನಿರ್ಣಯ ತೆಗೆದುಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್‌ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ 2003ರಲ್ಲಿ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಹೊರಡಿಸಿದ್ದ ಆದೇಶದಲ್ಲಿ ಕೆಲವು ಮಾರ್ಪಾಡು ಮಾಡಿಕೊಂಡು ಯಥಾಸ್ಥಿತಿ ಮುಂದುವರೆಸಿ, ನಗರಾಭಿವೃದ್ಧಿ ಇಲಾಖೆ ನಿಗದಿ ಪಡಿಸಿದ ಬಫರ್‌ ಜೋನ್‌ ಪಾಲನೆಗೆ ತೀರ್ಮಾನಿಸಲಾಗಿತ್ತು. ಅದರಂತೆ ನಗರಾಭಿವೃದ್ಧಿ ಇಲಾಖೆ ಇದೀಗ ಬಫರ್‌ ಜೋನ್‌ ನಿಗದಿಪಡಿಸಿ ಆದೇಶಿಸಿದೆ.

ರಾಜಕಾಲುವೆ ಅಂಚಿನಿಂದ 30 ಮೀಟರ್‌:  ಕೆರೆಯ ತುದಿಯಿಂದ 30 ಮೀಟರ್‌, ಪ್ರಾಥಮಿಕ ನೈಸರ್ಗಿಕ ರಾಜಕಾಲುವೆ ಅಂಚಿನಿಂದ 30 ಮೀಟರ್‌, ದ್ವಿತೀಯ ದರ್ಜೆ ಕಾಲುವೆಯ ತುದಿಯಿಂದ 15 ಮೀಟರ್‌, ತೃತೀಯ ದರ್ಜೆಯ ಕಾಲುವೆಯ ತುದಿಯಿಂದ 10 ಮೀಟರ್‌ ಬಫರ್‌ ಜೋನ್‌ ಇರಬೇಕು ಎಂದು ನಿಗದಿಪಡಿಸಿ ಆದೇಶಿಸಿದೆ.

2003ರ ಆದೇಶದಲ್ಲಿ ಕೆಲ ಮಾರ್ಪಾಡು

ನಗರಾಭಿವೃದ್ಧಿ ಇಲಾಖೆ 2003ರಲ್ಲಿ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಹೊರಡಿಸಿದ್ದ ಆದೇಶದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದ ಪ್ರಥಮ ಮತ್ತು ದ್ವಿತೀಯ ವಲಯದ ವ್ಯಾಪ್ತಿ ಪ್ರದೇಶದಲ್ಲಿ ಅಂತರ್ಜಲ ಕಲುಷಿತಗೊಳ್ಳದಂತೆ ಕಾಪಾಡುವುದು. ಮೀನುಗಾರಿಕೆ, ಗಣಿಗಾರಿಕೆಗೆ ಅವಕಾಶ ನೀಡುವಂತಿಲ್ಲ, ಜಲಾಶಯದ ವ್ಯಾಪ್ತಿಯಲ್ಲಿ ತ್ಯಾಜ್ಯ ಸುರಿಯುವಂತಿಲ್ಲ. ತ್ಯಾಜ್ಯನೀರನ್ನು ಸಂಸ್ಕರಿಸದೇ ಬಿಡುವಂತಿಲ್ಲ ಹಾಗೂ ನಿರ್ಮಾಣಗೊಳ್ಳುವ ನೂತನ ಕಟ್ಟಡದಲ್ಲಿ ಕಡ್ಡಾಯವಾಗಿ ಮಳೆ ನೀರು ಸಂಗ್ರಹಣೆ ವ್ಯವಸ್ಥೆ ಕೈಗೊಳ್ಳತಕ್ಕದ್ದು. ಸಾವಯವ, ರಾಸಾಯನಿಕ ಗೊಬ್ಬರ ಮತ್ತು ಔಷಧಿಯೇತರ ಕೃಷಿಗೆ ಪ್ರೋತ್ಸಾಹ ನೀಡಬೇಕು. ಅನುಮತಿ ಇಲ್ಲದೇ ಕೃಷಿಯೇತರ ಚಟುವಟಿಕೆ ಕೈಗೊಳ್ಳುವಂತಿಲ್ಲ ಎಂಬ ಷರತ್ತುಗಳನ್ನು ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಉಳಿದಂತೆ ವಲಯ ಮೂರದಲ್ಲಿ ಹೇಳಿದ ಕುಮುದ್ವತಿ ಮತ್ತು ಅರ್ಕಾವತಿ ನದಿಯ ಅಂಚಿನಿಂದ 1 ಕಿ.ಮೀ. ವ್ಯಾಪ್ತಿಯಲ್ಲಿ ಕೃಷಿಯೇತರ ಚಟುವಟಿಕೆ ಕೈಗೊಳ್ಳುವಂತಿಲ್ಲ ಎಂಬ ನಿಯಮವನ್ನು 500 ಮೀಟರ್‌ಗೆ ಇಳಿಸಲಾಗಿದೆ. ವಲಯ ನಾಲ್ಕರಲ್ಲಿ ಕುಮುದ್ವತಿ ಮತ್ತು ಅರ್ಕಾವತಿ ನದಿ ಅಕ್ಕಪಕ್ಕದ 1 ರಿಂದ 2 ಕಿ.ಮೀ ವ್ಯಾಪ್ತಿಯನ್ನು 500 ದಿಂದ 1 ಕಿ.ಮೀ.ಗೆ ಇಳಿಸಲಾಗಿದೆ. ಜತೆಗೆ ಶಾಲೆ, ಕಾಲೇಜು, ಆಸ್ಪತ್ರೆ, ಸರ್ಕಾರಿ ಹಾಸ್ಟಲ್‌, ವಸತಿ ಕಟ್ಟಡಗಳಿಗೆ ಅನುಮತಿ ನೀಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.