ಕೇಂದ್ರ ಸರ್ಕಾರ ಬಜೆಟ್'ನಲ್ಲಿ ಚುನಾವಣೆ ನಡೆಯುವ ರಾಜ್ಯಗಳಲ್ಲಿ ನೂತನ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿರುವುದರಿಂದ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ನೇತೃತ್ವದ ವಿರೋಧ ಪಕ್ಷಗಳ ನಿಯೋಗ ಭಾರತೀಯ ಚುನಾವಣಾ ಆಯೋಗದ ಮೂವರೂ ಆಯುಕ್ತರನ್ನು ಭೇಟಿಯಾಗಿ ಬಜೆಟ್'ಅನ್ನು ಮುಂದೂಡುವಂತೆ ಮನವಿ ಸಲ್ಲಿಸಿತ್ತು.
ನವದೆಹಲಿ(ಜ.24): ಚುನಾವಣೆ ನಡೆಯುವ ರಾಜ್ಯಗಳಲ್ಲಿ ಫೆಬ್ರವರಿ 1 ರಂದು ಮಂಡಿಸಲಾಗುವ ಬಜೆಟ್'ನಲ್ಲಿ ಯಾವುದೇ ನೂತನ ಯೋಜನೆಗಳನ್ನು ಘೋಷಿಸಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚಿಸಿದೆ. ವಿಧಾನಸಭೆ ಚುನಾವಣೆ ನಡೆಯುವ ಉತ್ತರ ಪ್ರದೇಶ, ಪಂಜಾಬ್,ಗೋವಾ,ಉತ್ತರಖಂಡ್ ಹಾಗೂ ಮಣಿಪುರ ರಾಜ್ಯಗಳಲ್ಲಿ ಹಣಕಾಸು ಸಚಿವರು ತಮ್ಮ ಬಜೆಟ್ ಮಂಡನೆಯಲ್ಲಿ ಚುನಾವಣಾ ನಿಯಮಗಳನ್ನು ಪಾಲಿಸುವುದರ ಜೊತೆಗೆ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಕೂಡದು ಹಾಗೂ ಆಯಾ ರಾಜ್ಯಗಳ ಸಾಧನೆಗಳನ್ನು ಕೂಡ ಪರಾಮರ್ಶಿಸಕೂಡದು ಎಂದು ತಿಳಿಸಿದೆ.
ಸೋಮವಾರವಷ್ಟೆ ಸುಪ್ರೀಂ ಕೋರ್ಟ್ ಚುನಾವಣೆಗೂ ಮುನ್ನ ಬಜೆಟ್ ಮಂಡನೆಯನ್ನು ತಡೆಹಿಡಿಯಬೇಕು ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತ್ತು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಜೆ.ಎಸ್. ಖೇಹರ್ ಅವರು 'ಕೇಂದ್ರ ಸರ್ಕಾರದ ಬಜೆಟ್'ನಂತೆ ಶಾಸಕಾಂಗ ಹಾಗೂ ಕಾರ್ಯಾಂಗಗಳಿಗೆ ತನ್ನದೆ ಆದ ಅಧಿಕಾರಗಳಿದ್ದು, ಇದನ್ನು ಸಂವಿಧಾನದಲ್ಲಿ ಸ್ಪಷ್ಟಪಡಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಮಿತಿಯನ್ನು ಅರಿತುಕೊಂಡು ಕೆಲಸಮಾಡಲಿವೆ' ಎಂದು ಈ ಸಂದರ್ಭದಲ್ಲಿ ತಿಳಿಸಿದ್ದರು.
ಕೇಂದ್ರ ಸರ್ಕಾರ ಬಜೆಟ್'ನಲ್ಲಿ ಚುನಾವಣೆ ನಡೆಯುವ ರಾಜ್ಯಗಳಲ್ಲಿ ನೂತನ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿರುವುದರಿಂದ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ನೇತೃತ್ವದ ವಿರೋಧ ಪಕ್ಷಗಳ ನಿಯೋಗ ಭಾರತೀಯ ಚುನಾವಣಾ ಆಯೋಗದ ಮೂವರೂ ಆಯುಕ್ತರನ್ನು ಭೇಟಿಯಾಗಿ ಬಜೆಟ್'ಅನ್ನು ಮುಂದೂಡುವಂತೆ ಮನವಿ ಸಲ್ಲಿಸಿತ್ತು. ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗಲಿದ್ದು, ಆದಾದ ಮೂರು ದಿನಗಳ ನಂತರ ಅಂದರೆ ಫೆ.4 ರಂದು ಚುನಾವಣಾ ಪ್ರಕ್ರಿಯೆ ಆರಂಭವಾಗಿ ಮಾರ್ಚ್ 11 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
