ಶಾರ್ಕ್ ಟ್ಯಾಂಕ್ ಇಂಡಿಯಾದ ಪ್ರಮುಖ ಹೂಡಿಕೆದಾರ ಅಮಾನ್ ಗುಪ್ತಾ, ತಾವು ಬೆಂಬಲಿಸಿದ ಸ್ಟಾರ್ಟ್‌ಅಪ್‌ಗಳ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ. 'ಲೆಟ್ಸ್ ಟ್ರೈ' ಮತ್ತು 'EM5 ಪರ್ಫ್ಯೂಮ್' ನಂತಹ ಕಂಪನಿಗಳು ಅವರ ಹೂಡಿಕೆಯ ನಂತರ ಮೌಲ್ಯ ಮತ್ತು ಆದಾಯದಲ್ಲಿ ಅಗಾಧ ಬೆಳವಣಿಗೆ ಕಂಡಿವೆ. 

ನವದೆಹಲಿ (ಮಾ.9): ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿರುವ ಅಮಾನ್ ಗುಪ್ತಾ, ತಾವು ಬೆಂಬಲಿಸಿದ ಸ್ಟಾರ್ಟ್‌ಅಪ್‌ಗಳು ಹೇಗೆ ಹೆಮ್ಮರವಾಗಿ ಬೆಳೆದಿವೆ ಎಂಬುದನ್ನು ಇತ್ತೀಚಿನ ಸಂಚಿಕೆಯಲ್ಲಿ ಮಾಹಿತಿ ನೀಡಿದ್ದಾರೆ. ಸೀಸನ್ 1 ರಿಂದ 4 ರವರೆಗೆ ಅಮಾನ್ ಒಟ್ಟು 177 ಆಫರ್ ನೀಡಿ, 141 ಡೀಲ್‌ಗಳನ್ನು ಲಾಕ್ ಮಾಡಿದ್ದಾರೆ. ಇದಕ್ಕಾಗಿ ಅವರು ಒಟ್ಟು 61.7 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ.

ಲೆಟ್ಸ್ ಟ್ರೈ (Let’s Try) – ಸೀಸನ್ 1 ರ ಬಂಪರ್ ಹೂಡಿಕೆ

ಅಮಾನ್ ಗುಪ್ತಾ ಅವರ ಹೇಳಿರುವ ಪ್ರಕಾರ, ಶಾರ್ಕ್ ಟ್ಯಾಂಕ್ ಇಂಡಿಯಾದ ನಂಬರ್ ಒನ್ ಹೂಡಿಕೆ ಎಂದರೆ ಅದು ಸ್ನ್ಯಾಕ್ಸ್ ಬ್ರ್ಯಾಂಡ್ 'ಲೆಟ್ಸ್ ಟ್ರೈ'. ಸೀಸನ್ 1 ರಲ್ಲಿ ಅಮಾನ್ ಹೂಡಿಕೆ ಮಾಡಿದಾಗ ಈ ಕಂಪನಿಯ ಮೌಲ್ಯ ಕೇವಲ 3.75 ಕೋಟಿ ರೂ. ಆಗಿತ್ತು. ಆದರೆ ಇಂದು ಇದರ ಮೌಲ್ಯ ಬರೋಬ್ಬರಿ 1,100 ಕೋಟಿ ರೂ. ಗೆ ಏರಿಕೆಯಾಗಿದೆ. ತಿಂಗಳಿಗೆ 12 ಲಕ್ಷ ರೂ. ಆದಾಯ ಗಳಿಸುತ್ತಿದ್ದ ಈ ಕಂಪನಿ ಈಗ ಪ್ರತಿ ತಿಂಗಳು 40 ಕೋಟಿ ರೂ. ವ್ಯವಹಾರ ಮಾಡುತ್ತಿದೆ. ಶೀಘ್ರದಲ್ಲೇ ಇದು 100 ಕೋಟಿ ರೂ. ತಲುಪುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.

EM5 ಪರ್ಫ್ಯೂಮ್ ಬ್ರ್ಯಾಂಡ್ – ಸೂರ್ಯಕುಮಾರ್ ಯಾದವ್ ರಾಯಭಾರಿ!

ಸೀಸನ್ 4 ರ ಹೂಡಿಕೆಯಾದ EM5 ಪರ್ಫ್ಯೂಮ್ ಬ್ರ್ಯಾಂಡ್ ಈಗ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಕಂಪನಿಗೆ ಸ್ಟಾರ್ ಕ್ರಿಕೆಟಿಗ ಟಿ20 ವಿಶ್ವಕಪ್‌ ಗೆದ್ದ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಈ ಬ್ರ್ಯಾಂಡ್‌ನ ಮಾಸಿಕ ಮಾರಾಟವು 1.7 ಕೋಟಿ ರೂ. ನಿಂದ 4.5 ಕೋಟಿ ರೂ. ಗೆ ಏರಿಕೆಯಾಗಿದೆ. ಅಲ್ಲದೆ ಕಂಪನಿಯ ಫ್ಯಾಕ್ಟರಿಯು 6,000 ಚದರ ಅಡಿಯಿಂದ 30,000 ಚದರ ಅಡಿಗೆ ವಿಸ್ತರಣೆಯಾಗಿದೆ.

ಮೇಂಟೇನ್ (Manetain) – ಸೀಸನ್ 2 ರ ಹೇರ್ ಕೇರ್ ಮ್ಯಾಜಿಕ್

ಸಾಲದ ನೋವು ಅನುಭವಿಸುತ್ತಿದ್ದ ಹೇರ್ ಕೇರ್ ಬ್ರ್ಯಾಂಡ್ 'ಮೇಂಟೇನ್' ಅನ್ನು ಅಮಾನ್ ಬದಲಿಸಿದ ರೀತಿ ಅದ್ಭುತ. ಕೇವಲ ಗುಂಗುರು ಕೂದಲಿಗೆ ಸೀಮಿತವಾಗಿದ್ದ ಈ ಬ್ರ್ಯಾಂಡ್ ಅನ್ನು ಅಮಾನ್ ಅವರ ಸಲಹೆಯಂತೆ ದೊಡ್ಡ ವರ್ಗದ ಗ್ರಾಹಕರಿಗೂ ವಿಸ್ತರಿಸಲಾಯಿತು. ತಿಂಗಳಿಗೆ 10 ಲಕ್ಷ ರೂ. ಗಳಿಸುತ್ತಿದ್ದ ಈ ಕಂಪನಿ ಈಗ 1.2 ಕೋಟಿ ರೂ. ಆದಾಯ ಕಾಣುತ್ತಿದೆ. ಗ್ರಾಹಕರ ಸಂಖ್ಯೆ 10 ಸಾವಿರದಿಂದ 4 ಲಕ್ಷಕ್ಕೆ ಏರಿಕೆಯಾಗಿದೆ.

ಸೀಸನ್ 5 ರಲ್ಲೂ ಅಮಾನ್ ಅಬ್ಬರ

ಪ್ರಸ್ತುತ ನಡೆಯುತ್ತಿರುವ ಸೀಸನ್ 5 ರಲ್ಲೂ ಅಮಾನ್ ಗುಪ್ತಾ ಅವರೇ ಅತಿ ಹೆಚ್ಚು ಹೂಡಿಕೆದಾರರಾಗಿ ಹೊರಹೊಮ್ಮಿದ್ದಾರೆ. ಇದುವರೆಗೆ 129 ಪಿಚ್‌ಗಳ ಪೈಕಿ 23 ಕಂಪನಿಗಳಲ್ಲಿ 24.6 ಕೋಟಿ ರೂ. ಹೂಡಿಕೆ ಮಾಡುವ ಭರವಸೆ ನೀಡಿದ್ದಾರೆ.