ಲಕ್ನೋ[ಆ.27]: ಉತ್ತರ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಅನಾಥ ಶಿಶುವನ್ನು ಕಾಪಾಡಿ ಮಾನವೀಯತೆ ಮೆರೆದಿದ್ದಾರೆ. ಚರಂಡಿಗೆಸೆದಿದ್ದ ಮಗುವನ್ನು, ಕಾಪಾಡಿದ ಪೊಲೀಸ್ ಸಿಬ್ಬಂದಿಯ ಈ ಮಾನವೀಯ ನಡೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಬದಾಯೂನ್ ಪೊಲೀಸ್ ತಮ್ಮ ಟ್ವೀಟ್ ಖಾತೆಯಿಂದ ಟ್ವೀಟ್ ಒಂದನ್ನು ಮಾಡುತ್ತಾ ಅನಾಥ ನವಜಾತ ಶಿಶುವನ್ನು ಕಾಪಾಡಿದ ಪೊಲೀಸ್ ಸಿಬ್ಬಂದಿಯನ್ನು ಪ್ರಶಂಸಿಸಿದೆ. ಟ್ವೀಟ್ ಅನ್ವಯ ಈ ನವಜಾತ ಶಿಶುವನ್ನು ಯಾರೋ ಚರಂಡಿಗೆ ಎಸೆದು ಹೋಗಿದ್ದರು. ಆದರೆ ಈ ಮಾಹಿತಿ ಪಡೆದ ಖುಷಿಪಾಲ್ ಕೂಡಲೇ ಸ್ಥಳಕ್ಕೆ ಧಾವಿಸಿ, ಶಿಶುವನ್ನು ಆಸ್ಪತ್ರೆಗೊಯ್ದಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದ್ದು, ಮಗು ಅಪಾಯದಿಂದ ಪಾರಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಗುವನ್ನು ಕಾಪಾಡಿದ ಪೊಲೀಸ್ ಅಧಿಕಾರಿಗಳ ಕುರಿತು ಮಾಡಿರುವ ಟ್ವೀಟ್ ನಲ್ಲಿ 'ದೇವದೂತರಂತೆ ಬಂದ #budaunpolice, @up100 ನಲ್ಲಿ ಸೇವೆ ಸಲ್ಲಿಸುತ್ತಿರುವ ಖುಷಿಪಾಲ್, ಚರಂಡಿಯಲ್ಲಿ ಅನಾಥ ಶಿಶುವಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ದನ್ನೆತ್ತಿ ಆಸ್ಪತ್ರೆಗೊಯ್ದಿದ್ದಾರೆ. ಸದ್ಯ ಮಗು ಅಪಾಯದಿಂದ ಪಾರಾಗಿದೆ' ಎಂದಿದೆ.