ಕುತೂಹಲ ಮೂಡಿಸಿದೆ ಬಿಎಸ್‌ವೈ ದಿಢೀರ್‌ ಗುಜರಾತ್‌ ಭೇಟಿ!

BSY Sudden visit to Gujarath
Highlights

ರಾಜ್ಯದಲ್ಲಿ ಬಜೆಟ್‌ ಮಂಡನೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಶೀತಲ ಸಮರ ನಡೆಯುತ್ತಿರುವ ಮಧ್ಯೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ದಿಢೀರನೆ ಗುಜರಾತ್‌ಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
 

ಬೆಂಗಳೂರು (ಜೂ. 26):  ರಾಜ್ಯದಲ್ಲಿ ಬಜೆಟ್‌ ಮಂಡನೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಶೀತಲ ಸಮರ ನಡೆಯುತ್ತಿರುವ ಮಧ್ಯೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ದಿಢೀರನೆ ಗುಜರಾತ್‌ಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್ಸಿನ ಅತೃಪ್ತ ಶಾಸಕರನ್ನು ಸೆಳೆಯುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಕುರಿತಂತೆ ಈ ಭೇಟಿ ಎಂಬ ವದಂತಿಗಳು ಹಬ್ಬಿದರೂ ಬಿಜೆಪಿಯ ವಿಶ್ವಸನೀಯ ಮೂಲಗಳು ಅದನ್ನು ಬಲವಾಗಿ ನಿರಾಕರಿಸಿವೆ.

ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಕೆಲಸಕ್ಕೆ ಕೈಹಾಕುವುದು ರಾಷ್ಟ್ರಮಟ್ಟದಲ್ಲೂ ಅಪಾಯ ಎಂಬ ಎಚ್ಚರಿಕೆಯ ಸಂದೇಶವನ್ನು ಈಗಾಗಲೇ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ರವಾನಿಸಿದ್ದಾರೆ. ಹೀಗಿರುವಾಗ ಮತ್ತೆ ಆ ಕುರಿತು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಮಾತುಕತೆ ನಡೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಬೆಳಗ್ಗೆ ಯಡಿಯೂರಪ್ಪ ಅವರು ತಮ್ಮ ಪರಮಾಪ್ತ ಹಾಗೂ ಶಾಸಕ ಬಸವರಾಜ ಬೊಮ್ಮಾಯಿ ಅವರೊಂದಿಗೆ ಗುಜರಾತ್‌ಗೆ ತೆರಳಿ ಅಲ್ಲಿನ ಅಹಮದಾಬಾದ್‌ನಲ್ಲಿ ಅಮಿತ್‌ ಶಾ ಅವರನ್ನು ಭೇಟಿ ಮಾಡಿದರು.

ಆದರೆ, ಯಡಿಯೂರಪ್ಪ ಅವರು ಅಷ್ಟೊಂದು ತರಾತುರಿಯಲ್ಲಿ ಅದೂ ರಹಸ್ಯವಾಗಿ ಗುಜರಾತ್‌ಗೆ ತೆರಳುವ ಅನಿವಾರ್ಯತೆ ಏನಿತ್ತು ಎಂಬ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಕೇಳಿಬಂದಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇದೇ ತಿಂಗಳ 29ರಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಈ ಕುರಿತು ಅಮಿತ್‌ ಶಾ ಅವರೊಂದಿಗೆ ಸಮಾಲೋಚನೆ ನಡೆಸುವುದಕ್ಕಾಗಿ ಭೇಟಿ ನೀಡಿರಬಹುದು ಎಂದು ಅವರ ಆಪ್ತರು ಸಮಜಾಯಿಷಿ ನೀಡುತ್ತಿದ್ದರೂ ರಾಜ್ಯ ಘಟಕದ ಇತರ ನಾಯಕರಿಗೆ ಯಾವುದೇ ಮಾಹಿತಿ ನೀಡದೆ ತೆರಳಿರುವುದು ಸಹಜವಾಗಿಯೇ ಅನುಮಾನ ಹುಟ್ಟುಹಾಕಿದೆ.

ಈ ಬಗ್ಗೆ ಮಂಗಳವಾರ ಯಡಿಯೂರಪ್ಪ ಅವರೇ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

loader