ವರಿಷ್ಠರ ಸೂಚನೆ ನಡುವೆಯೂ ರಾಯಣ್ಣ ಬ್ರಿಗೇಡ್‌ ಚಟುವಟಿಕೆಯಲ್ಲಿ ಭಾಗವಹಿಸುವಿಕೆ | ರಾಜ್ಯದಲ್ಲಿ ಪಕ್ಷ ಪರವಾಗಿರುವ ವಾತಾವರಣ ಅನವಶ್ಯವಾಗಿ ಹಾಳು
ವರದಿ: ಪ್ರಶಾಂತ್ ನಾತು, ಸುವರ್ಣನ್ಯೂಸ್
ನವದೆಹಲಿ: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವರಿಷ್ಠರಿಗೆ ದೂರು ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್'ನ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ವರಿಷ್ಠರು ಎಚ್ಚರಿಕೆ ನೀಡಿದ ಬಳಿಕವೂ ಬಹಿರಂಗವಾಗಿ ಪಾಲ್ಗೊಳ್ಳುತ್ತಿರುವುದರ ವಿರುದ್ಧ ಯಡಿಯೂರಪ್ಪ ಈ ಕ್ರಮ ಕೈಗೊಂಡಿದ್ದಾರೆ. ಈಶ್ವರಪ್ಪನವರ ಹೇಳಿಕೆಗಳಿಂದ ಕರ್ನಾಟಕದಲ್ಲಿ ಬಿಜೆಪಿ ಪರವಾಗಿರುವ ವಾತಾವರಣ ಅನವಶ್ಯವಾಗಿ ಹಾಳಾಗುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜತೆ ಅಲವತ್ತುಕೊಂಡಿದ್ದಾರೆ.
ಗುರುವಾರ ರಾತ್ರಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರೆದಿದ್ದ ದಕ್ಷಿಣ ಭಾರತ ಬಿಜೆಪಿ ಸಂಸದರ ಸಭೆಯಲ್ಲಿ ಕರ್ನಾಟಕದ ಸಂಸದರೊಂದಿಗೆ ಪ್ರತ್ಯೇಕವಾಗಿ ಮಾತನಾಡುತ್ತಿದ್ದ ವೇಳೆ ಮಾಜಿ ಸಿಎಂ ಯಡಿಯೂರಪ್ಪ ‘‘ರಾಮಲಾಲ್ ಕಟ್ಟಪ್ಪಣೆ ಮಾಡಿದ ನಂತರವೂ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದರಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತಿದೆ. ನ.27ರಂದು ಹಿಂದುಳಿದ ವರ್ಗಗಳ ಸಮಾವೇಶ ನಡೆಯುತ್ತಿರುವಾಗ ಈಶ್ವರಪ್ಪ ಹಿಂದುಳಿದ ವರ್ಗಗಳನ್ನು ಬ್ರಿಗೇಡ್ ಮೂಲಕ ಸಂಘಟಿಸುವ ಬಗ್ಗೆ ಮಾತನಾಡಿ ಗೊಂದಲ ಮೂಡಿಸುತ್ತಿದ್ದಾರೆ,'' ಎಂದು ಲಿಖಿತ ದೂರು ಸಲ್ಲಿಸಿದ್ದಾರೆ. ಆಗ ಸಭೆಯಲ್ಲಿದ್ದ ಉಳಿದ ಬಿಜೆಪಿ ಸಂಸದರು, ‘‘ಬ್ರಿಗೇಡ್ ವಿಷಯವನ್ನು ಒಮ್ಮೆ ಕುಳಿತು ಬಗೆ ಹರಿಸಲೇಬೇಕು. ಇಲ್ಲದಿದ್ದಲ್ಲಿ ವಾತಾವರಣ ಹಾಳಾಗುತ್ತದೆ,'' ಎಂದು ಅಮಿತ್ ಶಾಗೆ ಮನವಿ ಮಾಡಿಕೊಂಡರೆಂದು ತಿಳಿದು ಬಂದಿದೆ.
ಯಡಿಯೂರಪ್ಪ ಸೇರಿದಂತೆ ಎಲ್ಲ ಸಂಸದರ ಮಾತುಗಳನ್ನು ಕೇಳಿಸಿಕೊಂಡ ಅಮಿತ್ ಶಾ, ‘‘ಭಾನುವಾರ ಬೆಂಗಳೂರಿಗೆ ಬಂದಾಗ ಈಶ್ವರಪ್ಪನವರ ಜೊತೆ ಮಾತನಾಡುತ್ತೇನೆ. ನೀವು ಒಮ್ಮೆ ಕುಳಿತು ಜಗಳ ಬಗೆಹರಿಸಿಕೊಳ್ಳಿ. ಚುನಾವಣೆ ಹತ್ತಿರ ಬರುತ್ತಿರುವಾಗ ಬಹಿರಂಗ ಕಾದಾಟ ಒಳ್ಳೆಯದಲ್ಲ. ನಾವೇ ಕುಳಿತಲ್ಲಿಯೇ ಮಾಧ್ಯಮಗಳಿಗೆ ಆಹಾರವಾಗುತ್ತೇವೆ,'' ಎಂದು ಹೇಳಿದರು ಎಂದು ಸಭೆಯಲ್ಲಿದ್ದ ಮೂಲಗಳು ‘ಕನ್ನಡಪ್ರಭ'ಕ್ಕೆ ಖಚಿತಪಡಿಸಿವೆ.
ಭಾನುವಾರ ಬೆಂಗಳೂರಿಗೆ ಬರುತ್ತಿರುವ ಅಮಿತ್ ಶಾ ಯಡಿಯೂರಪ್ಪನವರು ಮತ್ತು ಈಶ್ವರಪ್ಪನವರನ್ನು ಕರೆದು ಸಭೆ ನಡೆಸುತ್ತಾರೆಯೋ ಅಥವಾ ದೆಹಲಿಗೆ ಕರೆಸುತ್ತಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ತಿಂಗಳು ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಮ್ಲಾಲ್ ಬೆಂಗಳೂರಿಗೆ ಬಂದು ಹೋದ ನಂತರ ಸ್ಥಳೀಯ ಆರ್ಎಸ್ಎಸ್ ನಾಯಕ ಮುಕುಂದ ಜಿ ಕೂಡ ಈಶ್ವರಪ್ಪನವರಿಗೆ ಬ್ರಿಗೇಡ್ ಚಟುವಟಿಕೆಗಳನ್ನು ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ ಈಶ್ವರಪ್ಪನವರು ಮತ್ತೆ ಬಹಿರಂಗ ಹೇಳಿಕೆಗಳನ್ನು ಕೊಡಲು ಆರಂಭಿಸಿದ್ದರಿಂದ ಅಮಿತ್ ಶಾ ಅವರೇ ಜಗಳ ಬಗೆಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
