ರಾಜ್ಯ ರಾಜಕಾರಣದಿಂದ ಸಂತೋಷ್ ದೂರವಿಡಿ, ಇಲ್ಲದಿದ್ದರೆ ಪಕ್ಷದ ಗುಂಪುಗಾರಿಕೆ ನಿಲ್ಲಲ್ಲ: ಬಿಎಸ್‌ವೈ
ಬೆಂಗಳೂರು: ರಾಜ್ಯ ಬಿಜೆಪಿಯ ಆಂತರಿಕ ಭಿನ್ನಮತ ಮತ್ತೆ ಮುಂದುವರೆದಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಂಘಟನಾ ಸಹ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನಡುವಿನ ಗುದ್ದಾಟ ಮತ್ತೆ ಹೈಕಮಾಂಡ್ ಅಂಗಳ ತಲುಪಿದೆ.
‘ಪರ್ಯಾಯ ನಾಯಕತ್ವದ ರೀತಿ ಕೆಲಸ ಮಾಡುತ್ತಿರುವ ಸಂತೋಷ್ರನ್ನು ರಾಜ್ಯ ರಾಜಕಾರಣದಿಂದ ದೂರ ಇಡಿ. ಇಲ್ಲದಿದ್ದರೆ ಪಕ್ಷದಲ್ಲಿನ ಗುಂಪುಗಾರಿಕೆ ನಿಲ್ಲುವುದಿಲ್ಲ’ ಎಂದು ಯಡಿಯೂರಪ್ಪ ಅವರು ವರಿಷ್ಠರಿಗೆ ತೀಕ್ಷ್ಣವಾಗಿ ಸಂದೇಶ ರವಾನಿಸಿದ್ದಾರೆ.
ಪಕ್ಷದ ರಾಜ್ಯ ಉಸ್ತುವಾರಿಯೂ ಆಗಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರರಾವ್ ಅವರ ಮೂಲಕ ರಾಷ್ಟ್ರೀಯ ಅಧ್ಯಕ್ಷ ಅಮಿತ್ಶಾ ಅವರಿಗೆ ಮೌಖಿಕವಾಗಿ ದೂರು ಸಲ್ಲಿಸಿರುವ ಯಡಿಯೂರಪ್ಪ ಅವರು ಸಂತೋಷ್ ಅವರ ಇತ್ತೀಚಿನ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ದೆಹಲಿಗೆ ತಲುಪಿರುವ ಯಡಿಯೂರಪ್ಪ ಅವರು ಮುರಳೀಧರರಾವ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಸಂತೋಷ್ ಅವರನ್ನು ಪಕ್ಷದ ಸಂಘಟನೆಯಲ್ಲಿ ಸಕ್ರಿಯಗೊಳಿಸುವುದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ, ಅವರು ಹಿಂದೆ ನನ್ನ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿದ್ದವರನ್ನೇ ಮುಂದಿಟ್ಟುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿದರೆ ನಾನು ಹೇಗೆ ಕೆಲಸ ಮಾಡಬೇಕು? ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ನನ್ನ ಗಮನಕ್ಕೂ ತಂದಿಲ್ಲ. ಅತೃಪ್ತ ಮುಖಂಡರ ಅತೃಪ್ತಿ ಇನ್ನೂ ಕಡಿಮೆಯಾಗದೇ ಇರುವಾಗ ಅವರನ್ನು ಮುಂಚೂಣಿಗೆ ಕರೆತಂದರೆ ನನಗೆ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದು ಆಕ್ರೋಶದಿಂದಲೇ ಹೇಳಿದ್ದಾರೆ ಎನ್ನಲಾಗಿದೆ.
ಸಂತೋಷ್ ಅವರು ತಮಗೆ ವಹಿಸಿದ ಕೆಲಸವನ್ನು ಮಾಡಲಿ. ಅವರಿಗೆ ವಹಿಸುವ ಜವಾಬ್ದಾರಿಯ ಬಗ್ಗೆ ನನಗೂ ಮಾಹಿತಿ ಕೊಡಿ. ಇಲ್ಲದಿದ್ದರೆ ಅವರೊಂದು ದಾರಿಯಲ್ಲಿ, ನಾನೊಂದು ದಾರಿಯಲ್ಲಿ ಕೆಲಸ ಮಾಡಿದಂತಾಗುತ್ತದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಗೊಂದಲಕ್ಕೀಡಾ ಗುತ್ತಾರೆ. ಮತ್ತೆ ಭಿನ್ನಾಭಿಪ್ರಾಯ ಆರಂಭವಾಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಯಾತ್ರೆ ಸಿದ್ಧತೆ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ: ಇದೇ ವೇಳೆ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ಭಾನುವಾರ ರಾತ್ರಿ ಪಕ್ಷದ ಚುನಾವಣಾ ಉಸ್ತುವಾರಿಯೂ ಆಗಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ನಿವಾಸದಲ್ಲಿನ ಡೆಯಿತು.ಈ ಸಭೆಯಲ್ಲಿ ಪಕ್ಷದ ಸಂಘಟನೆಯ ಜತೆಗೆ ಬರುವ ನವೆಂಬರ್ ತಿಂಗಳಲ್ಲಿ ಆರಂಭವಾಗಲಿರುವ ಪಕ್ಷದ ‘ಕರ್ನಾಟಕ ನವನಿರ್ಮಾಣ ಪರಿವರ್ತನಾ ಯಾತ್ರೆ’ಯ ಸಿದ್ಧತೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡ, ಸಂಸದರಾದ ಪ್ರಹ್ಲಾದ ಜೋಶಿ, ನಳಿನ್ ಕುಮಾರ್ ಕಟೀಲ್ ಇತರರು ಪಾಲ್ಗೊಂಡಿದ್ದರು.
