ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಸಿದ್ಧ ಎಂಬ ಲಿಖಿತ ಭರವಸೆ ನೀಡಿದ ಬಳಿಕ ಹಿಂದೆ ಸರಿದ ತಮ್ಮದೇ ಪಕ್ಷದ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ಧೋರಣೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ.
ಬೆಂಗಳೂರು (ಡಿ.27): ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಸಿದ್ಧ ಎಂಬ ಲಿಖಿತ ಭರವಸೆ ನೀಡಿದ ಬಳಿಕ ಹಿಂದೆ ಸರಿದ ತಮ್ಮದೇ ಪಕ್ಷದ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ಧೋರಣೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮನೋಹರ್ ಪರ್ರಿಕರ್ ಅವರಿಗೆ ಬುದ್ಧಿವಾದ ಹೇಳಬೇಕು ಎಂಬ ಮಾತನ್ನೂ ಯಡಿಯೂರಪ್ಪ ಆಡಿದ್ದಾರೆ. ಒಂದು ಹಂತದಲ್ಲಿ ಯಡಿಯೂರಪ್ಪ ಅವರು, ಪಕ್ಷದ ವರಿಷ್ಠರು ಗೋವಾ ದೊಡ್ಡದೋ ಅಥವಾ ಕರ್ನಾಟಕ ದೊಡ್ಡದೋ ಎಂಬುದನ್ನು ನಿರ್ಧರಿಸಬೇಕು ಎಂದು ತೀಕ್ಷ್ಣವಾಗಿಯೂ ಹೇಳಿದ್ದಾರೆ ಎನ್ನಲಾಗಿದೆ.
ಮಂಗಳವಾರ ತಮ್ಮ ನಿವಾಸದಲ್ಲಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿಯೂ ಆಗಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಯಡಿಯೂರಪ್ಪ ಅವರು ತೀವ್ರ ಆಕ್ರೋಶ ಹೊರಹಾಕಿದರು ಎಂದು ತಿಳಿದು ಬಂದಿದೆ. ನಾನು ಹಿಂದೆ ಹಸಿರು ಶಾಲು ಹಾಕಿ ಕೊಂಡೇ ಈ ರಾಜ್ಯದ ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಯಾವತ್ತಿಗೂ ನಾನು ರೈತರ ಪರ ವಾಗಿಯೇ ನಿಲ್ಲುತ್ತೇನೆ. ಮನೋಹರ್ ಪರ್ರಿಕರ್ ಅವರಿಗೆ ತಮ್ಮ ಗೋವಾ ಮುಖ್ಯವಾದರೆ, ನನಗೆ ನನ್ನ ಕರ್ನಾಟಕ ಮುಖ್ಯ.
ನಾನು ನನ್ನ ರಾಜ್ಯದ ಜನಸಾಮಾನ್ಯರು ಮತ್ತು ರೈತರ ಹಿತ ಕಾಪಾಡಲು ಬದ್ಧನಾಗಿ ನಿಲ್ಲುತ್ತೇನೆ ಎಂದು ಯಡಿಯೂರಪ್ಪ ಅವರು ಖಾರವಾಗಿಯೇ ಹೇಳಿದ್ದಾರೆ. ಇದೇ ತಿಂಗಳ 31ರಂದು ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸಾಧ್ಯವಾದರೆ ಶಾ ಅವರು ಬರುವ ವೇಳೆ ಮನೋಹರ್ ಪರ್ರಿಕರ್ ಅವರೊಂದಿಗೆ ಮಾತುಕತೆ ನಡೆಸಿ ಅಂದು ಅವರ ನಿವಾಸದಲ್ಲಿ ನಡೆದ ಸಭೆಯ ಅನುಸಾರ ನಡೆದುಕೊಳ್ಳುವಂತೆ ತಾಕೀತು ಮಾಡ ಬೇಕು. ಇಲ್ಲದಿದ್ದರೆ ಕರ್ನಾಟಕದಲ್ಲಿ ರೈತರನ್ನು ಎದುರಿಸುವುದು ಕಷ್ಟವಾಗುತ್ತದೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ. ಪಕ್ಷದ ಕುರಿತ ಅವರ ನಂಬಿಕೆ ಹುಸಿಯಾಗುತ್ತದೆ ಎಂದು ಜಾವಡೇಕರ್ ಅವರನ್ನು ಉದ್ದೇಶಿಸಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
