ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯದ ಪರ ನಿಲುವನ್ನು ಗೋವಾ ಕಾಂಗ್ರೆಸ್ ವಿರೋಧಿಸುವಂತೆ ಮುಖ್ಯಮಂತ್ರಿಗಳು ಪಿತೂರಿ ನಡೆಸಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯದ ಪರ ನಿಲುವನ್ನು ಗೋವಾ ಕಾಂಗ್ರೆಸ್ ವಿರೋಧಿಸುವಂತೆ ಮುಖ್ಯಮಂತ್ರಿಗಳು ಪಿತೂರಿ ನಡೆಸಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗೋವಾ ಕಾಂಗ್ರೆಸ್ ಹೋರಾಟದಿಂದ ಹಿಂದೆ ಸರಿಯುವವರೆಗೆ ಮಹದಾಯಿ ವಿವಾದದ ವಿಷಯದಲ್ಲಿ ಬಿಜೆಪಿ ಮುಂದುವರಿಯುವುದಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೂಲಕ ಗೋವಾದ ಕಾಂಗ್ರೆಸ್ ನಾಯಕರ ಜತೆ ಮಾತನಾಡಿ ಅಲ್ಲಿನ ಹೋರಾಟ ಕೈಬಿಡುವಂತೆ ಕ್ರಮ ಕೈಗೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ವಿವಾದ ಬಗೆಹರಿಸಬಹುದು ಎಂದೂ ಯಡಿಯೂರಪ್ಪ ಖಡಕ್ಕಾಗಿ ಹೇಳಿದ್ದಾರೆ.
ಮಂಗಳವಾರ ಸಂಜೆ ಮಹದಾಯಿ ಹೋರಾಟಗಾರರೊಂದಿಗೆ ಮಾತುಕತೆ ವಿಫಲಗೊಂಡ ಬಳಿಕ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಪತ್ರಕ್ಕೆ ಗೋವಾ ಮುಖ್ಯಮಂತ್ರಿಗಳು ಪತ್ರ ಬರೆಯದಿರುವುದು ನಮಗೆ ಸಂಬಂಧಪಡದ ವಿಚಾರ.ಮುಖ್ಯಮಂತ್ರಿಗಳು ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ
ಬರೆದು ಗೋವಾ ಕಾಂಗ್ರೆಸ್ ನಾಯಕರು ಹೋರಾಟ ಹಿಂದೆ ಪಡೆಯುವಂತೆ ಒತ್ತಡ ಹೇರಬೇಕು. ಅಲ್ಲಿಯವರೆಗೆ ಈ ವಿಷಯದಲ್ಲಿ ಮುಂದುವರಿಯುವುದಿಲ್ಲ. ಅಮಿತ್ ಶಾ ಸೇರಿ ದಂತೆ ಯಾರೊಂದಿಗೂ ಮತ್ತೊಮ್ಮೆ ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ಮಹದಾಯಿ ವಿವಾದದ ಚೆಂಡನ್ನು ಕಾಂಗ್ರೆಸ್ ಅಂಗಳಕ್ಕೆ ಎಸೆದರು. ಹೋರಾಟ ಮಾಡುತ್ತಿರುವ ರೈತರ ಮೇಲೆ ಸಹಾನೂಭೂತಿ ಇದೆ. ಇಷ್ಟೆಲ್ಲಾ ರಾದ್ದಾಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆ. ವಾತಾವರಣವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ತಮ್ಮ ಸರ್ಕಾರದ ಮೇಲಾಗುವ ವ್ಯತಿರಿಕ್ತ ಪರಿಣಾಮವನ್ನು ಲೆಕ್ಕಿಸದೆ ಗೋವಾ ಮುಖ್ಯ ಮಂತ್ರಿ ಮನೋಹರ ಪರ‌್ರಿಕರ್ ಕರ್ನಾಟಕ ಪರ ನಿಲುವು ತಳೆದಿದ್ದಾರೆ. ಮಾನವೀಯತೆ ನೆಲೆಯಲ್ಲಿ ನೀರು ಕೊಡುವ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಆದರೆ ಕಾಂಗ್ರೆಸ್‌ಗೆ ಈ ಸಮಸ್ಯೆ ಬಗೆಹರಿಸುವ ಅಗತ್ಯವಿಲ್ಲ. ಗೊಂದಲ ಸೃಷ್ಟಿಸಿ ರಾಜಕೀಯ ಮಾಡುತ್ತಿದ್ದಾರೆ. ರೈತರ ಬಗ್ಗೆ ಇವರಿಗೆ ಕಾಳಜಿ ಇಲ್ಲ. ನನ್ನ ಕೈಲಾದಷ್ಟು ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಮಹದಾಯಿ ಸಮಸ್ಯೆ ಬಿಗಡಾಯಿಸಲು ಮುಖ್ಯಮಂತ್ರಿಗಳೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ 30ವರ್ಷಗಳಿಂದ ಕಳಸಾ-ಬಂಡೂರಿ ವಿಷಯ ನೆನೆಗುದಿಗೆ ಬಿದ್ದಿದೆ. 2007 ರಲ್ಲಿ ಗೋವಾ ಚುನಾವಣೆ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಮಹದಾಯಿ ನೀರು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಇದು ವಿವಾದಕ್ಕೆ ನಾಂದಿಯಾಯಿತು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ನ್ಯಾಯಾಧಿಕರಣ ರಚನೆಯಾಯಿತು. ವಿವಾದವನ್ನು ನ್ಯಾಯಾಧಿಕರಣದ ಹೊರಗೆ ಬಗೆಹರಿಸಿಕೊಳ್ಳುವ ಸಂಬಂಧ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಗಳನ್ನು ನಾವು ಒಪ್ಪಿಸುವುದಾಗಿ, ಅಲ್ಲಿನ ಕಾಂಗ್ರೆಸ್ ನಾಯಕರನ್ನು ಕಾಂಗ್ರೆಸ್ ನಾಯಕರು ಒಪ್ಪಿಸಬೇಕು ಎಂಬುದಾಗಿ ಮನವರಿಕೆ ಮಾಡಿಕೊಡಲಾಯಿತು.
ಆದರೂ, ಕಾಂಗ್ರೆಸ್ ನಾಯಕರು ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಗೋವಾ ಮುಖ್ಯಮಂತ್ರಿಗಳು ಬರೆದಿರುವ ಪತ್ರವನ್ನೇ ನ್ಯಾಯಾಧಿಕರಣದ ಮುಂದೆ ಪ್ರಮಾಣ ಪತ್ರವನ್ನಾಗಿ ಸಲ್ಲಿಸಿ ಮಧ್ಯಂತರ ತೀರ್ಪು ಪಡೆಯುವ ಅವಕಾಶ ಇದೆ. ಕಾಂಗ್ರೆಸ್ ಮಾಡುತ್ತಿರುವ ರಾಜಕೀಯ ಮತ್ತು ಪತ್ರದ ವಿಷಯದ ಬಗ್ಗೆ ಮಹದಾಯಿ ಹೋರಾಟಗಾರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ. ಇದನ್ನು ಒಪ್ಪುವುದು, ಬಿಡುವುದು ಅವರಿಗೆ ಸೇರಿದ್ದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಉಪಸ್ಥಿತರಿದ್ದರು.
