ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆಯೂ ಪ್ರತಿರೋಧ ಒಡ್ಡಿದ್ದು, ಎರಡೂ ಕಡೆಗಳಿಂದಲೂ ಇಂದು ಬೆಳಗ್ಗಿನವರೆಗೂ ಗುಂಡಿನ ದಾಳಿ ನಡೆದಿದೆ.
ಜಮ್ಮು(ಸೆ.15): ಇಲ್ಲಿನ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಪಾಕಿಸ್ತಾನ ಸೇನೆ ಸತತ ಮೂರು ದಿನಗಳಿಂದ ಕದನ ವಿರಾಮ ಉಲ್ಲಂಘಿಸಿ ನಡೆಸುತ್ತಿರುವ ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಬಿಎಸ್‌ಎಫ್ ಯೋಧರೊಬ್ಬರು ಬಲಿಯಾಗಿದ್ದಾರೆ.
ಗುರುವಾರ ಮಧ್ಯರಾತ್ರಿಯಿಂದ ಪಾಕ್ ಸೇನೆ ಮಾರ್ಟರ್ ಶೆಲ್ ಮತ್ತು ಸಣ್ಣ ಶಸ್ತ್ರಾಸ್ತ್ರಗಳಿಂದ ಜಮ್ಮು ಜಿಲ್ಲೆಯ ಗಡಿ ರೇಖೆಯಲ್ಲಿರುವ ಅರ್ನಿಯಾ ಸೆಕ್ಟರ್ ಮೇಲೆ ದಾಳಿ ನಡೆಸಿದೆ. ಈ ವೇಳೆ ಬಿಎಸ್‌ಎಫ್ ಕಾನ್'ಸ್ಟೇಬಲ್ ಉತ್ತರ ಪ್ರದೇಶ ಮೂಲದ ಬಿಜೇಂದರ್ ಬಹದ್ದೂರ್ ಅವರ ಎದೆಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆಯೂ ಪ್ರತಿರೋಧ ಒಡ್ಡಿದ್ದು, ಎರಡೂ ಕಡೆಗಳಿಂದಲೂ ಇಂದು ಬೆಳಗ್ಗಿನವರೆಗೂ ಗುಂಡಿನ ದಾಳಿ ನಡೆದಿದೆ.
ಕಳೆದ ಮೂರು ದಿನಗಳ ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ತಕ್ಕ ತಿರುಗೇಟು ನೀಡಿದ್ದ ಭಾರತೀಯ ಸೈನ್ಯ, ಇಬ್ಬರು ಪಾಕ್ ಸೈನಿಕರನ್ನು ಸದೆಬಡಿದಿತ್ತು. ಅಲ್ಲದೆ, ಈ ದಾಳಿಯಲ್ಲಿ ಗುರುವಾರ ಮೂವರು ಭಾರತದ ಸೇನಾನಿಗಳು ಗಾಯಗೊಂಡಿದ್ದರು.
