ಬೆಂಗಳೂರು[ಸೆ. 22] ನನ್ನ ನೆಚ್ಚಿನ ಗೆಳೆಯ ಹಾಗೂ ಒಡನಾಡಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಅವರ ಅನುಪಸ್ಥಿತಿ ರಾಜ್ಯದಲ್ಲಿ ಎದ್ದು ಕಾಣುತ್ತಿದ್ದು, ನಾನು ಈ ಸ್ಥಾನಕ್ಕೇರಲು ಅನಂತಕುಮಾರ್ ಅವರು ಕಾರಣರಾಗಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾವುಕರಾಗಿ ನುಡಿದರು.

ಬೆಂಗಳೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅನಂತಕುಮಾರ್ ಅವರ 60 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಕಟ್ಟುವಲ್ಲಿ ಅನಂತಕುಮಾರ್ ಅವರ ಪಾತ್ರ ಬಹುದೊಡ್ಡದು. ಅವರು ಈ ಕಾರ್ಯದಲ್ಲಿ ನನ್ನ ಹೆಜ್ಜೆಗೆ ಹೆಜ್ಜೆ ಕೊಟ್ಟು ಪಕ್ಷ ಕಟ್ಟಿದ್ದಾರೆ. ರಾಜ್ಯದಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ ಎಂದರೆ ಅದರ ಹಿಂದೆ ಅನಂತಕುಮಾರ್ ಅವರ ಕೊಡುಗೆ ಸಾಕಷ್ಟಿದೆ ಎಂದು ಬಣ್ಣಿಸಿದರು.

 ಅನಂತ್ ಕುಮಾರ್ ಇರಬೇಕಾಗಿತ್ತು. ಅವರಿಗೆ ದೇಶ ಸೇವೆ ಸಲ್ಲಿಸಲು ಇನ್ನೂ ಅವಕಾಶ ಇತ್ತು. ಆದರೆ ನಾವು ಅವರನ್ನು ಕಳೆದುಕೊಂದಿದ್ದೇವೆ. ಅವರ ಅನುಪಸ್ಥಿತಿ ರಾಜ್ಯದಲ್ಲಿ ಎದ್ದು ಕಾಣುತ್ತಿದೆ ಎಂದು ಯಡಿಯೂರಪ್ಪ ಗದ್ಗದಿತರಾದರು.

ಅನಂತಕುಮಾರ್ ಅವರ ಜನಸೇವೆಯ ನಡೆಯಲ್ಲೇ ನಡೆಯುತ್ತಿರುವ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರ ಕೊಡುಗೆ ಬಹುದೊಡ್ಡದು ಎಂದು ಸಿಎಂ ಯಡಿಯೂರಪ್ಪ ಹೇಳಿದೆರು.

ಅನಂತಕುಮಾರ್ ಅವರು ಕೇಂದ್ರದಲ್ಲಿ ಬಹಳ ವರ್ಷಗಳ ಕಾಲ ಸಚಿವರಾಗಿ ಇದ್ದವರು. ನನಗೆ ಕೇವಲ ಐದು‌ ನಿಮಿಷದಲ್ಲಿ ಅದ್ಭುತವಾಗಿ ಭಾಷಣ ತಯಾರಿಸಿಕೊಡುತ್ತಿದ್ದರು. ಅನಂತ್‌ಕುಮಾರ್ ಅವರ ನೆನಪಿನ ಶಕ್ತಿಗೆ ಸರಿ ಸಾಟಿಯೇ ಇರಲಿಲ್ಲ. ಅವರು ಬೆಂಗಳೂರಿನ ಅಭಿವೃದ್ಧಿಯ ಕನಸು ಕಂಡಿದ್ದರು. ಅದರಂತೆ ಅದನ್ನು ಸಾಕಾರಗೊಳಿಸುವತ್ತಲೂ ಗಮನ ಹರಿಸಿದ್ದರು ಎಂದು ಶ್ಲಾಘಿಸಿದರು.

ಒಂದೇ ವರ್ಷದಲ್ಲಿ ಐವರು ಅತಿರಥ ಮಹಾರಥರನ್ನ ಕಳೆದುಕೊಂಡ ಬಿಜೆಪಿ

ಅನಂತ್ ಕುಮಾರ್ ಅವರಲ್ಲಿ ಹಿಂದಿ ಜ್ಞಾನ ಅದ್ಭುತವಾಗಿತ್ತು. ದೆಹಲಿಯಲ್ಲಿ ತಮ್ಮ ಮನೆಯಲ್ಲಿ ಅನಂತ್ ಕುಮಾರ್ ಒಬ್ಬರೇ ಇದ್ದಿದ್ದು ನಾನು ನೋಡಿಲ್ಲ. ಸದಾ ಯಾರಾದ್ರೂ ನಾಯಕರು, ಅಧಿಕಾರಿಗಳು ಅವರ ಸುತ್ತ ಇರುತ್ತಿದ್ದರು ಎಂದು ಹೇಳಿದ ಯಡಿಯೂರಪ್ಪ, ಮುಂದಿನ ಹೊಸ ಪೀಳಿಗೆಗೆ ಅನಂತಕುಮಾರ್ ಪ್ರತಿಷ್ಠಾನ ದಾರಿ ದೀಪ ಆಗಲಿದೆ ಎಂದರು.

ಅನಂತ್-ಬಿಎಸ್ ವೈ ಜೋಡೆತ್ತುಗಳು:  ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಕಟ್ಟಿದ ಜೋಡೆತ್ತುಗಳೆಂದರೆ ಅನಂತಕುಮಾರ್ ಮತ್ತು ಬಿ.ಎಸ್.ಯಡಿಯೂರಪ್ಪ ಎಂದು ಬಣ್ಣಿಸಿದರು. ರಾಜ್ಯದಲ್ಲಿ ನಾನು ಅಚಾನಕ್ಕಾಗಿ‌ ಮುಖ್ಯಮಂತ್ರಿ ಆದಾಗ‌ ಅನಂತ್ ಕುಮಾರ್‌ ಮನೆಗೆ ಹೋದಾಗ ಅವರು ನನಗೆ ಸ್ಥಿತಃಪ್ರಜ್ಞೆಯನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದರು ಎಂದು ಸ್ಮರಿಸಿದರು.

ಬೆಂಗಳೂರಿನಲ್ಲಿ ಸ್ಥಾಪನೆಯಾಗಿರುವ ಸಿಪೆಟ್ ಸಂಸ್ಥೆಯ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಆರಂಭವಾಗಿದೆ. ಈ ಸಂಸ್ಥೆಗೆ ಅನಂತಕುಮಾರ್ ಅವರ ಹೆಸರನ್ನಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಮಾತನಾಡಿ, ಅನಂತ್ ಕುಮಾರ್ ನನಗಿಂತ ಹಿರಿಯರು. ಆದರೆ, ಅವರು ಎಂದಿಗೂ ನಾನು ಹಿರಿಯವನು ಎಂದು ತೋರಿಸಿಕೊಳ್ಳದೇ ನನ್ನನ್ನು ಗೆಳೆಯನಂತೆ ಕಾಣುತ್ತಿದ್ದರು ಎಂದರು.

 ಪಕ್ಷ ಸಂಘಟನೆ, ಸಮಾಜ‌ ಪರಿವರ್ತನೆ ವಿಚಾರದಲ್ಲಿ ಅವರು ಎಲ್ಲರಿಗೂ ಪ್ರೇರಣೆಯಾಗಿದ್ದರು. ಅಂತಹ ನಾಯಕನ ಜತೆಗೆ ಕೆಲಸ ಮಾಡುವ ಸೌಭಾಗ್ಯ‌ ನಮಗೆ ಸಿಕ್ಕಿತ್ತು ಎಂದು ಹೇಳಿದ ಅವರು, ನಾನು ಮತ್ತು ಅನಂತ್ ಇಬ್ಬರೂ ಅವರು ವಿದ್ಯಾರ್ಥಿ‌ ಪರಿಷತ್ ನಿಂದಲೂ ಪರಿಚಯಸ್ಥರಾಗಿದ್ದೆವು ಎಂದು ಹೇಳಿದರು.

ಅನಂತಕುಮಾರ್ ಬಹಳ ಗಂಭೀರ ಕಾಯಿಲೆಗೆ ತುತ್ತಾಗಿ ನಮ್ಮನ್ನು ಇಷ್ಟು ಬೇಗ ಬಿಟ್ಟು ಹೋಗುತ್ತಾರೆ ಎದು ಕೊಂಡಿರಲಿಲ್ಲ. ಅವರಿಗೆ ಅಷ್ಟು ಗಂಭೀರ ಕಾಯಿಲೆ ಇದ್ದರೂ ಅವರ ಮುಖದ ಚಹರೆಯಲ್ಲಿ ಅದು ಕಾಣುತ್ತಲೇ ಇರಲಿಲ್ಲ ಎಂದು ಹೇಳಿದ ನಡ್ಡಾ ಅನಂತ್ ಅವರ ನಿಧನ ನನಗೆ ವೈಯಕ್ತಿಕವಾಗಿ ಬಹಳ ದುಃಖ ಉಂಟು ಮಾಡಿದೆ ಎಂದರು.

ಇದಾದ ಮೇಲೆ ನಡ್ಡಾ ಅವರು ಅನಂತಕುಮಾರ್ ಪ್ರತಿಷ್ಠಾನಕ್ಕೆ ಚಾಲನೆ ನೀಡಿದರು. ತೇಜಸ್ವಿನಿ ಅನಂತಕುಮಾರ್, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯ ಉಸ್ತುವಾರಿ ಪಿ ಮುರಳೀಧರ ರಾವ್, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ವಿ ಸೋಮಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.