ತುಮಕೂರು[ಆ.22]: ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಿ.ಎಸ್‌.ಯಡಿಯೂರಪ್ಪ ಅವರು ಬುಧವಾರ ಶಿವೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಮಾಡಿ ಆಶೀರ್ವಾದ ಪಡೆದರು.

ನಂತರ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದನ್ನು ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿ ನೋಡಿದ್ದರೆ ಸಂತಸ ಪಡುತ್ತಿದ್ದರು. ಅವರು ಸಂತಸಪಡುವುದನ್ನು ನೋಡುವ ಸೌಭಾಗ್ಯ ನನಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ, ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದಿಂದ ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಅವರ ಆಶೀರ್ವಾದ ನನ್ನ ಮೇಲೆ ಇದೆ, ಹೀಗಾಗಿ ಅವರ ಸ್ಮರಣೆ ಮಾಡುತ್ತಲೇ ನಿತ್ಯ ನಾನು ಕೆಲಸ ಆರಂಭಿಸುವುದಾಗಿ ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ ಅತಿವೃಷ್ಟಿಉಂಟಾಗಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿ ಪರಿಹಾರ ಕೆಲಸ ಕೈಗೊಳ್ಳುವಂತೆ ನೂತನ ಸಚಿವರನ್ನು ನೆರೆಪೀಡಿತ ಜಿಲ್ಲೆಗಳಿಗೆ ಕಳುಹಿಸಿದ್ದೇನೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

50 ಲಕ್ಷದ ಚೆಕ್‌ ಹಸ್ತಾಂತರ!

ನೆರೆ ಸಂತ್ರಸ್ತರಿಗೆ ಸಿದ್ದಗಂಗಾ ಮಠದಿಂದ ನೀಡಲುದ್ದೇಶಿಸಿದ್ದ .50 ಲಕ್ಷದ ಪರಿಹಾರದ ಚೆಕ್‌ ಅನ್ನು ಬುಧವಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಚೆಕ್‌ ಅನ್ನು ಹಸ್ತಾಂತರಿಸಿದರು.