ಸಿಎಂ ಎಚ್.ಡಿ ಕುಮಾರಸ್ವಾಮಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಲಹೆಯೊಂದನ್ನು ನೀಡಿದ್ದಾರೆ. 

ಹಾಸನ :  ನಾವು ಬಿಜೆಪಿಯ 104 ಜನರು ಒಳ್ಳೆ ವಿಪಕ್ಷವಾಗಿ ಕೆಲಸಮಾಡುವ ಆಕಾಂಕ್ಷೆ ಹೊಂದಿದ್ದೇವೆ. ಕಾಂಗ್ರೆಸ್ ನ ಒಳ‌ಜಗಳಕ್ಕೂ ನಮಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಅನಗತ್ಯವಾಗಿ ಈ ವಿಷಯದಲ್ಲಿ ನಮ್ಮನ್ನ ಎಳೆಯಲಾಗಿದೆ ಎಂದು ಹಾಸನದ ಅರಸೀಕೆರೆಯಲ್ಲಿ ಬಿಎಸ್. ಯಡಿಯೂರಪ್ಪ ಹೇಳಿದ್ದಾರೆ. 

ಸಿಎಂ ಆಗಿ 10 ಜನ ಬಿಜೆಪಿ ಶಾಸಕರು ನಮ್ಮ ಜೊತೆಗಿದ್ದಾರೆ. ಇಸ್ಪೀಟ್ ದಂಧೆ, ಜೂಜು ಆಡುವವರು ಹಣ ಕೊಡುತ್ತಿದ್ದಾರೆ ಎಂದು ಹೇಳುತ್ತಾರೆ. ಇಂತಹ ಆರೋಪ ಮಾಡುವವರ ದೌರ್ಬಲ್ಯವನ್ನು ತೋರಿಸುತ್ತೆ. ಅಂತಹ ವಿಚಾರವಿದ್ದರೆ ಅಂತವರನ್ನು ಕಂಡು ಹಿಡಿದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು‌ ಕಿಡಿ ಕಾರಿದ್ದಾರೆ. 

ಈ ರೀತಿ ಬೇಜವಾಬ್ದಾರಿತನದ ಹೇಳಿಕೆ‌ ನೀಡದೆ ಪ್ರಾಮಾಣಿಕವಾಗಿ ಕೆಲಸಮಾಡಿ ಎಂದು ಸಿಎಂಗೆ ಬಿ.ಎಸ್ ಯಡಿಯೂರಪ್ಪ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಿಂತು ಹೋಗಿದೆ. ಬರಗಾಲ ದಿಂದ ಜನರು ತತ್ತರಿಸಿಹೋಗಿದ್ದಾರೆ‌. ನೀರಾವರಿ, ಲೋಕೋಪಯೋಗಿ ಇಲಾಖೆ ಕೆಲಸ‌ ನಿಂತುಹೋಗಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿ ಅಭಿವೃದ್ಧಿ ಬಗ್ಗೆ ಚಿಂತೆ ಮಾಡದೆ ರಾಜಕೀಯ ದೊಂಬರಾಟದಲ್ಲಿ ತೊಡಗಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಬಿಎಸ್ ವೈ ವಾಗ್ದಾಳಿ ನಡೆಸಿದ್ದಾರೆ. 

ಅಲ್ಲದೇ ಆರೋಪ‌ ಪ್ರತ್ಯಾರೋಪದ ಮೂಲಕ ತಮ್ಮ ವೈಫಲ್ಯವನ್ನ ಮುಚ್ಚಿಕೊಳ್ಳಲು ಪ್ರಯತ್ನ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಇದರ ಬದಲು ಸಿಎಂ ಕುಮಾರಸ್ವಾಮಿ ಗೌರವಯುತವಾಗಿ ರಾಜ್ಯದ ಅಭಿವೃದ್ಧಿ ಕೆಲಸಮಾಡಲು ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಪಕ್ಷದ ಗೊಂದಲದಲ್ಲಿ ನಮ್ಮ‌ ಹೆಸರು ಹೇಳೋದು ಅವರಿಗೆ ಶೋಭೆ ತರುವುದಿಲ್ಲ. ಸರ್ಕಾರ ಬೀಳಲಿ ಎಂದು ನಾವು ಜಪ ಮಾಡ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.