Asianet Suvarna News Asianet Suvarna News

ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ BSY ಕೆಂಡಾಮಂಡಲ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ. 

BS Yeddyurappa Slams CM HD Kumaraswamy In Shivamogga
Author
Bengaluru, First Published Jun 27, 2019, 11:06 AM IST

ಶಿವಮೊಗ್ಗ [ಜೂ.27] :  ಮೋದಿಗೆ ಮತ ಹಾಕಿ ನನ್ನ ಬಳಿ ಕೆಲಸ ಮಾಡಿಸಿಕೊಡಿ ಎಂದು ಕೇಳಲು ಬರುತ್ತೀರಿ ಎಂಬ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿಯವರ ಮಾತು ಸರ್ವಾಧಿಕಾರಿ ಧೋರಣೆಯ ನಡೆ. ಇಂತಹ ವರ್ತನೆ ಖಂಡನೀಯ ಎಂದು ವಿಪಕ್ಷ ನಾಯಕ ಬಿ. ಎಸ್‌. ಯಡಿಯೂರಪ್ಪ ಹೇಳಿದರು.

ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಧಿಕಾರದ ಮದದಿಂದ ಅವರು ಇಂತಹ ಮಾತುಗಳನ್ನು ಆಡುತ್ತಿದ್ದಾರೆ. ಇದುವರೆಗೆ ಯಾವ ಮುಖ್ಯಮಂತ್ರಿಯೂ ಇಂತಹ ಮಾತುಗಳನ್ನು ಆಡಿರಲಿಲ್ಲ ಎಂದರು.

ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವ ಭಯ ಎದುರಾಗಿದೆ. ಈ ಭಯದಿಂದ ಮನಸ್ಸಿನ ಸ್ಥಿಮಿತ ಕಳೆದುಕೊಂಡು ವರ್ತಿಸುತ್ತಿದ್ದಾರೆ. ಸೋಲಿನ ಹತಾಶೆಯಿಂದ ಇಂತಹ ಮಾತುಗಳನ್ನು ಆಡುತ್ತಿದ್ದಾರೆ. ಜನ ಇದನ್ನೆಲ್ಲಾ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಗ್ರಾಮವಾಸ್ತವ್ಯದ ಕಡೆಗಳಲ್ಲಿ ನಾವು ಪ್ರತಿಭಟನೆ ಮಾಡುತ್ತಿಲ್ಲ. ಶಾಸಕ ಶಿವನಗೌಡ ಪಾಟೀಲ್‌ ತಮ್ಮ ಭಾಗದ ಜನರ ಅಹವಾಲುಗಳನ್ನು ಮುಖ್ಯಮಂತ್ರಿಗಳಿಗೆ ತಿಳಿಸಲು ಜನರ ಜೊತೆ ಬಂದಿದ್ದಾರೆ. ಅವರನ್ನು ಕರೆದು ಮುಖ್ಯಮಂತ್ರಿಗಳು ಮಾತನಾಡಬೇಕಿತ್ತು. ಬದಲಾಗಿ ಪೊಲೀಸರನ್ನು ಮುಂದಿಟ್ಟುಕೊಂಡು ಲಾಠಿ ಚಾರ್ಜ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ರೌಡಿಯಂತೆ ವರ್ತಿಸಿದ್ದಾರೆ. ಇದೇ ವರ್ತನೆ ಮುಂದುವರಿದರೆ ಹೋರಾಟ ನಡೆಸಲು ಬೀದಿಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಲ್ಲಿದೆ ಅಪ್ಪ ಮಕ್ಕಳ ಪಕ್ಷ?:  ಕೇವಲ 37 ಸ್ಥಾನ ಗೆದ್ದ ನೀವು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದೀರಿ. ಜನರ ಋುಣ ತೀರಿಸಿ. ಅದನ್ನು ಬಿಟ್ಟು ಹೀಗೆಯೇ ಮಾತನಾಡಿದರೆ ಜನ ಬುದ್ಧಿ ಕಲಿಸುತ್ತಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್‌ ಮುಕ್ತ ಕರ್ನಾಟಕ ಆಗುವ ಸಾಧ್ಯತೆ ಇದೆ. ಈಗಲೇ ಅಪ್ಪ -ಮಕ್ಕಳ ಪಕ್ಷವಾದ ಜೆಡಿಎಸ್‌ ಎಲ್ಲಿದೆ ಎಂದು ಹುಡುಕಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ 27ರಲ್ಲಿ ಸೋತು ಹೋಗಿದ್ದೀರಿ ಎಂದು ವ್ಯಂಗ್ಯವಾಡಿದರು.  ಈ ಸೋಲಿನ ಬಳಿಕ ನೈತಿಕತೆ ಇದ್ದಿದ್ದರೆ ನೀವೇ ರಾಜಿನಾಮೆ ನೀಡಬೇಕಿತ್ತು ಎಂದು ಛೇಡಿಸಿದರು.

ದೊಂಬರಾಟ:  ರಾಜ್ಯದಲ್ಲಿ ಭೀಕರ ಬರಗಾಲವಿದೆ. ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜನರ ಸಂಕಷ್ಟಗಳಿಗೆ ಧ್ವನಿಯಾಗುವುದು ಬಿಟ್ಟು ಗ್ರಾಮ ವಾಸ್ಯವ್ಯ ಎಂಬ ಹೆಸರಿನ ರಾಜಕೀಯ ದೊಂಬರಾಟವನ್ನು ಮುಖ್ಯಮಂತ್ರಿಗಳು ನಡೆಸುತ್ತಿದ್ದಾರೆ ಎಂದು ಟೀಕಿಸಿದರು

ಒಂದು ಗ್ರಾಮಕ್ಕೆ ಹೋಗುವ ಬದಲು ನಾಲ್ಕಾರು ಗ್ರಾಮಗಳ ಜನರ ಬವಣೆಯನ್ನು ಕೇಳಿ ಪರಿಹರಿಸಲು ಯತ್ನಿಸಬೇಕು. ಜನರ ಗಮನ ಬೇರೆಡೆ ಸೆಳೆಯಲು ಗ್ರಾಮ ವಾಸ್ಯವ್ಯ ಮಾಡುತ್ತಿದ್ದಾರೆ ಎಂದು ದೂರಿದರು.

Follow Us:
Download App:
  • android
  • ios