ಮಲ್ಲಿಕಾರ್ಜುನ ಸಿದ್ದಣ್ಣವರ, ಕನ್ನಡಪ್ರಭ

ಹುಬ್ಬಳ್ಳಿ[ಮೇ.19]: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ‘ಆಪರೇಷನ್‌ ಕಾಂಗ್ರೆಸ್‌’ಗೂ ಸಿದ್ಧ ಎಂದಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ‘ಆಪರೇಷನ್‌ ಮಾಡಲು ಪೇಶಂಟ್‌ ಬೇಕಲ್ಲ?’ ಎನ್ನುವ ಸವಾಲಿನ ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ, ಮೇ 23ರ ಬಳಿಕ ಖಂಡಿತ ಮೈತ್ರಿ ಸರ್ಕಾರದ ಪಾಲಿನ ತೋಳ (ಬಿಜೆಪಿ ಸರ್ಕಾರ) ಬಂದೇ ಬರುತ್ತೆ ಎಂದು ವಿಶ್ವಾಸದ ನಗೆ ಬೀರಿದ್ದಾರೆ.

ಕುಂದಗೊಳ ಉಪ ಚುನಾವಣೆಯಲ್ಲಿ ಉರಿಬಿಸಿಲು ಲೆಕ್ಕಿಸದೆ ಬಿರುಸಿನ ಪ್ರಚಾರ ನಡೆಸಿದ್ದ ಯಡಿಯೂರಪ್ಪ ಮತದಾನದ ಮುನ್ನಾದಿನವೂ ಹುಬ್ಬಳ್ಳಿಯಲ್ಲಿ ಉಳಿದುಕೊಂಡು ಕ್ಷೇತ್ರದಲ್ಲಿನ ಆಗುಹೋಗುಗಳಿಗೆ ಕಿವಿಯಾಗಿದ್ದರು. ಈ ಗಡಿಬಿಡಿಯ ನಡುವೆಯೇ ‘ಕನ್ನಡಪ್ರಭ’ದ ಜತೆ ಒಂದಿಷ್ಟುರಾಜಕೀಯ ವಿಚಾರಗಳನ್ನು ಹಂಚಿಕೊಂಡ ಅವರು, ‘ಬಿಜೆಪಿ ತಟ್ಟೆಗೆ ಕೈ ಹಾಕಿದರೆ ಹುಷಾರು’ ಎನ್ನುವ ಎಚ್ಚರಿಕೆಯನ್ನು ಸಿದ್ದರಾಮಯ್ಯ ಅವರಿಗೆ ನೀಡಿದರು. ಯಡಿಯೂರಪ್ಪ ಜತೆಗಿನ ಮಾತುಕತೆಯ ಪೂರ್ಣ ಪಾಠ ಇಲ್ಲಿದೆ.

ಪಾಪ ಆಪರೇಷನ್‌ ಮಾಡಲಿ ಬಿಡಿ:

ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯನವರು ‘ಆಪರೇಷನ್‌ ಕಾಂಗ್ರೆಸ್‌’ ಮಾಡುವುದಾಗಿ ಹೇಳಿದ್ದಾರೆ. ಬಹಳ ಸಂತೋಷ, ಅವರ ಪ್ರಯತ್ನದಲ್ಲಿ ಯಾವುದೇ ತಪ್ಪಿಲ್ಲ. ಪಾಪ ಆಪರೇಷನ್‌ ಮಾಡಲಿ ಬಿಡಿ. ಆದರೆ, ಪೇಶಂಟ್‌ (ಶಾಸಕರು) ಬೇಕಲ್ಲ? ಆಪರೇಷನ್‌ ಕಾಂಗ್ರೆಸ್‌ ಮಾಡುವುದು ಒತ್ತಟ್ಟಿಗಿರಲಿ, ಮೊದಲು ಅವರು ತಮ್ಮ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲಿ. ಆಮೇಲೆ ಬೇಕಿದ್ದರೆ, ‘ಆಪರೇಷನ್‌ ಕಾಂಗ್ರೆಸ್‌’ ಮಾಡಲಿ ಎಂದು ಕಾಲೆಳೆದರು.

ಸರ್ಕಾರ ಅಧಿಕಾರಕ್ಕೆ ಬಂದ ಮರುದಿನದಿಂದಲೇ ಜೆಡಿಎಸ್‌-ಕಾಂಗ್ರೆಸ್‌ ಮಂತ್ರಿಗಳ, ಶಾಸಕರ ಕಿತ್ತಾಟ ಶುರುವಾಗಿದೆ. ಸ್ವತಃ ಸಿದ್ದರಾಮಯ್ಯ ‘ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ’ ಎನ್ನುತ್ತಾರೆ. ಬೆಂಬಲಿಗ ಶಾಸಕರಿಂದ ‘ಮುಂದಿನ ಸಿಎಂ ಸಿದ್ದರಾಮಯ್ಯ, ಸಿದ್ದರಾಮಯ್ಯನವರೇ ನಮ್ಮ ಸಿಎಂ’ ಎಂದು ಹೇಳಿಸುವ ಮೂಲಕ ಸರ್ಕಾರದಲ್ಲಿ ಅತಂತ್ರ ವಾತಾವರಣ ಸೃಷ್ಟಿಸುತ್ತಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಶನಿವಾರ ಜೆಡಿಎಸ್‌ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದೇ ಲೇಸು ಎಂದಿದ್ದಾರೆ. ಈ ಎಲ್ಲ ಗೊಂದಲಗಳಿಂದ ರೋಸಿಹೋಗಿರುವ ಉಭಯ ಪಕ್ಷಗಳ ಶಾಸಕರು ಬಿಜೆಪಿಯತ್ತ ಬರುತ್ತಿದ್ದು, ಮೇ 23ರ ನಂತರ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಆಗಲಿದೆ. ಏನಾಗುತ್ತದೆ ಎನ್ನುವುದನ್ನು ಕಾದುನೋಡಿ ಎಂದರು.

ತೋಳ ಖಂಡಿತ ಬರುತ್ತೆ:

ಸಮ್ಮಿಶ್ರ ಸರ್ಕಾರವನ್ನು ಬೀಳಿಸುತ್ತೇವೆ, ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ನಾವು ಎಲ್ಲೂ ಹೇಳಿಲ್ಲ. ಆದರೆ, ಈ ಸರ್ಕಾರ ಆರಂಭದಿಂದಲೂ ಅಸ್ಥಿರತೆ ಎದುರಿಸುತ್ತಲೇ ಬಂದಿದ್ದರಿಂದ ಯಾವಾಗ ಬಿದ್ದು ಹೋಗುತ್ತೋ ಎಂದು ಬೇಸರಿಸಿಕೊಂಡ ಜನತೆಯಲ್ಲಿ ಒಂದು ರೀತಿಯ ತೋಳ ಬಂತು ತೋಳ ಎನ್ನುವ ಶಂಕೆ ಮೂಡಿರಬಹುದು. ಸಮ್ಮಿಶ್ರ ಸರ್ಕಾರದಲ್ಲಿನ ಸ್ನೇಹ ಹಳಸಿದೆ, ಕಚ್ಚಾಟ ತಾರಕಕ್ಕೇರಿದೆ. ಹಾಗಾಗಿ ಮೇ 23 ಬಳಿಕ ಖಂಡಿತ ತೋಳ (ಬಿಜೆಪಿ ಸರ್ಕಾರ) ಬಂದೇ ಬರುತ್ತೆ ಎಂದರು.

ಈ ಸರ್ಕಾರದಲ್ಲಿ ಯಾವುದೇ ಕೆಲಸ- ಕಾರ್ಯಗಳು ಆಗುತ್ತಿಲ್ಲ. ಅಭಿವೃದ್ಧಿಯಂತೂ ಇಲ್ಲವೇ ಇಲ್ಲ. ಎಷ್ಟೋ ಜನ ಕಾಂಗ್ರೆಸ್‌ ಸಚಿವರು, ಶಾಸಕರು ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳುತ್ತಿಲ್ಲ. ತಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಹಿರಂಗವಾಗಿ ಹೇಳುತ್ತಿದ್ದುದರಿಂದ ಕುಮಾರಸ್ವಾಮಿ ಅವರಿಗೇ ಈ ಸರ್ಕಾರ ಎಷ್ಟುದಿನ ಉಳಿಯುತ್ತದೆ ಎನ್ನುವ ನಂಬಿಕೆ ಇಲ್ಲ. ಇನ್ನು ಶಾಸಕರ ಗತಿಯೇನು? ನಾವು ಯಾವುದೇ ಪಕ್ಷದ ಶಾಸಕರನ್ನು ಸೆಳೆಯುತ್ತಿಲ್ಲ, ‘ಆಪರೇಷನ್‌ ಕಮಲ’ದ ಪ್ರಶ್ನೆಯೇ ಇಲ್ಲ. ಬೇರೆ ಪಕ್ಷಗಳಿಂದ ಅವರಾಗಿಯೇ ಬಿಜೆಪಿಗೆ ಬಂದರೆ ಬೇಡ ಎನ್ನಲು ಆಗುವುದಿಲ್ಲ. ಆಗ ಖಂಡಿತ ತೋಳ ಬರುತ್ತೆ, ಜನರ ಆಶಯ ಈಡೇರುತ್ತದೆ ಎಂದು ಭವಿಷ್ಯ ನುಡಿದರು ಯಡಿಯೂರಪ್ಪ.

ಬಸವರಾಜ ಹೊರಟ್ಟಿಅವರು ಹೇಳಿದಂತೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲು ಆಗುವುದಿಲ್ಲ. ಅದನ್ನು ಯಾರೂ ಒಪ್ಪುವುದೂ ಇಲ್ಲ. ಒಂದು ವರ್ಷದ ಹಿಂದೆಯಷ್ಟೇ ರಾಜ್ಯ ಚುನಾವಣೆ ಎದುರಿಸಿದೆ. ಜನತೆ ಮೇಲೆ ಆಗುವ ಹೊರೆ ತಪ್ಪಿಸಲು ಬಿಜೆಪಿ ಸರ್ಕಾರ ರಚಿಸಿ ಉತ್ತಮ ಆಡಳಿತ ನೀಡಲಿದೆ. ಇದು ಯಡಿಯೂರಪ್ಪ, ಬಿಜೆಪಿ ಅವರ ಆಶಯವಲ್ಲ. ಬದಲಾಗಿ ರಾಜ್ಯತ ಜನತೆಯ ಆಶಯ. ಇದನ್ನು ಈ ಬಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.