ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ 75ನೇ ಜನ್ಮದಿನವನ್ನು ‘ರೈತ ನಾಯಕ’ನಾಗಿ ಆಚರಿಸಿಕೊಂಡಿದ್ದಾರೆ.
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ 75ನೇ ಜನ್ಮದಿನವನ್ನು ‘ರೈತ ನಾಯಕ’ನಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ‘ರೈತ ಬಂಧು’ ಎಂದು ಕರೆಸಿಕೊಂಡು ಹೊಸ ಹುರುಪಿನಲ್ಲಿರುವ ಅವರು ‘ನನ್ನ ಮುಂದಿನ ಜೀವನ ರೈತರಿಗೆ ಮುಡಿಪು’ ಎಂದು ಘೋಷಿಸಿದ್ದಾರೆ.
ದಾವಣಗೆರೆಯಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಇಬ್ಬರು ರೈತರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ತಲಾ .50 ಸಾವಿರ ಪರಿಹಾರವನ್ನೂ ವಿತರಿಸಿದ್ದಾರೆ. ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ನಿಮ್ಮೊಂದಿಗೆ ನಾವಿದ್ದೇವೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ರೈತಪರವಾಗಿರುವ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ತರಲಿದ್ದೇವೆ ಎನ್ನುವ ಭರವಸೆ ನೀಡಿದರು. ಇದೇ ವೇಳೆ, ರೈತರಿಗಾಗಿ ನನ್ನ ಮುಂದಿನ ಜೀವನ ಮೀಸಲಿಡುತ್ತೇನೆ ಎನ್ನುವ ಒಕ್ಕಣೆ ಇರುವ ಸಾಂತ್ವನ ಪತ್ರವನ್ನೂ ಒಪ್ಪಿಸಿದರು.
ನಂತರ ಸಮಾವೇಶದಲ್ಲೂ ರೈತರ ಕಲ್ಯಾಣಕ್ಕಾಗಿ ಮುಖ್ಯಮಂತ್ರಿಯಾಗಿ ಹಾಕಿಕೊಳ್ಳಲಿರುವ ಕಾರ್ಯಕ್ರಮಗಳನ್ನು ಬಿಚ್ಚಿಟ್ಟಅವರು, ರೈತರ ಅಭಿವೃದ್ಧಿಯೇ ಬಿಜೆಪಿಯ ಮೂಲಮಂತ್ರ ಎಂದು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಕೃಷಿ, ನೀರಾವರಿ ಯೋಜನೆಗಳಿಗಾಗಿಯೇ ಲಕ್ಷ ಕೋಟಿ ಮೀಸಲಿಡುವ ಹಾಗೂ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತೆ ನೋಡಿಕೊಳ್ಳುವ ಭರವಸೆ ನೀಡಿದರು.
