ಮಗು ಅತ್ತ ಕಾರಣಕ್ಕೆ ಭಾರತೀಯ ಕುಟುಂಬವನ್ನು ವಿಮಾನದಿಂದ ಹೊರದಬ್ಬಿದ ಸಂಸ್ಥೆ! ಬ್ರಿಟಿಷ್ ಏರ್‌ವೇಸ್ ವಿರುದ್ಧ ವಿಮಾನಯಾನ ಸಚಿವರಿಗೆ ದೂರು! bloody Indians ಎಂದು ಮೂದಲಿಸಿದ ಸಿಬ್ಬಂದಿ! ತನಿಖೆಗೆ ಆದೇಶಿಸಿದ ಬ್ರಿಟಿಷ್ ಏರ್‌ವೇಸ್
ನವದೆಹಲಿ(ಆ.9): ಬ್ರಿಟಿಷ್ ಏರ್ ವೇಸ್ ವಿರುದ್ಧ ಮಗು ಅತ್ತಿದ್ದಕ್ಕೆ ಭಾರತೀಯ ಕುಟುಂಬವನ್ನು ವಿಮಾನದಿಂದ ಕೆಳಗಿಳಿಸಿದ ಆರೋಪ ಕೇಳಿ ಬಂದಿದೆ. ಸರ್ಕಾರದ ಹಿರಿಯ ಅಧಿಕಾರಿಯೊಬ್ಬರ ಕುಟುಂಬದ ಜೊತೆ ಸಿಬ್ಬಂದಿ ಈ ರೀತಿ ಅನೂಚಿತ ವರ್ತನೆ ತೋರಿದ್ದಾರೆ ಎನ್ನಲಾಗಿದೆ.
ಟೇಕ್ ಆಫ್ ಸಮಯದಲ್ಲಿ ಮಗು ಅತ್ತಿದ್ದಕ್ಕೆ ವಿಮಾನದಿಂದ ನಮ್ಮನ್ನು ಕೆಳಗಿಳಿಸಿ ವರ್ಣಬೇಧ ತೋರಿ ಅವಮಾನ ಮಾಡಿದ್ದಾರೆ ಎಂದು ಭಾರತೀಯ ಕುಟುಂಬ ಬ್ರಿಟಿಷ್ ಏರ್‌ವೇಸ್ ವಿರುದ್ಧ ಆರೋಪ ಮಾಡಿದ್ದಾರೆ.
ವಿಮಾನ ಟೇಕ್‌ಆಫ್ ಆಗುವ ವೇಳೆಯಲ್ಲಿ ವಿಮಾನದ ಸಿಬ್ಬಂದಿ ಸೀಟ್ ಬೆಲ್ಟ್ ಹಾಕಲು ಸೂಚನೆ ನೀಡಿದರು. ಮಗುವಿಗೆ ಸೀಟ್ ಬೆಲ್ಟ್ ಹಾಕಿದಾಗ ಭಯಬಿದ್ದ ಮಗು ಅಳಲಾರಂಭಿಸಿತು. ಮಗು ಅಳುವುದನ್ನು ನೋಡಿ ವಿಮಾನ ಸಿಬ್ಬಂದಿ ಮಗುವಿಗೆ ಅಳದಂತೆ ಗದರಿಸಿದರು.
ಇದರಿಂದ ಭಯಬಿದ್ದ ಮಗು ಮತ್ತಷ್ಟು ಅಳಲಾರಂಭಿಸಿತು. ಮಗು ಅಳುವುದನ್ನು ನೋಡಿ ಹಿಂದಿನ ಸೀಟ್‌ನಲ್ಲಿದ್ದ ಭಾರತೀಯ ಕುಟುಂಬವೊಂದು ಮಗುವಿಗೆ ಬಿಸ್ಕೆಟ್ ನೀಡಿ ಸಮಾಧಾನ ಪಡಿಸಲು ಪ್ರಯತ್ನಿಸಿದರು. ಟರ್ಮಿನಲ್‌ಗೆ ಮರಳಿದ ವಿಮಾನ ಸೆಕ್ಯೂರಿಟಿಯವರನ್ನು ಕರೆಸಿ ಮಗುವಿನ ಕುಟುಂಬದ ಜೊತೆಗೆ ಮಗುವಿಗೆ ಬಿಸ್ಕೆಟ್ ನೀಡಿದ ಕುಟುಂಬವನ್ನೂ ವಿಮಾನದಿಂದ ಕೆಳಗಿಳಿಸಿದ್ದಾರೆ ಎನ್ನಲಾಗಿದೆ.
ಬ್ರಿಟಿಷ್ ಏರ್‌ವೇಸ್ ಲಂಡನ್-ಬರ್ಲಿನ್ ವಿಮಾನ (BA 8495)ದ ಸಿಬ್ಬಂದಿ ಜುಲೈ 23ರಂದು ಭಾರತೀಯ ಎಂಜಿನಿಯರಿಂಗ್ ಸೇವೆಯ ಅಧಿಕಾರಿ ಅವರ ಕುಟುಂಬದ ಜೊತೆ ಈ ರೀತಿ ಅಮಾನವೀಯವಾಗಿ ವರ್ತಿಸಿದೆ ಎನ್ನಲಾಗಿದೆ. ಅಲ್ಲದೇ ಆ ಅಧಿಕಾರಿ ವಿಮಾನಯಾನ ಸಚಿವ ಸುರೇಶ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಭಾರತೀಯರನ್ನು bloody ಎಂದು ಕರೆದು ಅವಮಾನ ಮಾಡಿದ್ದಾರೆ, ಇದರ ಕುರಿತು ತನಿಖೆ ನಡೆಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಿಟಿಷ್ ಏರ್ ವೇಸ್ ವಕ್ತಾರ, ಸಂಸ್ಥೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ರೀತಿಯ ಬೇಧಭಾವ ಮಾಡುವುದನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.
