ನವದೆಹಲಿ (ಜ. 13): ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ನಿವೃತ್ತ ಐಎಎಸ್‌ ಅಧಿಕಾರಿ ಬ್ರಹ್ಮದತ್‌ ಅವರು ‘ಯೆಸ್‌ ಬ್ಯಾಂಕ್‌’ ಮಂಡಳಿಯ ಅರೆಕಾಲಿಕ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಈ ಬಗ್ಗೆ ಶನಿವಾರ ಪ್ರಕಟಣೆ ಬಿಡುಗಡೆ ಮಾಡಿರುವ ದೇಶದ ನಾಲ್ಕನೇ ಅತಿದೊಡ್ಡ ಖಾಸಗಿ ಬ್ಯಾಂಕ್‌ ಆಗಿರುವ ಯೆಸ್‌ ಬ್ಯಾಂಕ್‌, ‘ಬ್ರಹ್ಮದತ್‌ ಅವರನ್ನು ಯೆಸ್‌ ಬ್ಯಾಂಕ್‌ ಮಂಡಳಿಯ ಅರೆಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಿಕೊಳ್ಳಲು ಭಾರತೀಯ ರಿಜವ್‌ರ್‍ ಬ್ಯಾಂಕ್‌ ಅನುಮತಿ ನೀಡಿದೆ,’ ಎಂದು ತಿಳಿಸಿದೆ.

2013ರಿಂದಲೂ ಸ್ವತಂತ್ರ ನಿರ್ದೇಶಕರಾಗಿ ಬ್ಯಾಂಕ್‌ನ ಮಂಡಳಿಯಲ್ಲಿಯೇ ಬ್ರಹ್ಮದತ್‌ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಯೆಸ್‌ ಬ್ಯಾಂಕ್‌ ಶ್ಲಾಘಿಸಿದೆ. 37 ವರ್ಷ ಐಎಎಸ್‌ ಅಧಿಕಾರಿಯಾಗಿದ್ದ ದತ್‌ ಅವರಿಗೆ, ಕರ್ನಾಟಕ ಸೇರಿದಂತೆ ಕೇಂದ್ರ ಸರ್ಕಾರದಲ್ಲಿಯೂ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವವಿದೆ.